ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಮಟ್ಟದಲ್ಲಿ ಮಾದರಿ ಶಾಲೆ ಆರಂಭಿಸಲು ಚಿಂತನೆ: ಸುರೇಶ್‌ ಕುಮಾರ್

ಕೋವಿಡ್‌ ಕಾರಣ ‘ಸುರಕ್ಷಿತ ಕೇಂದ್ರ’ಗಳಾಗಿ ಶಾಲೆಗಳು ಬದಲು
Last Updated 28 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ಆರಂಭಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಆ ಮೂಲಕ, ಹಳ್ಳಿ ಮಕ್ಕಳಿಗೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಇಂಗಿತ ವ್ಯಕ್ತಪಡಿಸಿದರು.

‘ಮಕ್ಕಳಿಗೆ ಶಾಲೆ ಬೇಕಲ್ವೇ?‘ ವಿಷಯ ಕುರಿತು ‘ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ಫೇಸ್‌ಬುಕ್‌ ಸಂವಾದದಲ್ಲಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಜೊತೆ ಭಾಗವಹಿಸಿ ಸಚಿವರು ಅನಿಸಿಕೆಗಳನ್ನು ಹಂಚಿಕೊಂಡರು.

‘ಮಕ್ಕಳ ಪ್ರವೇಶಾತಿಗಾಗಿ ಸರ್ಕಾರಿ ಶಾಲೆಗಳ ಮುಂಭಾಗದಲ್ಲೂ ಪೋಷಕರು ಸರದಿ ಸಾಲಿನಲ್ಲಿ ನಿಲ್ಲುವಂತಾಗಬೇಕು’ ಎಂದು ತಮ್ಮ
ಕನಸನ್ನು ಸಚಿವರು ತೆರೆದಿಟ್ಟರು. ಪೂರಕವಾಗಿ ಮಾತನಾಡಿದ ನಿರಂಜನಾರಾಧ್ಯ, 2011ರಲ್ಲೇ ಈ ಬಗ್ಗೆ ಸರ್ಕಾರದ ಗಮನ ಸೆಳೆದಿರು
ವುದಾಗಿ ಹೇಳಿದರು.

‘ಕೋವಿಡ್‌ ಕಾರಣದಿಂದ ಮುಚ್ಚಿದ್ದ ಶಾಲೆಗಳು 10 ತಿಂಗಳ ಬಳಿಕ ಪುನರಾರಂಭಗೊಳ್ಳುತ್ತಿವೆ. ಈ ಸಂದಿಗ್ಧ ಸಂದರ್ಭದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಜ. 1ರಿಂದ ಆರಂಭಿಸಲಾಗುತ್ತದೆ. ಮಕ್ಕಳ ಪಾಲಿಗೆ ಶಾಲೆಗಳು ಕಲಿಕಾ ಕೇಂದ್ರಗಳಷ್ಟೆ ಅಲ್ಲ, ‘ಸುರಕ್ಷಿತ ಕೇಂದ್ರ’ ಎಂಬ ಭಾವನೆ ಮೂಡಿಸುವ ಜೊತೆಗೆ, ಮಕ್ಕಳನ್ನು ಶಾಲೆಗೆ ಕಳುಹಿಸುವ ನಿಟ್ಟಿನಲ್ಲಿ ಪೋಷಕರಲ್ಲಿ ಆತ್ಮವಿಶ್ವಾಸ ತುಂಬಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ’
ಎಂದು ಸುರೇಶ್‌ ಕುಮಾರ್‌ ಭರವಸೆ ನೀಡಿದರು.

‘ರಾಜ್ಯ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಮಾರ್ಗಸೂಚಿ ಅನ್ವಯವೇ ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಒಂದು ಕೊಠಡಿಯಲ್ಲಿ 15 ಮಕ್ಕಳು ಮಾತ್ರ ಇರಲಿದ್ದಾರೆ. ಮಕ್ಕಳು ಗುಂಪುಗೂಡಬಾರದು, ಅಂತರ ಕಾಯ್ದುಕೊಳ್ಳಬೇಕು ಎಂಬ ಕಾರಣಕ್ಕೆ ಬೆಳಗಿನ ಸಮೂಹ ಪ್ರಾರ್ಥನೆ (ಅಸೆಂಬ್ಲಿ), ಬಿಸಿಯೂಟ ರದ್ದುಪಡಿಸಲಾಗಿದೆ. ಮನೆಯಲ್ಲಿ ಪೋಷಕರು ವಹಿಸುವ ಎಚ್ಚರಿಕೆಗಿಂತಲೂ ಹೆಚ್ಚಿನ ಎಚ್ಚರಿಕೆಯನ್ನು ಶಾಲೆಗಳಲ್ಲಿ ವಹಿಸಲಾಗುವುದು. ಹೀಗಾಗಿ, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿ ಯಾವುದೇ ಆತಂಕ, ಅಳುಕು ಅಗತ್ಯವಿಲ್ಲ’ ಎಂದೂ ಸಚಿವರು ಧೈರ್ಯ ತುಂಬಿದರು.

‘ಶಾಲೆಗಳು ಆರಂಭಿಸಲು ಸರ್ಕಾರ ವಿಳಂಬ ಮಾಡಿದೆ. ಅದಕ್ಕೆ ಕಾರಣ, ಕೋವಿಡ್ ಬಗೆಗಿನ ತಿಳಿವಳಿಕೆ ಕೊರತೆ. ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡ ಪ್ರಮಾಣ ಅತೀ ಕಡಿಮೆ, ಅಲ್ಲದೆ, ಮಕ್ಕಳು ವಾಹಕರಾಗಿ ಮನೆಯಲ್ಲಿದ್ದ ಹಿರಿಯರಿಗೆ ಹರಡುವ ಸಾಧ್ಯತೆ ಇದೆ ಎನ್ನುವು
ದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ’ ಎಂದು ಪ್ರತಿಪಾದಿಸಿದ ನಿರಂಜನಾರಾಧ್ಯ, ಶಾಲೆಗಳನ್ನು ಆರಂಭಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಮಕ್ಕಳು ಶಾಲೆಯಿಂದ ಹೊರಗುಳಿದ ಪರಿಣಾಮ ಎದುರಾದ ಬಾಲ್ಯ ವಿವಾಹ, ಜೀತ ಪದ್ಧತಿ, ಮಕ್ಕಳ ಸಾಗಣೆಯಂಥ ಸಾಮಾಜಿಕ ಸಮಸ್ಯೆಗಳ ಕಡೆಗೂ ಬೆಳಕು ಚೆಲ್ಲಿದರು. ಆರ್ಥಿಕತೆ ಮೇಲಿನ ಪರಿಣಾಮದ ಬಗ್ಗೆಯೂ ಪ್ರಸ್ತಾಪಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ‘ಸೆಪ್ಟೆಂಬರ್‌ವರೆಗೆ ಶಾಲೆಗಳನ್ನು ತೆರೆಯದಂತೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿತ್ತು. ನಂತರ ಮಾರ್ಗಸೂಚಿಯಲ್ಲಿ ಸಡಿಲಿಕೆ ನೀಡಿದ ಕೇಂದ್ರ, ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ಈ ವಿಷಯದಲ್ಲಿ ಶಿಕ್ಷಣ ಇಲಾಖೆಯೊಂದೇ ತೀರ್ಮಾನ ತೆಗೆದುಕೊಳ್ಳುವಂತೆ ಇರಲಿಲ್ಲ. ತಜ್ಞರ ಸಲಹಾ ಸಮಿತಿಯ ಸೂಚನೆಯಂತೆ ಶಾಲೆ ಆರಂಭಿಸುವ ನಿರ್ಧಾರಕ್ಕೆ ಬರಲಾಗಿದೆ’ ಎಂದರು.

‘ವಿದ್ಯಾಗಮ’ ಕಾರ್ಯಕ್ರಮವನ್ನು ಏಕಾಏಕಿ ಸ್ಥಗಿತಗೊಳಿಸಿದ್ದ ಸರ್ಕಾರದ ಕ್ರಮವನ್ನು ನಿರಂಜನರಾಧ್ಯ ಟೀಕಿಸಿದರು. ಆಗ, ಆ ಪರಿಸ್ಥಿತಿಗೆ ಕಾರಣವಾದ ಅಂಶಗಳನ್ನು ಸಚಿವರು ಹಂಚಿಕೊಂಡರು. ಸಂವಾದದಲ್ಲಿ ಸರ್ಕಾರಿ ಶಾಲೆಗಳನ್ನು ಬಲಗೊಳಿಸಬೇಕಾದ ಬಗ್ಗೆಯೂ ಚರ್ಚೆ ನಡೆಯಿತು. ಖಾಸಗಿ ಶಾಲೆಗಳು ಇಷ್ಟಬಂದಂತೆ ವಿಧಿಸುತ್ತಿರುವ ಶುಲ್ಕಕ್ಕೆ ಕಡಿವಾಣ ಹಾಕಲು ನೀತಿ ರೂಪಿಸಬೇಕು ಎಂದೂ ನಿರಂಜನಾರಾಧ್ಯ ವಾದಿಸಿದರು.

ಪಠ್ಯ, ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟ
‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಷ್ಟವಾದ ಶಾಲಾ ದಿನಗಳನ್ನು ಪರಿಗಣಿಸಿ, ಪಠ್ಯ ಕಡಿತದ ಬಗ್ಗೆ ವಾರದೊಳಗೆ ತೀರ್ಮಾನಕ್ಕೆ ಬರಲಾಗುವುದು. ಪಠ್ಯ ಕಡಿತ ಎನ್ನುವುದಕ್ಕಿಂತ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಗತ್ಯವಾದ ಪಠ್ಯವನ್ನಷ್ಟೇ ಉಳಿಸಿಕೊಳ್ಳಲಾಗುವುದು. ದ್ವಿತೀಯ ಪಿಯುಸಿಗೆ ಪಠ್ಯ ಕಡಿತವನ್ನು ಸಿಬಿಎಸ್‌ಇ ಶಿಕ್ಷಣ ಮಂಡಳಿ ನಿಗದಿಪಡಿಸಿದಂತೆ ಯಥಾವತ್‌ ಅಳವಡಿಸಲಾಗುತ್ತದೆ. ಪರೀಕ್ಷಾ ವೇಳಾಪಟ್ಟಿಯನ್ನು ಕೂಡಾ ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದು ಸುರೇಶ್‌ಕುಮಾರ್‌ ತಿಳಿಸಿದರು.

*
ರಾಜ್ಯದಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು. ಆ ಮೂಲಕ, ನಗರ–ಗ್ರಾಮೀಣ ಮಕ್ಕಳ ಶಿಕ್ಷಣ ತಾರತಮ್ಯ ಅಂತ್ಯಗೊಳಿಸಲು ಮುಂದಾಗಬೇಕು.
-ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT