ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಬಿ.ಸಿ. ಪಾಟೀಲ್‌ ನಿಜವಾದ ಊಸರವಳ್ಳಿ: ಕೌರವನಿಗೆ ಮಹೇಶ್‌ ಚಾಟಿ

Last Updated 8 ಸೆಪ್ಟೆಂಬರ್ 2020, 11:07 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್‌ ಮಾಫಿಯಾ ಕುರಿತಂತೆ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಬೇಕಾಗಿಲ್ಲ ಎಂಬ ಉಡಾಫೆಯ ಪ್ರತಿಕ್ರಿಯೆ ನೀಡುತ್ತಿರುವ ಸಚಿವ ಬಿ.ಸಿ ಪಾಟೀಲ್‌ ನಿಜವಾದ ಊಸರವಳ್ಳಿ ಎಂದು ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಹೇಳಿದ್ದಾರೆ.

ಮಂಗಳವಾರ ಸರಣಿ ಟ್ವೀಟ್‌ ಮಾಡಿರುವ ಅವರು ಬಿ.ಸಿ ಪಾಟೀಲ್‌ ಅವರಿಗೆ ಚಾಟಿ ಬೀಸಿದ್ದಾರೆ

ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾ ಮಟ್ಟಹಾಕಲು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಿಸಿ ಮುಟ್ಟಿಸಿದ್ದರಿಂದಲೇ ದೇಶಾಂತರ ಓಡಿಹೋಗಿ ತಲೆಮರೆಸಿಕೊಂಡಿದ್ದವರು ಜಾಮೀನು ಪಡೆದು ಬಂದಿದ್ದು, ಇದಕ್ಕೆ ತೆರೆಮರೆಯಲ್ಲಿ ನಿಂತು ವ್ಯವಸ್ಥೆ ಮಾಡಿದವರು ಯಾರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಅಧಿಕಾರದ ಆಸೆಗಾಗಿ ಬಣ್ಣ, ವೇಷ ಬದಲಿಸುವ ಜಾಯಮಾನ ಕೃಷಿ ಸಚಿವರಿಗೆ ಕರಗತವಾಗಿದೆ. ಉಸರವಳ್ಳಿಯನ್ನು ನಾಚಿಸುವಂತೆ ನಾಲಗೆಯ ಬಣ್ಣವನ್ನೂ ಬದಲಿಸುವ ಇಂತಹ ಬೃಹಸ್ಪತಿಗಳು ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.

ಪೂರ್ವಾಶ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಇದ್ದ ಪಾಟೀಲರಿಗೆ ಇಂತಹ ಮಾಫಿಯಾಗಳ ಬಗ್ಗೆ ಅರಿವಿಲ್ಲ ಎಂದರೆ ಅವರು ಪಾಲಿಸಿದ ವೃತ್ತಿನಿಷ್ಠೆ ಏನೆಂಬುದು ನಗೆಪಾಟಲಿನ ಸಂಗತಿ ಅಷ್ಟೇ ಅಲ್ಲ, ಎಂತೆಂತಹ ಊಸರವಳ್ಳಿಗಳು ಪೊಲೀಸ್ ಇಲಾಖೆಯಲ್ಲಿ ಇದ್ದರು ಎಂಬ ಬಗ್ಗೆ ಮರುಕವಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಖಾವಿ ತೊಟ್ಟ ಮಾರ್ಜಾಲ ಸಂನ್ಯಾಸಿಯಂತೆ ಖಾಕಿ ಕಳಚಿ ಖಾದಿ ಧರಿಸಿದ ನಂತರ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಬೇಕಾಗಿಲ್ಲ ಎಂಬ ಉಡಾಫೆಯ ಪ್ರತಿಕ್ರಿಯೆ ನೀಡುತ್ತಿರುವ ಪಾಟೀಲರು ನಿಜವಾದ ಊಸರವಳ್ಳಿಯಾಗಿದ್ದಾರೆ.

ರಾಜ್ಯದ ಕೃಷಿಕರು ಯೂರಿಯಾ ಸೇರಿದಂತೆ ರಸಗೊಬ್ಬರ ಕೊರತೆ ಎದುರಿಸುತ್ತಿರುವುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂಬುದನ್ನು ತಮ್ಮ ಹೇಳಿಕೆಯಲ್ಲಿ ಒಪ್ಪಿಕೊಂಡಿರುವ ಪಾಟೀಲರು ಎಷ್ಟು ಮಂದಿ ವಿರುದ್ಧ ಕೇಸು ಜಡಿದಿದ್ದಾರೆ? ಎಂಬ ವಿವರವನ್ನು ಜನತೆಯ ಮುಂದಿಡಲಿ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT