ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸ್ಮಶಾನ ಬೇಡ, ಆಮ್ಲಜನಕ ಕೊಡಿ'- ‘ಹಾಸಿಗೆಗಳ ಮಾರಾಟ ನಿಲ್ಲಿಸಿ’: ಟ್ವಿಟರ್ ಅಭಿಯಾನ

Last Updated 24 ಏಪ್ರಿಲ್ 2021, 12:29 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಮಶಾನ ಬೇಡ, ಆಮ್ಲಜನಕ ಕೊಡಿ’, ‘ಹಾಸಿಗೆಗಳ ಮಾರಾಟ ನಿಲ್ಲಿಸಿ’, ‘ಆಮ್ಲಜನಕ ಪೂರೈಕೆ ವ್ಯವಸ್ಥೆಯುಳ್ಳ ಐಸಿಯು ಹಾಸಿಗೆಗಳನ್ನು ಒದಗಿಸಿ’...‌

ಸಾರ್ವಜನಿಕರು ಶನಿವಾರ ಟ್ವಿಟರ್‌ನಲ್ಲಿ ರಾಜ್ಯ ಸರ್ಕಾರದ ಎದುರಿಗಿಟ್ಟ ಬೇಡಿಕೆಗಳಿವು.

ರಾಜ್ಯದಲ್ಲಿ ಕೋವಿಡ್‌ ಬಿಕ್ಕಟ್ಟು ಉಲ್ಬಣಿಸಿದ್ದು ದ್ರವೀಕೃತ ವೈದ್ಯಕೀಯ ಆಮ್ಲಜನಕ, ರೆಮ್‌ಡಿಸಿವಿರ್‌ ಚುಚ್ಚುಮದ್ದು ಹಾಗೂ ಆಮ್ಲಜನಕ ಪೂರೈಕೆ ವ್ಯವಸ್ಥೆಯುಳ್ಳ ಐಸಿಯು ಹಾಸಿಗೆಗಳ ಅಭಾವ ಸೃಷ್ಟಿಯಾಗಿದೆ. ಸರ್ಕಾರ ಇದನ್ನು ಒಪ್ಪುತ್ತಿಲ್ಲ. ಸಮಸ್ಯೆಯ ಗಂಭೀರತೆಯನ್ನು ಅರಿತುಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಶನಿವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಟ್ವಿಟರ್‌ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ಈ ಅವಧಿಯಲ್ಲಿ ನೂರಾರು ಮಂದಿ #DemandEverydayReport, #Implement_Citizen's_charter, #oxygenbedslekkakodi ಎಂಬ ಟ್ಯಾಗ್‌ನಲ್ಲಿ ಟ್ವೀಟ್‌ ಹಾಗೂ ಮರುಟ್ವೀಟ್‌ ಮಾಡಿ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.

‘ಕೋವಿಡ್‌ನಿಂದ ಜನ ಬೀದಿಯಲ್ಲೇ ಪ್ರಾಣ ಬಿಡುತ್ತಿದ್ದಾರೆ. ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಮ್ಲಜನಕ ಮತ್ತು ಹಾಸಿಗೆಗಳ ವ್ಯವಸ್ಥೆ ಮಾಡುವ ಬದಲು ಸರ್ಕಾರ ಸ್ಮಶಾನಕ್ಕೆ ಜಾಗ ಒದಗಿಸಲು ಹೊರಟಿದೆ. ಇಂತಹ ಮೂರ್ಖ ರಾಜಕಾರಣಿಗಳಿಗೆ ಧಿಕ್ಕಾರ’ ಎಂದು ಗಜುಸಂಕೇತ್‌ ಪಿ.ರಾವ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ. ಇದನ್ನು ಸಚಿವ ಆರ್‌.ಅಶೋಕ್‌ ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಟ್ಯಾಗ್‌ ಮಾಡಿದ್ದಾರೆ.

‘ಮಂದಿರ, ಮಸೀದಿ ಸಾಕು, ಆಸ್ಪತ್ರೆ ಕಟ್ಟಿಸಿ ಜನಸಾಮಾನ್ಯರ ಪ್ರಾಣ ಉಳಿಸಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ’ ಎಂದು ನಳಿನಿಗೌಡ ರೈತ ಸಂಘ ಎಂಬುವರು ಟ್ವೀಟ್‌ ಮಾಡಿದ್ದಾರೆ.

‘ಕೋವಿಶೀಲ್ಡ್‌ ಲಸಿಕೆ ದರ ನೆರೆದ ಬಾಂಗ್ಲಾದೇಶಕ್ಕಿಂತಲೂ ಭಾರತದಲ್ಲಿ ದುಪ್ಪಟ್ಟಾಗಿದೆ. ಲಸಿಕೆ ಉಚಿತವಾಗಿ ನೀಡಿ. ಆಮ್ಲಜನಕವನ್ನೂ ಒದಗಿಸಿ’ ಎಂದು ಸೋಮಶೇಖರ್‌ ಚಲ್ಯ ಒತ್ತಾಯಿಸಿದ್ದಾರೆ.

‘ಪರಿಸ್ಥಿತಿ ಕೈಮೀರುತ್ತಿದೆ. ಇಂತಹ ಸಮಯದಲ್ಲಿ ಜನರಿಗೆ ಧೈರ್ಯ ತುಂಬಿ ಅವರ ನೆರವಿಗೆ ನಿಲ್ಲಬೇಕಿದ್ದ ಜನಪ್ರತಿನಿಧಿಗಳು ಎಲ್ಲಿ ಮಾಯವಾಗಿದ್ದಾರೆ’ ಎಂದು ಅನೇಕರು ಪ್ರಶ್ನಿಸಿದ್ದಾರೆ.

‘ಪ್ರತಿದಿನ ಆಮ್ಲಜನಕ ವ್ಯವಸ್ಥೆಯುಳ್ಳ ಹಾಸಿಗೆಗಳ ಲೆಕ್ಕ ನೀಡಿ. ಕಂಠೀರವ ಕ್ರೀಡಾಂಗಣ ಹಾಗೂ ಇತರ ಸ್ಥಳಗಳನ್ನು ಕೋವಿಡ್‌ ಕೇಂದ್ರಗಳನ್ನಾಗಿ ಪರಿವರ್ತಿಸಿ. ಜನರ ಹಕ್ಕೊತ್ತಾಯ ಪಟ್ಟಿ ಜಾರಿಗೊಳಿಸಿ’ ಎಂದು ಹಲವರು ಸಲಹೆ ನೀಡಿದ್ದಾರೆ.

‘ಆರೋಗ್ಯ ಇಲಾಖೆಯ 30 ಸಾವಿರ ಗುತ್ತಿಗೆ ಕಾರ್ಮಿಕರ ಶೋಷಣೆ ನಿಲ್ಲಿಸಿ, ಹೆಚ್ಚುವರಿ ಸಿಬ್ಬಂದಿಯನ್ನು ಕೂಡಲೇ ನೇಮಿಸಿ’ ಎಂದೂ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT