ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಎಲ್ಲದಕ್ಕೂ ಸಿದ್ಧ: ಡಿಕೆಶಿ ವಿರುದ್ಧದ ಚಾರ್ಜ್‌ಶೀಟ್ ಬಗ್ಗೆ ಸುರೇಶ್‌ ಹೇಳಿಕೆ

Last Updated 26 ಮೇ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಸರ್ಕಾರದ ಒಳಸಂಚು, ಷಡ್ಯಂತ್ರವನ್ನು ಡಿ.ಕೆ. ಶಿವಕುಮಾರ್ ಹಾಗೂ ನಮ್ಮ ಪಕ್ಷದ ನಾಯಕರು ಸಮರ್ಥವಾಗಿ ಎದುರಿಸಲಿದ್ದಾರೆ. ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ’ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಹೇಳಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು,‘ನಾವು ಯಾವುದೇ ಕಾರಣಕ್ಕೂ ಅವರಿಗೆ ಹೆದರುವುದಿಲ್ಲ, ಶರಣಾಗುವುದಿಲ್ಲ. ಸುದೀರ್ಘವಾಗಿ ತನಿಖೆ ನಡೆಯುತ್ತಲೇ ಇದೆ. ಇನ್ನೂ ನಡೆಯಲಿ. ಅದನ್ನು ಎದುರಿಸಲು ನಾವು ಮಾನಸಿಕವಾಗಿ, ದೈಹಿಕವಾಗಿ ಸಮರ್ಥವಾಗಿದ್ದೇವೆ. ಸರ್ಕಾರದವರು ಕೇಸ್ ಆದರೂ ಹಾಕಲಿ, ಜೈಲಿಗಾದರೂ ಹಾಕಲಿ. ನಾವು ಯಾವುದೇ ತಪ್ಪು ಮಾಡಿಲ್ಲ ’ ಎಂದರು.

ಮೋದಿ ಅವರು ಪ್ರಧಾನಿಯಾದ ಬಳಿಕ ತಮ್ಮ ವಿರೋಧಿಗಳು, ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವವರನ್ನು ಯಾವ ರೀತಿ ಹತ್ತಿಕ್ಕಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದು ಕೂಡ ಅದರ ಭಾಗ ಎಂದರು.

‘ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವ ಮುನ್ನ ಶಾಸಕರ ಖರೀದಿ ಪ್ರಕರಣ ನಡೆದಿದೆ. ಆದರೂ ಬಿಜೆಪಿಯವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಹುದ್ದೆ ಮಾರಾಟಕ್ಕಿದೆ ಎಂದಿದ್ದಾರೆ. ಆದರೂ ಈ ಬಗ್ಗೆ ತನಿಖೆ ಇಲ್ಲ. ಈ ವಿಚಾರವಾಗಿ ಸಿಬಿಐ, ಇಡಿ ಯಾಕೆ ಪಾರದರ್ಶಕವಾಗಿ ತನಿಖೆ ಮಾಡಿಲ್ಲ’ ಎಂದು ಪ್ರಶ್ನಿಸಿದರು.

‘ನನ್ನ ವಿರುದ್ಧ ಎಲ್ಲ ಅಸ್ತ್ರ ಪ್ರಯೋಗ’
‘ನಾನು ಪ್ರತಿ ವರ್ಷ ನನ್ನ ಆದಾಯ ತೆರಿಗೆ ವಿವರ ಸಲ್ಲಿಸುತ್ತಿದ್ದೇನೆ. ಈ ಪ್ರಕರಣ ಸಿಬಿಐಗೆ ನೀಡುವ ಪ್ರಕರಣವಲ್ಲ ಎಂದು ಅಡ್ವೊಕೇಟ್ ಜನರಲ್ ಅವರೇ ಹೇಳಿದ್ದರೂ ಬಿಜೆಪಿ ಸರ್ಕಾರ ನನ್ನ ಪ್ರಕರಣವನ್ನು ಸಿಬಿಐಗೆ ನೀಡಿದೆ. ಅವರು ತಮ್ಮ ಬಳಿ ಇರುವ ಎಲ್ಲ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದಾರೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

‘ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ.ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನನ್ನನ್ನು ಬಂಧಿಸಿದ 60 ದಿನಗಳ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಅವರು ಸರಿಯಾದ ಸಮಯಕ್ಕೆ ಆರೋಪಪಟ್ಟಿ ಸಲ್ಲಿಸದ ಕಾರಣ ನನಗೆ ಜಾಮೀನು ದೊರೆತಿತ್ತು. ಆದರೆ ಮೂರು ವರ್ಷಗಳ ನಂತರ ಸಲ್ಲಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT