ಶನಿವಾರ, ಅಕ್ಟೋಬರ್ 1, 2022
23 °C

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ: ಸರ್ಕಾರ ಸತ್ತಿದೆ ಎಂದ ಕಾಂಗ್ರೆಸ್‌ 

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿರುವ ಕಾಂಗ್ರೆಸ್‌, ‘ಗುಪ್ತಚರ ಇಲಾಖೆ ಐಸಿಯುನಲ್ಲಿದೆ, ಸರ್ಕಾರ ಸತ್ತಿದೆ’ ಎಂದು ವ್ಯಂಗ್ಯವಾಡಿದೆ. 

ಮಳೆಹಾನಿ ಪ್ರದೇಶಗಳ ವೀಕ್ಷಣೆಗೆಂದು ಗುರುವಾರ ಕೊಡಗಿಗೆ ಬಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆಯಲಾಗಿತ್ತು.

ಈ ಬಗ್ಗೆ ಇಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌  ‘ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಕ್ಷಣೆ ಸರ್ಕಾರದ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಅತಿವೃಷ್ಟಿ ಹಾನಿ ವೀಕ್ಷಣೆಗೆ ತೆರಳಿದ್ದ ವಿಪಕ್ಷ ನಾಯಕರಿಗೆ ರಕ್ಷಣೆ ಇಲ್ಲ ಎಂದಾದರೆ ಜನಸಾಮಾನ್ಯರ ರಕ್ಷಣೆ ಈ ಸರ್ಕಾರದಿಂದ ಸಾಧ್ಯವೇ? ಗೃಹಸಚಿವರು ಇನ್ನೂ ಹುದ್ದೆಯಲ್ಲಿರಲು ಅರ್ಹರೇ? ಮುಖ್ಯಮಂತ್ರಿಗಳು ಜನತೆಗೆ ಉತ್ತರಿಸಬೇಕು’ ಎಂದು ಆಗ್ರಹಿಸಿದೆ. 

‘ಗೃಹಸಚಿವರು ಹೊತ್ತಿರುವ ಜವಾಬ್ದಾರಿ ಕಾನೂನು ಸುವ್ಯವಸ್ಥೆ ಕಾಪಾಡುವುದೋ ಅಥವಾ ಗೂಂಡಾ ಪೋಷಣೆ ಮಾಡುವುದೋ? ಬಿಜೆಪಿ ಗೂಂಡಾಪಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಎರಡೆರಡು ಬಾರಿ ಮೊಟ್ಟೆ ಎಸೆಯಲು ಪೊಲೀಸರು ಅವಕಾಶ ಕೊಡುತ್ತಾರೆ ಎಂದರೆ ಇದು ಸರ್ಕಾರಿ ಪ್ರಾಯೋಜಿತ ದಾಳಿಯಲ್ಲವೇ? ಗುಪ್ತಚರ ಇಲಾಖೆ ಐಸಿಯುನಲ್ಲಿದೆ, ಸರ್ಕಾರ ಸತ್ತಿದೆ’ ಎಂದು ಕಾಂಗ್ರೆಸ್‌ ಗೇಲಿ ಮಾಡಿದೆ. 

ಮೊಟ್ಟೆ ಎಸೆತಕ್ಕೂ ಮೊದಲು ಕೊಡಗಿನ ತಿತಿಮತಿ ಬಳಿ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಘೆರಾವ್‌ ಹಾಕಿದ್ದರು. ‘ಗೋ ಬ್ಯಾಕ್‌ ಸಿದ್ದರಾಮಯ್ಯ’ ಘೋಷಣೆ ಕೂಗಿದ್ದರು.  

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು