ಸೋಮವಾರ, ಆಗಸ್ಟ್ 15, 2022
27 °C
ಉದ್ಯೋಗ ಖಾತ್ರಿಯಲ್ಲಿ ಎನ್‌.ಎಂ.ಎಂ.ಎಸ್‌. ಜಾರಿ; ಕೆಲಸಕ್ಕೆ ಕಾರ್ಮಿಕರ ನಿರಾಸಕ್ತಿ

ಒಳನೋಟ| ನರೇಗಾ ಕಾರ್ಮಿಕರಿಗೆ ಇ–ಹಾಜರಾತಿ ಕಿರಿಕಿರಿ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯಲ್ಲಿ ‘ನ್ಯಾಷನಲ್ ಮೊಬೈಲ್ ಮಾನಿಟ ರಿಂಗ್ ಸಿಸ್ಟಂ’ (ಎನ್‌.ಎಂ.ಎಂ.ಎಸ್‌) ಆ್ಯಪ್‌ ಮೂಲಕ ಇ–ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಕಾರ್ಮಿ ಕರು ಯೋಜನೆಯಡಿ ಕೆಲಸ ನಿರ್ವಹಿ ಸಲು ನಿರಾಸಕ್ತಿ ತೋರಿಸುತ್ತಿದ್ದಾರೆ.

ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಎನ್‌.ಎಂ.ಎಂ.ಎಸ್‌. ಆ್ಯಪ್‌ನಿಂದ ಕಾರ್ಮಿಕರ ಇ–ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಕೆಲಸ ಮಾಡುವ ಸಮಯ ನಿಗದಿಗೊಳಿಸಲಾಗಿದೆ. ಹೊಸ ನಿಯಮದ ಪ್ರಕಾರ, ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾರ್ಮಿಕರ ಇ–ಹಾಜರಾತಿ ಪಡೆಯಲು ಬೆಳಿಗ್ಗೆ 10ರಿಂದ 11 ಹಾಗೂ ಮಧ್ಯಾಹ್ನ 2ರಿಂದ 5ರ ನಡುವಿನ ಸಮಯವನ್ನು ನಿಗದಿ ಮಾಡಲಾಗಿದೆ.

ಜಿಪಿಎಸ್‌ ನೆರವಿನಿಂದ ಕಾಮಗಾರಿ ಸ್ಥಳದ ಛಾಯಾಚಿತ್ರ ತೆಗೆದು ಅಪ್‌ಲೋಡ್‌ ಮಾಡಬೇಕು. ಇದರಲ್ಲಿ ಸ್ವಲ್ಪ ಏರುಪೇರಾದರೂ ಆ ದಿನದ ಕೂಲಿ ಕಾರ್ಮಿಕರಿಗೆ ಪಾವತಿಯಾಗುವುದಿಲ್ಲ. ಇದೇ ಈಗ ಕಾರ್ಮಿಕರಿಗೆ ಕಿರಿಕಿರಿ ಅನಿಸಿದೆ. ಪ್ರಕ್ರಿಯೆ ಗಳಿಂದ ಬೇಸತ್ತು ಕೆಲಸದಿಂದ ದೂರ
ಉಳಿಯುತ್ತಿದ್ದಾರೆ.

ಅದರಲ್ಲೂ ಅತಿ ಹೆಚ್ಚು ಬಿಸಿಲು ಇರುವ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಬಯಲು ಸೀಮೆಯ ಜಿಲ್ಲೆಗಳಲ್ಲಿ ಇದರ ಬಿಸಿ ಹೆಚ್ಚಿನ ಪ್ರಮಾಣದಲ್ಲಿ ತಟ್ಟಿದೆ. ರಾಜ್ಯದ ಇತರೆ ಕಡೆಗಳಲ್ಲಿಯೂ ಇದರ ಪ್ರಭಾವ ಕಂಡು ಬಂದಿದೆ. ಚಾಮರಾಜ ನಗರದಲ್ಲೂ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಹೊಸ ನಿಯಮ ವಿರೋಧಿಸಿ ರಾಜ್ಯದಾದ್ಯಂತ ಕಾರ್ಮಿಕ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಆಯಾ ಜಿಲ್ಲಾ ಪಂಚಾಯಿತಿಗಳು ಕೂಡ ಸರ್ಕಾರಕ್ಕೆ ಮಾಹಿತಿ ರವಾನಿಸಿವೆ. ಆದರೆ, ಸರ್ಕಾರ ಇದುವರೆಗೆ ಕಿವಿಗೊಟ್ಟಿಲ್ಲ. ಪರಿಣಾಮ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ.

ನರೇಗಾ ಯೋಜನೆಯಡಿ ಶೇ 50 ರಿಂದ 60ರಷ್ಟು ಕಾಮಗಾರಿ ಏಪ್ರಿಲ್‌ ನಿಂದ ಜೂನ್‌ವರೆಗೆ ಕೈಗೆತ್ತಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ ಬಿಸಿಲು ಇರುವುದರಿಂದ ಕೆರೆ, ಕಟ್ಟೆಗಳು ಬತ್ತಿಹೋಗಿರುತ್ತವೆ. ಹೂಳು ತೆಗೆಯುವುದು ಸುಲಭ ಎಂಬ ಕಾರಣಕ್ಕಾಗಿ ವರ್ಷದ ಹೆಚ್ಚಿನ ಕೆಲಸ ಈ ಅವಧಿಯಲ್ಲೇ ನಡೆಯುತ್ತದೆ. ಆದರೆ, ಈ ವರ್ಷ ನಿರಾಶಾದಾಯಕವಾಗಿದೆ. ವರ್ಷಕ್ಕೆ ಸರಾಸರಿ 12ರಿಂದ 13 ಕೋಟಿ ಮಾನವ ದಿನಗಳು ಸೃಜನೆಯಾಗುತ್ತವೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೆ 3 ಕೋಟಿ ಮಾನವ ದಿನಗಳಷ್ಟೇ ಸೃಜನೆಯಾಗಿದ್ದು, ಶೇ 25ರಷ್ಟೇ ಪ್ರಗತಿ ಸಾಧ್ಯವಾಗಿದೆ.

ಅತಿ ಹೆಚ್ಚು ಬಿಸಿಲಿರುವ ಜಿಲ್ಲೆಗಳಲ್ಲಿ ಈ ಹಿಂದೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ಕೆಲಸ ನಿರ್ವಹಿಸಲು ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಬಿಸಿಲುನೆತ್ತಿಗೇರುತ್ತಿದ್ದಂತೆ ಅವರು ಕೆಲಸ ಮುಗಿಸಿಕೊಂಡು ಮನೆ ಸೇರುತ್ತಿದ್ದರು. ಆದರೆ, ಬದಲಾದ ಸಮಯ ಬೇಸಿಗೆಯಲ್ಲಿ ಪ್ರತಿ
ಕೂಲ ಆಗಿರುವುದರಿಂದ ಕಾರ್ಮಿಕರು ಕೆಲಸದ ಕಡೆಗೆ ಮುಖ ಮಾಡುತ್ತಿಲ್ಲ.

‘ಪಾರದರ್ಶಕತೆ ತರಬೇಕು ಎನ್ನುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಎನ್‌.ಎಂ.ಎಂ.ಎಸ್‌. ಜಾರಿಗೆ ತಂದಿದೆ. ಆದರೆ, ಬಿಸಿಲು ಹೆಚ್ಚಿರುವ ಜಿಲ್ಲೆಗಳ ಕಾರ್ಮಿಕರಿಗೆ ಇದರಿಂದ ಬಹಳ ಸಮಸ್ಯೆಯಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಕೆಂಡದಂತಹ ಬಿಸಿಲಿನಲ್ಲಿ ಕೆಲಸ ಮಾಡುವಾಗ ಆಯಾಸ, ಬಳಲಿಕೆ, ಆರೋಗ್ಯ ಸಮಸ್ಯೆಯಿಂದ ಮೂರ್ನಾಲ್ಕು ಕಾರ್ಮಿಕರು ಮೃತಪಟ್ಟಿದ್ದಾರೆ. ಸಹಜವಾಗಿಯೇ ಕಾರ್ಮಿಕರು ಆತಂಕದಲ್ಲಿದ್ದಾರೆ. ಯೋಜನೆಯಿಂದ ದೂರ ಉಳಿಯಲು ಇದೂ ಕಾರಣ. ಬೇಸಿಗೆಯಲ್ಲಾದರೂ ನಿಯಮದಲ್ಲಿ ಬದಲಾವಣೆ ತರುವುದು ಸೂಕ್ತ’ ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳು.

‘ಸ್ಥಳೀಯವಾಗಿ ಸಂಪನ್ಮೂಲ ಸೃಷ್ಟಿಸಿ, ಸ್ಥಳೀಯರಿಗೆ ಉದ್ಯೋಗ ಕೊಟ್ಟು ವಲಸೆ
ತಡೆಯುವುದು ನರೇಗಾ ಮುಖ್ಯ ಉದ್ದೇಶ. ಆದರೆ, ‘ಸೋಷಿಯಲ್‌ ಸೆಕ್ಯೂರಿಟಿ’ ಮತ್ತು ‘ಕ್ವಾಲಿಟಿ ವರ್ಕ್‌’ ಒಟ್ಟಿಗೆ ಮಾಡಲು ಸಾಧ್ಯವಾಗುವುದಿಲ್ಲ. ಈ ಯೋಜನೆಯಡಿ 50 ವರ್ಷ ಮೇಲಿನವರೆಲ್ಲ ಕೆಲಸ ಮಾಡುತ್ತಾರೆ. ಶ್ರಮದಾಯಕ ಕೆಲಸ ಇರುವುದರಿಂದ ಕಟ್ಟುಪಾಡು ವಿಧಿಸಿದರೆ ಕಷ್ಟವಾಗುತ್ತದೆ’ ಎಂದು ತಿಳಿಸಿದರು.

***

ಉರಿ ಬಿಸ್ಲಾಗ ಮನ್ಯಾಗ ಕೂರಕ್ಕ ಆಗಲ್ಲ. ಬೆಂಕಿ ಉಗುಳೋ ಬಿಸ್ಲಾಗ ಕೆಲ್ಸ ಮಾಡ್ಲಾಕ ಆಗ್ತದ್ಯಾನರಿ. ಬೆಳ್ಗಿ, ಸಂಜಿ ಹೊತ್ತು ಭಾಳ್‌ ಉತ್ಮ.
–ಹುಲುಗಪ್ಪ, ನರೇಗಾ ಕಾರ್ಮಿಕ, ವಿಜಯನಗರ

 

***

ದಿನಕ್ಕೆ ಎರಡು ಬಾರಿ ಇ-ಹಾಜರಾತಿ ಪಡೆಯುವ ನಿಯಮ ರದ್ದುಗೊಳಿಸಿ, ಈ ಹಿಂದಿನಂತೆ ನಿರ್ದಿಷ್ಟ ಅಳತೆಯ ಕೆಲಸ ಮಾಡಲು ಬಿಡಬೇಕು.
–ಭಾಸ್ಕರ್‌, ಕಾರ್ಮಿಕ ಮುಖಂಡ

 

***

ಇ–ಹಾಜರಾತಿ ನಿಯಮ ಜಾರಿಗೆ ತಂದ ಆರಂಭದಲ್ಲಿ ಕಾರ್ಮಿಕರು ಕೆಲಸಕ್ಕೆ ನಿರಾಸಕ್ತಿ ತೋರಿಸಿದ್ದರು. ಈಗ ಎಲ್ಲ ಕಡೆ ಸುಧಾರಣೆ ಆಗುತ್ತಿದೆ.

-ಎಲ್‌.ಕೆ. ಅತೀಕ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರ್‌.ಡಿ.ಪಿ.ಆರ್‌.

ಇವುಗಳನ್ನೂ ಓದಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು