ಗುರುವಾರ , ಮೇ 6, 2021
33 °C

ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ: ಡಿ.ಕೆ. ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಕೊರೊನಾ ವಿಚಾರವಾಗಿ ಸರ್ವಪಕ್ಷ ಸಭೆ ಬಗ್ಗೆ ರಾಜ್ಯಪಾಲರ ಕಚೇರಿಯಿಂದ ಆಹ್ವಾನ ಬಂದಿದ್ದು, ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, 'ಕೊರೋನಾ ಪರಿಸ್ಥಿತಿ ನಿರ್ವಹಣೆ ಸಂಬಂಧ ರಾಜ್ಯ ಸರ್ಕಾರ ಇವತ್ತು ಸಭೆ ನಡೆಸಿದ್ದು, ರಾಜ್ಯಪಾಲರು ನಾಳೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆಗೆ ರಾಜ್ಯಪಾಲರ ಕಚೇರಿಯಿಂದ ಆಹ್ವಾನ ಬಂದಿದ್ದು, ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಇದೇ ಮೊದಲ ಬಾರಿಗೆ ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿದ್ದು, ಮುಂದಿನ ದಿನಗಳಲ್ಲಿ ರಾಜ್ಯಪಾಲರ ಆಳ್ವಿಕೆ ಅಧಿಕೃತವಾಗಿ ಜಾರಿಯಾಗುವ ಲಕ್ಷಣ ಗೋಚರಿಸುತ್ತಿದೆ. ನಾಳೆ ನಾವು ಸಭೆಯಲ್ಲಿ ಭಾಗವಹಿಸುತ್ತೇವೆ' ಎಂದಿದ್ದಾರೆ.

ಮುಂದುವರಿದು, 'ಕೊರೊನಾ ವಾಸ್ತವಾಂಶದ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದು, ನಾಳೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇವೆ. ಕೊರೋನಾ ಲಸಿಕೆ ಪೂರೈಕೆ ಗುತ್ತಿಗೆಯನ್ನು ಕೇವಲ ಎರಡು ಕಂಪನಿಗಳಿಗೆ ಯಾಕೆ ನೀಡಲಾಗಿದೆ? ಆರೋಗ್ಯ ಕ್ಷೇತ್ರಕ್ಕೆ 30 ಸಾವಿರ ಕೋಟಿ ರುಪಾಯಿ ಮೀಸಲಿಡಬೇಕು. ಎಲ್ಲ ಅಭಿವೃದ್ಧಿ ಕೆಲಸ ನಿಲ್ಲಿಸಿ. ಈ ವಿಚಾರದ ಬಗ್ಗೆ ಗಮನ ಹರಿಸಿ. ಎಲ್ಲರಿಗೂ ಆರೋಗ್ಯ ಸೇವೆ ಸಿಗುವಂತೆ ಮಾಡಬೇಕು. ಆದರೆ ಈವರೆಗೂ ಯಾವುದೇ ಸಿದ್ಧತೆ ಆಗಿಲ್ಲ. ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆʼ ಎಂದು ಟೀಕಿಸಿದ್ದಾರೆ.

ಜೊತೆಗೆ, 'ನಾವು ಕಾಂಗ್ರೆಸ್ ಕಚೇರಿಯಲ್ಲಿ ವೈದ್ಯರ ಘಟಕದ ಜತೆ ಚರ್ಚೆ ಮಾಡಿ ಒಂದು ಹೆಲ್ಪ್ ಲೈನ್ ಆರಂಭಿಸಲು ತೀರ್ಮಾನಿಸಿದ್ದೇವೆ. ಅಲ್ಲಿ ಸೋಂಕಿತರಿಗೆ ಮಾರ್ಗದರ್ಶನ ನೀಡಿ ನೆರವಾಗುತ್ತೇವೆ' ಎಂದರು.

'70 ವರ್ಷ ಕಾಂಗ್ರೆಸ್ ಏನು ಮಾಡಿದೆ ಅಂತಾ ಸುಧಾಕರ್ ಕೇಳಿದ್ದಾರೆ. ಅವರು ಕೇವಲ 1 ವರ್ಷದಿಂದ ಮಾತ್ರ ಬಿಜೆಪಿಯಲ್ಲಿದ್ದಾರೆ. ಉಳಿದ ಅವಧಿಯಲ್ಲಾ ಕಾಂಗ್ರೆಸ್ ನಲ್ಲೇ ಇದ್ದರಲ್ಲ. ಅವರನ್ನು ಬೆಳೆಸಿ, ಶಾಸಕರನ್ನಾಗಿ ಮಾಡಿದ್ದು ಕಾಂಗ್ರೆಸ್' ತಿರುಗೇಟು ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು