ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ವಿದ್ಯುತ್‌ ಬಿಲ್‌ ಬಾಕಿ ಶೀಘ್ರ ಪಾವತಿ: ಕೆ.ಎಸ್‌. ಈಶ್ವರಪ್ಪ

₹ 4,229 ಕೋಟಿ ಬಿಲ್‌ ಬಾಕಿ
Last Updated 6 ಜನವರಿ 2022, 20:06 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರು ಸರಬರಾಜು ಮತ್ತು ಬೀದಿ ದೀಪಗಳಿಗೆ ಬಳಸಿರುವ ವಿದ್ಯುತ್‌ ಬಾಬ್ತು ಗ್ರಾಮ ಪಂಚಾಯಿತಿಗಳು ವಿದ್ಯುತ್‌ ಸರಬರಾಜು ಕಂಪನಿಗಳಿಗೆ (ಎಸ್ಕಾಂ) ಉಳಿಸಿಕೊಂಡಿರುವ ₹ 4,229 ಕೋಟಿ ಬಾಕಿಯನ್ನು ಪಾವತಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಗ್ರಾಮ ಪಂಚಾಯಿತಿಗಳಿಂದ ಎಸ್ಕಾಂಗಳಿಗೆ ನೇರ ವಿದ್ಯುತ್‌ ಬಿಲ್‌ ಪಾವತಿಗಾಗಿ ರೂಪಿಸಿರುವ ‘ಇ–ಬೆಳಕು’ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾಮಗಾರಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ರೂಪಿಸಿರುವ ‘ಗಾಂಧಿ ಸಾಕ್ಷಿ ಕಾಯಕ 2.0’ ತಂತ್ರಾಂಶಗಳಿಗೆ ಗುರುವಾರ ಚಾಲನೆ ನೀಡಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

2017ರಿಂದಲೂ ಗ್ರಾಮ ಪಂಚಾಯಿತಿಗಳಿಂದ ವಿದ್ಯುತ್‌ ಬಿಲ್‌ ಬಾಕಿ ಉಳಿದಿದೆ. ರಾಜ್ಯದ ವಿವಿಧ ಎಸ್ಕಾಂಗಳಿಗೆ ₹ 3,518.05 ಕೋಟಿ ವಿದ್ಯುತ್‌ ಬಿಲ್‌ ಮತ್ತು ₹ 711.55 ಕೋಟಿ ಬಡ್ಡಿ ಪಾವತಿಸಬೇಕಿದೆ. ಈ ವಿಷಯವನ್ನು ಆದಷ್ಟು ಬೇಗ ಇತ್ಯರ್ಥಪಡಿಸಲಾಗುವುದು. ಅಗತ್ಯ ಕಂಡುಬಂದರೆ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರ ಜತೆಗೆ ಸಭೆ ನಡೆಸಿ ಒಂದು ಬಾರಿ ತೀರುವಳಿಗೆ ಸೂತ್ರ ರೂಪಿಸಲಾಗುವುದು ಎಂದರು.

ಭವಿಷ್ಯದಲ್ಲಿ ಈ ಸಮಸ್ಯೆ ಮರುಕಳಿಸದಂತೆ ತಡೆಯಲಾಗುವುದು. ಪ್ರತಿ ತಿಂಗಳು ಆಯಾ ಗ್ರಾಮ ಪಂಚಾಯಿತಿಗಳು ಬಳಕೆ ಮಾಡುವ ವಿದ್ಯುತ್‌ನ ಪ್ರಮಾಣಕ್ಕೆ ಅನುಗುಣವಾಗಿ ಪಂಚಾಯಿತಿಗಳ ‘ಎಸ್ಕ್ರೋ’ ಖಾತೆಯಿಂದ ಇ–ಬೆಳಕು ತಂತ್ರಾಂಶದ ಮೂಲಕ ಎಸ್ಕಾಂಗಳಿಗೆ ಪಾವತಿಯಾಗುತ್ತದೆ. ಇದರಿಂದಾಗಿ ವಿದ್ಯುತ್‌ ಬಿಲ್‌ ಮೊತ್ತ ಬಾಕಿ ಉಳಿಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ 1,378 ಗ್ರಾಮ ಪಂಚಾಯಿತಿಗಳಲ್ಲಿ ತಕ್ಷಣದಿಂದಲೇ ಇ–ಬೆಳಕು ತಂತ್ರಾಂಶದ ಬಳಕೆ ಅನುಷ್ಠಾನಕ್ಕೆ ಬರಲಿದೆ. ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಎರಡು ತಿಂಗಳೊಳಗೆ ಇ–ಬೆಳಕು ತಂತ್ರಾಂಶ ಬಳಕೆಗೆ ಬರಲಿದೆ ಎಂದರು.

ಪಾರದರ್ಶಕತೆಗೆ ಒತ್ತು: ಈ ಹಿಂದೆ ಬಳಕೆಗೆ ತಂದಿದ್ದ ‘ಗಾಂಧಿ ಸಾಕ್ಷಿ ಕಾಯಕ’ ತಂತ್ರಾಂಶದಲ್ಲಿನ ಲೋಪಗಳನ್ನು ಸರಿಪಡಿಸಿ, ‘ಗಾಂಧಿ ಸಾಕ್ಷಿ ಕಾಯಕ–2.0’ ತಂತ್ರಾಂಶ ರೂಪಿಸಲಾಗಿದೆ. ಈ ತಂತ್ರಾಂಶವು ಇಲಾಖೆಯ ಕಾಮಗಾರಿಗಳ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲಿದೆ ಎಂದು ಈಶ್ವರಪ್ಪ ತಿಳಿಸಿದರು.

ಎಲ್ಲ ಹಂತದ ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲಾಗುವುದು. ಇದರಿಂದ ಹಣದ ಸೋರಿಕೆ ತಡೆಯಲು ಸಾಧ್ಯವಾಗಲಿದೆ. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮತ್ತು ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ಇಲಾಖೆಗಳಲ್ಲಿ ತಕ್ಷಣದಿಂದಲೇ ಈ ತಂತ್ರಾಂಶದ ಬಳಕೆ ಆರಂಭವಾಗಲಿದೆ ಎಂದರು.

ಇಂಧನ ಸಚಿವ ವಿ. ಸುನಿಲ್‌ ಕುಮಾರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್‌ ನಾಯ್ಕ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತೆ ಶಿಲ್ಪಾ ನಾಗ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT