ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5, 8ನೇ ತರಗತಿ ಪರೀಕ್ಷೆ ಮುಂದೂಡಿಕೆ: ಪರೀಕ್ಷಾ ಮಂಡಳಿ ನಿರ್ಧಾರ

Last Updated 11 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮಾರ್ಚ್‌ 13ರಿಂದ 18ರವರೆಗೆ ನಡೆಸಲು ಉದ್ದೇಶಿಸಿದ್ದ ಏಕರೂಪದ ಪರೀಕ್ಷೆಯನ್ನು (ಮೌಲ್ಯಾಂಕನ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದೂಡಿದೆ.

ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸ) ಹಾಗೂ ಇತರರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್‌, ಏಕರೂಪದ ಪರೀಕ್ಷೆ ನಡೆಸಲು ಮಂಡಳಿ ಹೊರಡಿಸಿದ್ದ ಸುತ್ತೋಲೆಯನ್ನು ಶುಕ್ರವಾರ ರದ್ದುಪಡಿಸಿತ್ತು. ಕೋರ್ಟ್‌ ಆದೇಶದ ಮರುದಿನವೇ ಪರೀಕ್ಷೆ ಮುಂದೂಡಿ ಮಂಡಳಿ ಮತ್ತೊಂದು ಸುತ್ತೋಲೆ ಹೊರಡಿಸಿದೆ.

‘ವಿದ್ಯಾರ್ಥಿಗಳ ಕಲಿಕಾಮಟ್ಟ, ಕಲಿಕಾ ನ್ಯೂನತೆಗಳು, ಯಾವ ವಿಷಯಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಎನ್ನುವ ಮಾಹಿತಿ ತಿಳಿಯಲು ಮೌಲ್ಯಾಂಕನ ಮಾಡಲು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದು ಮೌಲ್ಯಾಂಕನದ ಉದ್ದೇಶ ಆಗಿರುವುದಿಲ್ಲ’ ಎಂದು ಸುತ್ತೋಲೆಯಲ್ಲಿ ಮಂಡಳಿಯ ಅಧ್ಯಕ್ಷ ರಾಮಚಂದ್ರನ್‌ ಸ್ಪಷ್ಟನೆ ನೀಡಿದ್ದಾರೆ.

ಕೋವಿಡ್‌ ಸಮಯದಲ್ಲಿ ಆಗಿದ್ದ ಕಲಿಕಾ ನಷ್ಟವನ್ನು ಅಳೆಯಲು ಐದು ಮತ್ತು ಎಂಟನೇ ತರಗತಿಗಳ ವಿದ್ಯಾರ್ಥಿಗಳ ಮೌಲ್ಯಾಂಕನಕ್ಕೆ ನಿರ್ಧರಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೂ ಏಕರೂಪದ ಪ್ರಶ್ನೆ‌ಪತ್ರಿಕೆ ಸಿದ್ಧಪಡಿಸಿ, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರವಾನಿಸಲಾಗಿತ್ತು. ಅದಕ್ಕಾಗಿ ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಿತ್ತು. ಬೇರೆ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲು ಪೋಷಕರಿಂದ ಆಕ್ಷೇಪ ವ್ಯಕ್ತವಾದ ನಂತರ ಅಯಾ ಶಾಲೆಗಳಲ್ಲೇ ಪರೀಕ್ಷೆ ನಡೆಸಲು (ಎಷ್ಟೆ ವಿದ್ಯಾರ್ಥಿಗಳಿದ್ದರೂ) ಅವಕಾಶ ನೀಡಿತ್ತು.

ಎಂಟನೇ ತರಗತಿಗೆ ಇದೇ 13ರಿಂದ ಆರು ದಿನಗಳು, ಐದನೇ ತರಗತಿಗೆ 15ರಿಂದ ನಾಲ್ಕು ದಿನಗಳ ಕಾಲ ಪರೀಕ್ಷೆಗಳು ನಡೆಯಬೇಕಿತ್ತು. ಪ್ರತಿ ಪತ್ರಿಕೆಯು ತಲಾ 40 ಅಂಕಗಳ ಪ್ರಶ್ನೆಗಳನ್ನು ಒಳಗೊಂಡಿದ್ದವು. ಒಂದು ಅಂಕದ 20 ಬಹು ಆಯ್ಕೆಯ ಪ್ರಶ್ನೆಗಳು, 20 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯುವ ಪ್ರಶ್ನೆಗಳಿದ್ದು, ಅವುಗಳಲ್ಲಿ ಎರಡು ಅಂಕದ ಐದು ಪ್ರಶ್ನೆಗಳು, ಮೂರು ಅಂಕದ ಎರಡು ಪ್ರಶ್ನೆಗಳು, ನಾಲ್ಕು ಅಂಕದ ಒಂದು ಪ್ರಶ್ನೆಯನ್ನು ಪತ್ರಿಕೆಗಳು ಒಳಗೊಂಡಿದ್ದವು. ಉತ್ತರಿಸಲು ಎರಡು ಗಂಟೆ ಸಮಯ ನಿಗದಿ ಮಾಡಲಾಗಿತ್ತು.

ಮಾರ್ಚ್‌ 6ರಿಂದ 10ರವರೆಗೆ ಮೌಖಿಕ ಪರೀಕ್ಷೆಗಳನ್ನು ನಿಗದಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT