ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ನೇ ತರಗತಿವರೆಗೆ ಪರೀಕ್ಷೆ: ಶೀಘ್ರ ತೀರ್ಮಾನ: ಸಚಿವ ಎಸ್‌. ಸುರೇಶ್ ಕುಮಾರ್

Last Updated 15 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ 1 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸದೆ ತೇರ್ಗಡೆ ಮಾಡುವ ಅಥವಾ ಮೌಲ್ಯಾಂಕನ ಪರೀಕ್ಷೆ ನಡೆಸುವ ಬಗ್ಗೆ ಎರಡು ದಿನಗಳಲ್ಲಿ ನಿರ್ಧರಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇಲಾಖೆ ಆಯುಕ್ತ ಅನ್ಬುಕುಮಾರ್, ಪಠ್ಯಪುಸ್ತಕ ಸಂಘದ ಅಧಿಕಾರಿಗಳು ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ ಅಧಿಕಾರಿಗಳ ಜೊತೆ ಸಚಿವರು ಗುರುವಾರ ಸಭೆ ನಡೆಸಿದ್ದಾರೆ. ಮೌಲ್ಯಾಂಕನ ಪರೀಕ್ಷೆ ಕುರಿತು ಚರ್ಚೆ ನಡೆದರೂ, ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮೂಲಗಳು ಹೇಳಿವೆ.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘3–4 ದಿನಗಳಿಂದ ರಾಜ್ಯ ಪ್ರವಾಸದಲ್ಲಿ ಇದ್ದುದ್ದರಿಂದ ಅಧಿಕಾರಿಗಳ ಜತೆ ಚರ್ಚಿಸಲು ಸಾಧ್ಯವಾಗಿಲ್ಲ. ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು’ ಎಂದರು.

ಈ ಬಾರಿಯೂ ರದ್ದು?: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಿರುವುದರಿಂದ ರಾಜ್ಯದಲ್ಲಿ 1ರಿಂದ 9ನೇ ತರಗತಿವರೆಗೆ ಮೌಲ್ಯಾಂಕನ ಪರೀಕ್ಷೆ ನಡೆಸದೇ ತೇರ್ಗಡೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

‘ಮೌಲ್ಯಾಂಕನ ಪರೀಕ್ಷೆಗೆ ಸಂಬಂಧಿಸಿ ಬುಧವಾರ ಸುತ್ತೋಲೆ ಹೊರಡಿಸಬೇಕಿತ್ತು. ಆದರೆ, ಅಂದೇ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಿದ್ದರಿಂದ ಇಲಾಖೆ ಸುತ್ತೋಲೆಯನ್ನು ತಡೆಹಿಡಿದಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ 2019-20ನೇ ಶೈಕ್ಷಣಿಕ ವರ್ಷದ ಮಾದರಿಯಲ್ಲೇ ಮೌಲ್ಯಾಂಕನ ಪರೀಕ್ಷೆ ಇಲ್ಲದೇ ತೇರ್ಗಡೆ ಮಾಡುವ ಸಾಧ್ಯತೆಯಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮೌಲ್ಯಾಂಕನ ಪರೀಕ್ಷೆ ರದ್ದುಪಡಿಸಿದರೆ, ಈಗಾಗಲೇ ವಿದ್ಯಾರ್ಥಿಗಳಿಗೆ ನಡೆಸಿರುವ ತರಗತಿ, ಗುಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಮಾಪನದ ವಿಶ್ಲೇಷಣೆ ಆಧಾರದಲ್ಲಿ ‘ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ’ಯಲ್ಲಿ (ಎಸ್‌ಎಟಿಎಸ್) ಫಲಿತಾಂಶವನ್ನು ಅಪ್‌ಲೋಡ್ ಮಾಡುವ ಸಾಧ್ಯತೆಯಿದೆ’ ಎಂದೂ ತಿಳಿಸಿದರು.

‘ಮೌಲ್ಯಾಂಕನ ಪರೀಕ್ಷೆ ನಡೆಸದೇ ಇದ್ದರೆ ಶೈಕ್ಷಣಿಕ ಗುಣಮಟ್ಟ ಕುಸಿಯಲಿದೆ. ಹೀಗಾಗಿ ಮೌಲ್ಯಾಾಂಕನ ಪರೀಕ್ಷೆಗೆ ಅವಕಾಶ ನೀಡಬೇಕು’ ಎಂದು ವಿವಿಧ ಖಾಸಗಿ ಶಾಲಾಡಳಿತ ಮಂಡಳಿಗಳ ಸಂಘಟನೆಗಳು ಆಗ್ರಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT