ಗುರುವಾರ , ಮೇ 6, 2021
25 °C
ಸಚಿವರಿಂದಲೇ ಭೂಕಬಳಿಕೆ– ಪರಿಷತ್ತಿನಲ್ಲಿ ಕಾಂಗ್ರೆಸ್ ಆಪಾದನೆ

ಬೈರತಿ ವಿರುದ್ಧ ಆರೋಪ: ತನಿಖೆ– ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಆರ್‌. ಪುರ ಕ್ಷೇತ್ರದ ವ್ಯಾಪ್ತಿಯ ಮಹದೇವಪುರ ಗ್ರಾಮದ ಸರ್ವೆ ನಂಬರ್‌ 199ರ ಸರ್ಕಾರಿ ಜಮೀನನ್ನು ಸ್ಥಳೀಯ ಶಾಸಕರೂ ಆಗಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮತ್ತು ಅವರ ಬೆಂಬಲಿಗರು ಕಬಳಿಸಿ, ಮಾರಾಟ ಮಾಡಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಆರ್‌. ಅಶೋಕ ಭರವಸೆ ನೀಡಿದರು.

ಕಾಂಗ್ರೆಸ್‌ನ ಎಂ. ನಾರಾಯಣಸ್ವಾಮಿ ನಿಯಮ 72ರಡಿ ಮಂಡಿಸಿದ್ದ ಸೂಚನೆಗೆ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಉತ್ತರ ನೀಡಿದ ಕಂದಾಯ ಸಚಿವರು, ‘ಮಹದೇವಪುರ ಗ್ರಾಮದ ಸ.ನಂ. 199ರಲ್ಲಿ 7 ಎಕರೆ 18 ಗುಂಟೆ ಸರ್ಕಾರಿ ಜಮೀನು ಇದೆ. ಈ ಪೈಕಿ 20 ಗುಂಟೆಯನ್ನು ಸರ್ಕಾರಿ ಶಾಲೆಗೆ ಹಾಗೂ 2 ಎಕರೆ 28 ಗುಂಟೆಯನ್ನು ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ’ ಎಂದರು.

2 ಎಕರೆ ವಿಸ್ತೀರ್ಣದಲ್ಲಿ ಹಲವು ವರ್ಷಗಳ ಹಿಂದಿನಿಂದಲೂ 100 ಮನೆಗಳು ಇವೆ. ಇತ್ತೀಚೆಗೆ ಕೆಲವು ಮನೆಗಳು ನಿರ್ಮಾಣವಾಗಿರುವುದು ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ಅತಿಕ್ರಮಣ ನಡೆಸಿ, ನಿರ್ಮಿಸಿರುವ ಕಟ್ಟಡಗಳನ್ನು ಗುರುತಿಸಿ, ತೆರವು ಮಾಡಲಾಗುವುದು ಎಂದು ತಿಳಿಸಿದರು.

ಸಚಿವರ ವಿರುದ್ಧ ಆರೋಪ: ‘ನಗರಾಭಿವೃದ್ಧಿ ಸಚಿವರು ಮತ್ತು ಅವರ ಬೆಂಬಲಿಗರು ಸರ್ಕಾರಿ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿ, ಮಾರಾಟ ಮಾಡಿದ್ದಾರೆ. ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದಾರೆ. ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಬಿಬಿಎಂಪಿ ಅಧಿಕಾರಿಗಳಿಗೆ ದಾಖಲೆಯೊಂದಿಗೆ ದೂರು ನೀಡಿದ್ದೇನೆ. ಒಂದು ವರ್ಷದಿಂದ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನಾರಾಯಣಸ್ವಾಮಿ ಆರೋಪಿಸಿದರು.

ಸಚಿವರೇ ಭೂಕಬಳಿಕೆ ನಡೆಸುತ್ತಿರುವ ಕುರಿತು ಲೋಕಾಯುಕ್ತರಿಗೂ ದೂರು ನೀಡಲಾಗಿದೆ. ಆದರೆ, ನೋಟಿಸ್ ಜಾರಿಮಾಡಿದ ಹೊರತಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಕೆಳಹಂತದ ಅಧಿಕಾರಿಗಳು ಸಚಿವರ ಪರವಾಗಿ ವರದಿ ನೀಡುತ್ತಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

‘ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ತನಿಖೆಯ ಜತೆಗೆ ಭೂಮಾಪನ ನಡೆಸಲಾಗುವುದು. ಒತ್ತುವರಿ ಕಂಡುಬಂದಲ್ಲಿ ಅಂತಹ ಎಲ್ಲ ಕಟ್ಟಡಗಳನ್ನೂ ತೆರವುಗೊಳಿಸಲಾಗುವುದು’ ಎಂದು ಅಶೋಕ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು