ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಯಟ್‌’: ಶೇ 70ರಷ್ಟು ಹುದ್ದೆ ಕಡಿತ

ಪ್ರಸ್ತಾವ ಸಲ್ಲಿಸಿದ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ
Last Updated 2 ಫೆಬ್ರುವರಿ 2023, 19:39 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಗಳಲ್ಲಿನ ಶೇ 70ರಷ್ಟು ಹುದ್ದೆಗಳನ್ನು ಕಡಿತಗೊಳಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ.

‘ಡಯಟ್‌ಗಳಲ್ಲಿನ ಅನಗತ್ಯ ಸಿಬ್ಬಂದಿ ಹೊರೆ ತಗ್ಗಿಸಬೇಕಿದ್ದು, ಪ್ರತಿ ಡಯಟ್‌ನಲ್ಲೂ ಒಬ್ಬರು ಪ್ರಾಂಶುಪಾಲ, ತಲಾ ನಾಲ್ವರು ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರಿಗೆ ಸೀಮಿತಗೊಳಿಸಬೇಕಿದೆ. ಅದಕ್ಕಾಗಿ ಶೇ 70ರಷ್ಟು ಹುದ್ದೆ ರದ್ದು ಮಾಡಬಹುದು’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್‌ ಕುಮಾರ್ ಸಿಂಗ್ ಅವರು ಸಚಿವ ಬಿ.ಸಿ. ನಾಗೇಶ್‌ ಅವರಿಗೆ ಸಲ್ಲಿಸಿದ ಪ್ರಸ್ತಾವದಲ್ಲಿ ವಿವರಿಸಿದ್ದಾರೆ.

ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಶಿಕ್ಷಣ ಸೇವೆಯ (ಕೆಇಎಸ್‌) ಅಧಿಕಾರಿಗಳು, ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುವ ಹೊಣೆಗಾರಿಕೆ ನಿಭಾಯಿಸಬೇಕಿರುವ ಈ ಸಮಯದಲ್ಲಿ ಇಲಾಖೆಯ ನಡೆ ಸರಿಯಲ್ಲ’ ಎಂದು ಪ್ರತಿಪಾದಿಸಿದ್ದಾರೆ.

ಹೊಸ ಜಿಲ್ಲೆ ವಿಜಯನಗರ ಹೊರತುಪಡಿಸಿ ರಾಜ್ಯದಲ್ಲಿ 34 ಡಯಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾಂಶುಪಾಲರು, ಉಪನ್ಯಾಸಕರು ಸೇರಿದಂತೆ ಪ್ರಸ್ತುತ 711 ನೌಕರರು ಕೆಲಸ ಮಾಡುತ್ತಿದ್ದಾರೆ.

ಹುದ್ದೆಗಳ ರದ್ದತಿ ಆದೇಶ ಹೊರಬಿದ್ದರೆ ಹಿರಿಯ ಉಪನ್ಯಾಸಕರು ಬಿಇಒ, ಡಿಡಿಪಿಐ ಕಚೇರಿಗಳಲ್ಲಿನ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ, ಉಪನ್ಯಾಸಕರು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಹುದ್ದೆಗೆ ತೆರಳಬೇಕಿದೆ.

ಜಿಲ್ಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳ, ವಿವಿಧ ತರಬೇತಿಗಳ ನಿರಂತರ ಆಯೋಜನೆ, ಶಿಕ್ಷಣ ಪೂರ್ವ ತರಗತಿಗಳಿಗೆ ಪಾಠ, ವಸ್ತುನಿಷ್ಠ ಸಮೀಕ್ಷೆ, ಅಧ್ಯಯನ, ವಿವಿಧ ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆಯನ್ನು ಡಯಟ್‌ ಉಪನ್ಯಾಸಕರು ನಿರ್ವಹಿಸುತ್ತಾ ಬಂದಿದ್ದಾರೆ.

ಎನ್‌ಇಪಿ ಜಾರಿಗಾಗಿ ಡಯಟ್‌ಗಳಲ್ಲಿ ಸೇವಾಪೂರ್ವ ಶಿಕ್ಷಕರ ಸಂಯೋಜಿತ ಬಿ.ಇಡಿ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರತಿ ಜಿಲ್ಲೆಯಲ್ಲೂ 5 ಸಾವಿರದಿಂದ 6 ಸಾವಿರ ಶಿಕ್ಷಕರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ನಿಭಾಯಿಸಲಾಗುತ್ತಿದೆ. ಬುನಾದಿ ಹಂತದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು–2022ರ ಶಿಫಾರಸಿನಂತೆ ಪ್ರತಿ ಜಿಲ್ಲೆಯಲ್ಲಿ
ಶಾಲಾ ಪೂರ್ವ ಶಿಕ್ಷಕರಿಗೆ (ಅಂಗನವಾಡಿ) ಸೇವಾನಿರತರಂತೆಯೇ ತರಬೇತಿ ನೀಡಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ. ಇವರಿಗೆ ತರಬೇತಿ ನೀಡಬೇಕಾಗಿದೆ. ಪದವಿಪೂರ್ವ ಶಿಕ್ಷಣವನ್ನು ಹಿರಿಯ ಪ್ರೌಢಶಾಲೆಗಾಗಿ ಸರ್ಕಾರ ಮರು ರೂಪಿಸುತ್ತಿದ್ದು, ಪಿಯು ಉಪನ್ಯಾಸಕರಿಗೂ ಡಯಟ್‌ಗಳಲ್ಲಿ ತರಬೇತಿ ಆಯೋಜಿಸಲಾಗುತ್ತಿದೆ.

‘ಶಾಲೆಗಳಿಗೆ ಭೇಟಿ ನೀಡಿ ಸಲಹೆ ಹಾಗೂ ತರಬೇತಿಗಳನ್ನು ನೀಡಲು ಡಯಟ್‌ಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಇಂತಹ ಸಮಯದಲ್ಲಿ ಇಲಾಖೆಯ ನಿರ್ಧಾರ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ. ಕೇರಳದಲ್ಲಿ ಹುದ್ದೆಗಳನ್ನು ದ್ವಿಗುಣಗೊಳಿಸುವ ಮೂಲಕ ಬಲಪಡಿಸಲಾಗಿದೆ. ಅದೇ ಮಾದರಿ ರಾಜ್ಯದಲ್ಲೂ ಅನುಸರಿಸಬೇಕು’ ಎನ್ನುತ್ತಾರೆ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ
ಕೆ.ಜಿ.ಅಂಜನಪ್ಪ.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಗ್ರಾಮೀಣ ವಿಶ್ವವಿದ್ಯಾಲಯಗಳಂತೆ ಅಭಿವೃದ್ಧಿಪಡಿಸಲು 2003ರಲ್ಲೇ ಡಾ. ರಾಜಾ ರಾಮಣ್ಣ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು. ವರದಿ ಇದುವರೆಗೂ ಕಾರ್ಯಗತವಾಗಿಲ್ಲ

ಶೇ 60ರಷ್ಟು ವೇತನಕ್ಕೆ ಕೇಂದ್ರದ ಅನುದಾನ

ಡಯಟ್‌ಗಳ ಹುದ್ದೆಗಳು ಕೇಂದ್ರ ಸರ್ಕಾರದ ನಿರ್ದೇಶನ ಹಾಗೂ ಸಂರಚನೆಯ ರೀತಿ ದೇಶದ ಎಲ್ಲ ರಾಜ್ಯಗಳಲ್ಲೂ ಏಕರೂಪದಲ್ಲಿವೆ. ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿಯ ಶೇ 60ರಷ್ಟು ವೇತನವನ್ನೂ ಕೇಂದ್ರ ಸರ್ಕಾರ ಭರಿಸುತ್ತಿದೆ.

‘ಅನ್ವೇಷಕ ಶಿಕ್ಷಣ ಶಾಸ್ತ್ರ, ಪಠ್ಯಕ್ರಮ ನಿರ್ವಹಣೆ, ವೃತ್ತಿಪರ ಅಭಿವೃದ್ಧಿ, ಸಮೀಕ್ಷೆ ಮತ್ತು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ಮೂಲಕ ಶಿಕ್ಷಕರ ತರಬೇತಿ ಮರು ರೂಪಿಸಲಾಗುವುದು‌. ಅದಕ್ಕಾಗಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಚೈತನ್ಯಶೀಲ ಹಾಗೂ ಉತ್ಕೃಷ್ಟ ಗುಣಮಟ್ಟದ ಸಂಸ್ಥೆಗಳನ್ನಾಗಿ ಅಭಿವೃದ್ಧಿಗೊಳಿಸಲಾಗುವುದು’ ಎಂದು ಫೆ.1ರಂದು ಮಂಡನೆಯಾದ 2023–24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲೂ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT