ಅಂತಿಮ ಸೆಮಿಸ್ಟರ್ ಫಲಿತಾಂಶ ವಿಳಂಬ: ಬಿ.ಇಡಿ ಪ್ರವೇಶಕ್ಕೆ ವಿಘ್ನ

ಬೆಂಗಳೂರು: ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಕೆಲ ವಿಶ್ವವಿದ್ಯಾಲಯಗಳು ಪದವಿಯ ಅಂತಿಮ ಸೆಮಿಸ್ಟರ್ ಫಲಿತಾಂಶ ತಡವಾಗಿ ನೀಡಿರುವ ಕಾರಣ ವಿದ್ಯಾರ್ಥಿಗಳು ಬಿ.ಇಡಿ ಪ್ರವೇಶದ ಅವಕಾಶದಿಂದ ವಂಚಿತರಾಗಿದ್ದಾರೆ.
2022–23ನೇ ಸಾಲಿನ ಬಿ.ಇಡಿ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ನವೆಂಬರ್‌ವರೆಗೆ ಅವಕಾಶ ನೀಡಲಾಗಿತ್ತು. ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸಿ, ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ ಇದೇ ಜ.6 ರಂದು ಅರ್ಹತಾಪಟ್ಟಿ ಪ್ರಕಟಿಸಲಾಗಿತ್ತು.
ಅರ್ಜಿ ಸಲ್ಲಿಸುವಾಗ ಪದವಿಯ ಅಂತಿಮ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗದ ಅಭ್ಯರ್ಥಿಗಳು ಐದು ಸೆಮಿಸ್ಟರ್ ಅಂಕಗಳನ್ನು ನಮೂದಿಸಿದ್ದರು. ಅಂತಿಮ ವರ್ಷದ ಅಂಕಗಳನ್ನು ಸೇರಿಸಲು ಹಾಗೂ ಇತರೆ ನ್ಯೂನತೆಗಳನ್ನು ಸರಿಪಡಿಸಲು ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ಜ. 7ರಿಂದ 11ರವರೆಗೆ ತಿದ್ದುಪಡಿಗೆ ಅವಕಾಶ ನೀಡಿತ್ತು. ಅಷ್ಟರ ಒಳಗೆ ಪೂರ್ಣ ಫಲಿತಾಂಶ ದೊರೆತ ವಿದ್ಯಾರ್ಥಿಗಳು ಅವಕಾಶ ಬಳಸಿಕೊಂಡಿದ್ದರು. ಉಳಿದ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಿದ್ದಾರೆ.
‘ಗುಲ್ಬರ್ಗ ವಿಶ್ವವಿದ್ಯಾನಿಲಯ ಅಂತಿಮ ಸೆಮಿಸ್ಟರ್ ಫಲಿತಾಂಶವನ್ನು ಜ.17 ರಂದು ಪ್ರಕಟಿಸಿದೆ. ಅಂಕಗಳನ್ನು ಸೇರಿಸಲು ತಿದ್ದುಪಡಿಗೆ ಅವಕಾಶ ನೀಡಿಲ್ಲ. ಇದರಿಂದ ಎರಡನೇ ಸುತ್ತಿನಲ್ಲೂ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ. ಕೇಂದ್ರೀಕೃತ ದಾಖಲಾತಿ ಘಟಕ ನಮಗೆ ಅವಕಾಶ ಕೊಡಬೇಕು’ ಎನ್ನುತ್ತಾರೆ ಬಿ.ಇಡಿ ಪ್ರವೇಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿನಿ ಸಂಗೀತಾ.
‘ಕೋವಿಡ್ ನಂತರ ಶೈಕ್ಷಣಿಕ ವೇಳಾಪಟ್ಟಿಗಳು ಬದಲಾಗಿವೆ. ಫಲಿತಾಂಶ ತಡವಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಬಿ.ಇಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ, ತಿದ್ದುಪಡಿಗೆ ಇನ್ನೊಂದು ಅವಕಾಶ ಕೊಡಬೇಕು ಎಂದು ಕೇಂದ್ರೀಕೃತ ದಾಖಲಾತಿ ಘಟಕಕ್ಕೆ ಪತ್ರ ಬರೆಯಲಾಗಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್ ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.