ಮಂಗಳವಾರ, ಜನವರಿ 26, 2021
28 °C
ಸಚಿವ ಸುರೇಶ್ ಕುಮಾರ್ ಹೇಳಿಕೆ

ಜೂನ್ ಮೊದಲ ವಾರ ಎಸ್ಸೆಸ್ಸೆಲ್ಸಿ, ಮೇ 2ನೇ ವಾರ ದ್ವಿತೀಯ ಪಿಯು ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜೂನ್ ಮೊದಲ ವಾರ ಎಸ್ಸೆಸ್ಸೆಲ್ಸಿ ಹಾಗೂ ಮೇ ಎರಡನೇ ವಾರ ದ್ವಿತೀಯ ಪಿಯು ಪರೀಕ್ಷೆ ನಡೆಸಲು ತಾತ್ಕಾಲಿಕವಾಗಿ ತೀರ್ಮಾನಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ತಿಳಿಸಿದ್ದಾರೆ.

‘ಈ ತರಗತಿಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ದೃಷ್ಟಿಯಿಂದ ಬೋಧನೆ, ಕಲಿಕೆಗಾಗಿ ಗುರುತಿಸಿರುವ ವಿಷಯಾಂಶಗಳನ್ನು ಶಿಕ್ಷಣ ಇಲಾಖೆ ಅಂತಿಮಗೊಳಿಸಿದೆ. ಈ ವಿವರಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸಲಾಗುವುದು. ಯಾವುದೇ ವಿದ್ಯಾರ್ಥಿಗೂ ಹೊರೆಯಾಗದ ರೀತಿಯಲ್ಲಿ ಕನಿಷ್ಠ ಕಲಿಕೆಗೆ ಬೋಧಿಸಬೇಕಿರುವ ಪಠ್ಯಗಳನ್ನು ಪರಿಗಣಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಪರೀಕ್ಷೆಗೆ ಯಾವ ಪಠ್ಯ ಅನಗತ್ಯ, ಪಿಯುಸಿಯಲ್ಲಿ ಯಾವುದು ಬಹಳ ಅಗತ್ಯ ಎಂಬ ಬಗ್ಗೆ ಪಠ್ಯ ಪುಸ್ತಕ ರಚಿಸಿದ ತಜ್ಞರು ಎರಡು ಸುತ್ತು ಸಭೆ ನಡೆಸಿದ್ದಾರೆ. ಆಯುಕ್ತರೂ ಮೂರು ಸುತ್ತಿನ ಸಭೆ ನಡೆಸಿ ಪಠ್ಯಗಳನ್ನು ಅಂತಿಮಗೊಳಿಸಿದ್ದಾರೆ. ಅಲ್ಲದೆ, ಮುಂದಿನ ಶೈಕ್ಷಣಿಕ ವರ್ಷವನ್ನು (2021–22) ಜುಲೈ 1ರಿಂದಲೇ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.

9 ನೇ ತರಗತಿವರೆಗೆ ಪಠ್ಯ ಕಡಿತವಿಲ್ಲ: ‘ಒಂದರಿಂದ ಒಂಬತ್ತನೇ ತರಗತಿ‌ವರೆಗೆ ಪಠ್ಯ‌ ಕಡಿತಗೊಳಿಸುವ ಪ್ರಸ್ತಾಪ ಇಲಾಖೆಯ ಮುಂದೆ ಇಲ್ಲ. ಈ ಕುರಿತಂತೆ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿ ಅಂತಿಮಗೊಳಿಸಲಾಗಿದೆ’ ಎಂದರು.

ಶಾಲಾ ಹಂತದಲ್ಲಿ ಮೌಲ್ಯಮಾಪನ ನಡೆಸಲಾಗುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಆಧಾರದಲ್ಲಿ ಸರಳ ಮೌಲ್ಯಮಾಪನಾ ಪ್ರಕ್ರಿಯೆ ಜಾರಿಯಲ್ಲಿ ಇರಲಿದೆ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳ ಜತೆ ಸಭೆ: ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪಿಯು ಇಲಾಖೆ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರ ಜೊತೆ ಸುರೇಶ್ ಕುಮಾರ್ ಬುಧವಾರ ಸಭೆ ನಡೆಸಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗೆ ಈಗಾಗಲೇ ಪೂರ್ಣಗೊಳಿಸಿರುವ ಪಠ್ಯಗಳು, ನಿಗದಿ‍ಪಡಿಸುವ ಪಠ್ಯಗಳನ್ನು ಪೂರ್ಣಗೊಳಿಸಿ ಪರೀಕ್ಷೆಗೆ ಸಿದ್ಧತೆಗೆ ಅಗತ್ಯವಾದ ಕಾಲಾವಕಾಶ ಮತ್ತು ಪರೀಕ್ಷಾ ವ್ಯವಸ್ಥೆ ಮತ್ತಿತರ ವಿಷಯಗಳ ಕುರಿತು ಅವರು ಮಾಹಿತಿ ಪಡೆದಿದ್ದಾರೆ. ಬಳಿಕ ಪರೀಕ್ಷೆ ನಡೆಸುವ ದಿನಾಂಕವನ್ನು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪಠ್ಯವನ್ನು ನಿಗದಿಪಡಿಸಲು ಕುರಿತು ಇಲಾಖೆಯ ವಿಭಾಗ ಮಟ್ಟದ ಹಿರಿಯ ಅಧಿಕಾರಿಗಳ ಜತೆ ಆಯುಕ್ತರು ಗುರುವಾರ ಸಭೆ ನಡೆಸಲಿದ್ದಾರೆ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು