ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಶಿರಾದಲ್ಲಿ ಮೊಕ್ಕಾಂ ಹೂಡಿದ ವಿಜಯೇಂದ್ರ

ಕೆ.ಆರ್‌.ಪೇಟೆ ಮಾದರಿಯ ಗೆಲುವಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರಿ
Last Updated 19 ಅಕ್ಟೋಬರ್ 2020, 19:15 IST
ಅಕ್ಷರ ಗಾತ್ರ

ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಗೆಲುವಿಗಾಗಿ ಬಿಜೆಪಿ ಜಿದ್ದಾಜಿದ್ದಿನ ಪೈಪೋಟಿಗೆ ಇಳಿದಿದೆ. ಕೆ.ಆರ್‌.ಪೇಟೆ ಮಾದರಿಯಲ್ಲೇ ಶಿರಾ ಕ್ಷೇತ್ರವನ್ನು ಗೆದ್ದುಕೊಂಡು ಬರುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಪುತ್ರ ಹಾಗೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ‘ಗುರಿ ನಿಗದಿ’ ಮಾಡಿ ಕಳುಹಿಸಿದ್ದಾರೆ.

ಕೋವಿಡ್‌ನಿಂದ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಆದ ದಿನ ಸಂಜೆಯೇ ಅವರು ಶಿರಾಕ್ಕೆ ತೆರಳಿ ವಾಸ್ತವ್ಯ ಹೂಡಿದ್ದಾರೆ. ಚುನಾವಣೆ ಮುಗಿಯುವ ತನಕ ಅಲ್ಲೇ ಬೀಡು ಬಿಡಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಸ್ಥಳೀಯವಾಗಿ ಬಾಡಿಗೆ ಮನೆಯೊಂದನ್ನೂ ಗೊತ್ತು ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಕ್ಷೇತ್ರದಲ್ಲಿ ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿ ಅಭ್ಯರ್ಥಿಯ ಪರವಾಗಿ ಬೆಂಬಲ ಕೋರುತ್ತಿದ್ದಾರೆ. ಕಾಡುಗೊಲ್ಲ, ಬಲಿಜ, ಈಡಿಗ, ಬೋವಿ, ಉಪ್ಪಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದ ಮುಖಂಡರ ಸಭೆಯನ್ನು ಕಳೆದ ಎರಡು– ಮೂರು ದಿನಗಳಿಂದ ನಿರಂತರವಾಗಿ ನಡೆಸಿದ್ದಾರೆ. ಕೆ.ಆರ್‌.ಪೇಟೆ ಚುನಾವಣೆಯಲ್ಲಿ ಅನುಸರಿಸಿದ ತಂತ್ರಗಳನ್ನೇ ಬಹುತೇಕ ಅನುಸರಿಸುತ್ತಿದ್ದಾರೆ.

ಸಣ್ಣ– ಪುಟ್ಟ ಜಾತಿಗಳು, ಸಮುದಾಯಗಳ ಜನರ ಅಭಿವೃದ್ಧಿಯ ವಿಷಯಪ್ರಸ್ತಾಪಿಸುವುದರ ಜತೆಗೆ ಬಿಜೆಪಿಯನ್ನು ಬೆಂಬಲಿಸಿದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಗೆ ನೆರವಾಗುವುದಾಗಿಯೂ ಹೇಳಿದ್ದಾರೆ. ಸ್ಥಳೀಯ ಮಟ್ಟದ ಕುಡಿಯುವ ನೀರಿನ ಯೋಜನೆಗಳು, ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವುದಾಗಿ ಭರವಸೆ ನೀಡಿದ್ದಾರೆ.

‘ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ತಂದು ನಿಲ್ಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಫೋಟೊ ಫಿನಿಷ್ ಹಂತಕ್ಕೆ ತಲುಪಬೇಕು ಎಂಬುದು ವಿಜಯೇಂದ್ರ ಮುಂದಿರುವ ಸದ್ಯದ ಗುರಿ’ ಎಂದು ವಿಜಯೇಂದ್ರ ಅವರ ಆಪ್ತಮೂಲಗಳು ತಿಳಿಸಿವೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ವಿಜಯೇಂದ್ರ, ‘ ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಸಣ್ಣ ಪುಟ್ಟ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಮುಂಬರುವ ದಿನಗಳಲ್ಲಿ ಅವರ ಅಭಿವೃದ್ಧಿಗಾಗಿ ಶ್ರಮಿಸುವ ಭರವಸೆ ನೀಡಿದ್ದೇವೆ. ಟೀಂ ವರ್ಕ್‌ ಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದೇವೆ.ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‌ಗೌಡ, ಎನ್‌.ರವಿಕುಮಾರ್‌, ಸಂಸದ ನಾರಾಯಣಸ್ವಾಮಿ ವೇದಿಕೆ ಸಿದ್ಧಪಡಿಸಿದ್ದಾರೆ. ಇಬ್ಬರು ಟಿಕೆಟ್‌ ಆಕಾಂಕ್ಷಿಗಳು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

***

ನನ್ನ ವಿರುದ್ಧ ಇಲ್ಲ ಸಲ್ಲದ ಟೀಕೆ ಮಾಡುತ್ತಿದ್ದಾರೆ. ಇದು ಮತದಾರರಿಗೆ ಮಾಡುತ್ತಿರುವ ಅವಮಾನ, ಜವಾಬ್ದಾರಿಯ ಹೇಳಿಕೆ ನೀಡಲಿ

-ಬಿ.ವೈ. ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ

***

ವಿಜಯೇಂದ್ರ ವಿರುದ್ಧ ಎಚ್‌ಡಿಕೆ ಟೀಕೆ

'ಕೆ.ಆರ್.‌ಪೇಟೆಯಂತೆ ಶಿರಾ ಕ್ಷೇತ್ರವನ್ನೂ ಮುಗಿಸುತ್ತೇನೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಪುತ್ರ, ಅಲ್ಲಿಗೆ ಹೋಗಿ ಜನರಿಗೆ‌ ಕುಡಿಸಿ ಬೀದಿಯಲ್ಲಿ ಮಲಗಿಸಿದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.‌ಕುಮಾರಸ್ವಾಮಿ ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯೇಂದ್ರ ಅವರ ಹೇಳಿಕೆ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಯುವಕರಿಗೆ ಮದ್ಯ ಕುಡಿಸಿ ರಸ್ತೆಯಲ್ಲಿ ಮಲಗಿಸಿದ್ದಾರೆ. ಪಾಪದ ಹಣ‌ ತೆಗೆದುಕೊಂಡು ಹೋಗಿ ಶಿರಾದಲ್ಲಿ ಕುಳಿತಿದ್ದೀರಲ್ಲ. ಅದೇ ಹಣವನ್ನು ಪ್ರವಾಹದಿಂದ ಬೀದಿಗೆ ಬಿದ್ದ ಜನರಿಗೆ ಹಂಚಬಹುದಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT