ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೆಚ್ಚಳ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಈಶ್ವರ ಖಂಡ್ರೆ ಆಗ್ರಹ

Last Updated 19 ಏಪ್ರಿಲ್ 2021, 8:06 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಎರಡನೇ ಅಲೆ ಜನಸಾಮಾನ್ಯರನ್ನು ತತ್ತರಿಸಿ ಹೋಗುವಂತೆ ಮಾಡಿದೆ. ರಾಜ್ಯ– ಕೇಂದ್ರ ಸರ್ಕಾರದ ಅಪರಾಧಿತನದಿಂದ ಈ ಸಂಕಟ ಬಂದಿದೆ. ಜನರು ಹಾದಿ ಬೀದಿಯಲ್ಲಿ ಸಾಯುತ್ತಿದ್ದಾರೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದರು.

ಆಲಿಅಸ್ಕರ್‌ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಸೋಮವಾರ ಮಾತನಾಡಿದ ಅವರು, ‘ಜಗತ್ತಿನೆಲ್ಲೆಡೆ ಕೊರೊನಾ ಇದೆ. ಆದರೆ, ನಮ್ಮ ದೇಶ ಸೋಂಕು, ಸಾವಿನಲ್ಲಿ ಮುಂದಿದೆ. 12 ಲಕ್ಷ ಸಕ್ರಿಯ ಪ್ರಕರಣಗಳು ಇವೆ. ಇದನ್ನು ನಿಭಾಯಿಸಲು ಸರ್ಕಾರದ ಬಳಿ ಪೂರ್ವಸಿದ್ದತೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬೀದರ್‌ನಲ್ಲಿ 13 ಸಾವಿರ ಜನರಿಗೆ ಸೋಂಕು ತಗಲಿದೆ. 200 ಜನ ಸತ್ತಿದ್ದಾರೆ. 500 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರಿಗೆ ರೆಮ್‌ಡಿಸಿವಿರ್‌ ಔಷಧದ ಅವಶ್ಯಕತೆ ಇದೆ. ಭಾನುವಾರ 12 ಜನರಿಗೆ ರೆಮ್‌ಡಿಸಿವಿರ್‌ ಔಷಧ ನೀಡಬೇಕಿತ್ತು. ಒಂದು ಡೋಸ್‌ ಕೊಟ್ಟಿದ್ದಾರೆ. ಎರಡನೇ ಡೋಸ್‌ ಇನ್ನೂ ಕೊಟ್ಟಿಲ್ಲ. 51 ಜನರಿಗೆ ಮೂರನೇ ಡೋಸ್ ಕೊಟ್ಟಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ. ಒಂದನೇ ಡೋಸ್‌ನಿಂದ 5ನೇ ಡೋಸ್‌ವರೆಗೂ ಡೋಸ್ ಸಿಕ್ಕಿಲ್ಲ. ಅಂದರೆ, ಸರ್ಕಾರ ಜೀವಂತವಾಗಿ ಇದೆಯಾ’ ಎಂದು ಪ್ರಶ್ನಿಸಿದರು.

‘ಕೋವಿಡ್‌ ವಿಷಯದಲ್ಲಿ ಸರ್ಕಾರಕ್ಕೆ ನಮ್ಮ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನೀವು (ಸರ್ಕಾರ) ಸರಿಯಾಗಿ ನಿರ್ವಹಿಸದೇ ಇದ್ದರೆ ಜನರ ಶಾಪ ತಟ್ಟಲಿದೆ. ನಮ್ಮಲ್ಲಿ ಔಷಧ ತಯಾರಿಸುವ ಎಲ್ಲ ವ್ಯವಸ್ಥೆ ಇದೆ. ನಮಗೆ ಔಷಧದ ಅವಶ್ಯಕತೆ ಇದ್ದರೂ ನೀವು ಬೇರೆ ದೇಶಕ್ಕೆ ಕಳಿಸುತ್ತಿದ್ದೀರಿ. ನಮ್ಮ ಮನೆಗಳನ್ನು ಸುಟ್ಟು ಬೇರೆಯವರ ಮನೆ ಬೆಳಗಿಸುತ್ತಿದ್ದೀರಿ. ಔಷಧ, ಆಕ್ಸಿಜನ್ ಇಲ್ಲದಿರುವುದಕ್ಕೆ ಸರ್ಕಾರ ನೇರ ಹೊಣೆ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ತೊಂದರೆ ಇದೆ. ಜನರಿಗೆ ತೊಂದರೆಯಾದರೆ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳುತ್ತದೆಯೇ? ಕಲ್ಯಾಣ ಕರ್ನಾಟಕ ಪ್ರದೇಶವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ’ ಎಂದು ಆರೋಪಿಸಿದರು.

‘ಅಕ್ರಮವಾಗಿ ಸಂಪಾದಿಸಿ ₹ 50 ಕೋಟಿಯನ್ನು ಚುನಾವಣೆಯಲ್ಲಿ ಹಂಚಿದ್ದಾರೆ. ರೋಗ ನಿಯಂತ್ರಣಕ್ಕೆ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು. ಹಿಂದೆಯೂ ಕೋವಿಡ್‌ ಸಂದರ್ಭದಲ್ಲಿ ತೊಂದರೆ ಆಗಿತ್ತು. ಈಗಲೂ ಹಾಗೆ ಆಗಿದೆ.ಜನರ ಜೀವ ಉಳಿಸಿ. ತಜ್ಞರ ಸಲಹೆ ಪಡೆದು ನಿರ್ಧಾರ ಮಾಡಿ. ಬಡ ಜನರ ಹಿತದೃಷ್ಟಿಯಿಂದ ಕೆಲಸ ಮಾಡಿ.ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ’ ಎಂದು ದೂರಿದರು.

‘ಉಪ ಚುನಾವಣೆ ಅವಶ್ಯಕತೆ ಇರಲಿಲ್ಲ. ಸ್ಥಳೀಯ ಚುನಾವಣೆ ನಡೆಯುತ್ತಿರುವುದನ್ನು ಮುಂದಕ್ಕೆ ಹಾಕಿ. ಚುನಾವಣೆ ಅಂದರೆ ಜನ ಬರುತ್ತಾರೆ. ಒಂದೆಡೆ ಸೇರುತ್ತಾರೆ. ಎಲ್ಲ ಸ್ಥಳೀಯ ಸಂಸ್ಥೆಯ ಚುನಾವಣೆಗಳನ್ನು ಮುಂದೂಡಿ’ ಎಂದು ಆಗ್ರಹಿಸಿದರು.

‘ದಯವಿಟ್ಟು ಕೊರೊನಾ ನಿರ್ಲಕ್ಷ್ಯ ಮಾಡಬೇಡಿ’ ಎಂದು ಕೈ ಮುಗಿದ ಈಶ್ವರ ಖಂಡ್ರೆ, ‘ಸಾರ್ವಜನಿಕರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ. ನನಗೆ ಎರಡನೇ ಅಲೆಯ ಕೋವಿಡ್ ತಗಲಿತ್ತು. ನಾನು ಆಸ್ಪತ್ರೆಗೆ ದಾಖಲು ಆಗಿದ್ದೆ. ಕೊರೊನಾವನ್ನು ಯಾರೂ ನಿರ್ಲಕ್ಷ್ಯ ಮಾಡಬೇಡಿ. ಮಾಸ್ಕ್ ಹಾಕಿ, ಸ್ಯಾನಿಟೈಸರ್ ಬಳಸಿ, ಅಂತರ ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಎಲ್ಲರೂ ಎಚ್ಚರಿಕೆ ವಹಿಸಿ. ಸರ್ಕಾರ ಕೈ ಚೆಲ್ಲಿ ಕುಳಿತಿದೆ’ ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT