ಶನಿವಾರ, ಡಿಸೆಂಬರ್ 5, 2020
19 °C
ಸಂಪುಟಕ್ಕೆ ಹೊಸಬರ ಸೇರ್ಪಡೆಗೆ ಸಿಗದ ಹಸಿರು ನಿಶಾನೆ l ಬಲವಾಗುತ್ತಿದೆ ವರಿಷ್ಠರ ಹಿಡಿತ

ಸುದ್ದಿ ವಿಶ್ಲೇಷಣೆ: ಪುನಾರಚನೆಯೋ ಬದಲಾವಣೆಯೋ?

ವೈ.ಗ. ಜಗದೀಶ್ Updated:

ಅಕ್ಷರ ಗಾತ್ರ : | |

ಸಚಿವ ಸಂಪುಟ ಪುನಾರಚಿಸುವ ಭರವಸೆಯಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉಮೇದಿಗೆ ಬಿಜೆಪಿ ವರಿಷ್ಠರು ‘ತಡೆ’ ಹಾಕಿದ್ದಾರೆ. ಇದು ಪುನಾರಚನೆಗೆ ಹಾಕಿದ ಅಡ್ಡಿಯೋನಾಯಕತ್ವ ಬದಲಾವಣೆಯತ್ತ ಇಟ್ಟ ಹೆಜ್ಜೆಯೋ ಎಂಬ ಚರ್ಚೆ ಪಕ್ಷದ ವಲಯದಲ್ಲಿ ಶುರುವಾಗಿದೆ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ ವಾಪಸ್ ಆಗಿರುವ ಯಡಿಯೂರಪ್ಪ, ಸಚಿವರ ಪಟ್ಟಿ ಬರುವ ಆಶಾಭಾವನೆಯನ್ನೇನೋ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪ ಮತ್ತು ಅವರ ಆಪ್ತ ಬಣದ ಶಾಸಕರ ನಡೆ, ಮಾತಿನ ವರಸೆಗಳನ್ನು ಗಮನಿಸಿದರೆ ವಿಸ್ತರಣೆ ಅಥವಾ ಪುನಾರಚನೆ ಸದ್ಯಕ್ಕೆ ನಡೆಯುವಂತೆ ಕಾಣಿಸುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ವಿಧಾನಪರಿಷತ್ತಿಗೆ ಚುನಾವಣೆ ಹಾಗೂ ನಾಮನಿರ್ದೇಶನ ನಡೆದಾಗಲೇ (ಜೂನ್‌–ಜುಲೈ) ಸಂಪುಟ ವಿಸ್ತರಣೆಯಾಗಬೇಕಿತ್ತು. ಸೆಪ್ಟೆಂಬರ್‌ನಲ್ಲಿ ನಡೆದಅಧಿವೇಶನಕ್ಕೆ ಮುನ್ನ ಪುನಾರಚನೆ ಮುಗಿಸುವ ವಿಶ್ವಾಸದಲ್ಲಿ ಯಡಿಯೂರಪ್ಪಇದ್ದರು. ಆಗ, ವರಿಷ್ಠರ ಸಮ್ಮತಿಗಾಗಿ ನವ
ದೆಹಲಿಗೆ ಹೋಗಿದ್ದ ಯಡಿಯೂರಪ್ಪ, ಬರಿಗೈಲಿ ವಾಪಸ್ ಆಗಿದ್ದರು. ಬಳಿಕ ಉಪಚುನಾವಣೆ ಜತೆಗೆ ಬಿಹಾರ ವಿಧಾನಸಭೆ ಚುನಾವಣೆ ನಿಗದಿಯಾಯಿತು. ಮತ್ತೆ ಸಂಪುಟ ಕಸರತ್ತು ನನೆಗುದಿಗೆ ಬಿತ್ತು.

ಎರಡು ಉಪಚುನಾವಣೆ ಹಾಗೂ ಪರಿಷತ್ತಿನ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತು. ವಿಸ್ತರಣೆ ಅಥವಾ ಪುನಾರಚನೆ ದಾರಿ ಇನ್ನು ಸಲೀಸು ಎಂಬ ಲೆಕ್ಕಾಚಾರ ನಡೆದಿತ್ತು. ವರಿಷ್ಠರ ವಿಳಂಬ ಧೋರಣೆ ಹಾಗೂ ಡಿ. 7ರಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಅಲ್ಲಿಯವರೆಗೆ ಸಂಪುಟ ಪುನಾರಚನೆ ಕಸರತ್ತಿಗೆ ತಡೆಬೀಳುವ ಸಾಧ್ಯತೆ ಹೆಚ್ಚು.

ನಾಯಕತ್ವ ಬದಲಾವಣೆ: ಸರ್ಕಾರದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರಭಾವ ಹೆಚ್ಚುತ್ತಲೇ ಇರುವುದು ಹಾಗೂ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ನಾಯಕತ್ವ ಬದಲಾವಣೆಗೆ ದಾರಿ ಮಾಡಿಕೊಡುವ ಸಂಭವ ಇದೆ ಎಂದೇ ವಿಶ್ಲೇಷಿಸಲಾಗಿದೆ.

‘ವಿಜಯೇಂದ್ರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ ಎಂದು ಅನೇಕ ಬಾರಿ ಸೂಚಿಸಿದ್ದರೂ ಯಡಿಯೂರಪ್ಪ ಪಾಲಿಸುತ್ತಿಲ್ಲ. ಪಕ್ಷದ ವರ್ಚಸ್ಸು ಮೀರಿ ತಮ್ಮ ಮಗನನ್ನು ಬೆಳೆಸಲು ಅವರು  ಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ–ಪುನಾರಚನೆಗೆ ಅವಕಾಶ ಕೊಡದೇ ಸತಾಯಿಸುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

ಕೋಟೆ ಕಟ್ಟುವತ್ತ ಬಿಎಸ್‌ವೈ: ನಾಯಕತ್ವ ಬದಲಾವಣೆಯ ಸುಳಿವು ಸಿಕ್ಕಿರುವ ಯಡಿಯೂರಪ್ಪ, ಶಾಸಕರ ಬಲ ಕ್ರೋಡೀಕರಣದ ಜತೆಗೆ ವೀರಶೈವ–ಲಿಂಗಾಯತ ಸಮುದಾಯ ಮಾತ್ರವಲ್ಲದೇ ಎಲ್ಲ ಜನವರ್ಗಗಳ ವಿಶ್ವಾಸ ಗೆಲ್ಲುವತ್ತ ಹೆಜ್ಜೆ ಇಟ್ಟಿದ್ದಾರೆ. ಇದ
ಕ್ಕಾಗಿಯೇ, ತರಾತುರಿಯಲ್ಲಿ ನಿಗಮಗಳ ರಚನೆ ಮಾಡಲಾಗುತ್ತಿದೆ. ಮೀಸಲಾತಿ ಹೆಚ್ಚಳದ ಬಗ್ಗೆ ನಿರ್ಣಯ ಕೈಗೊಳ್ಳಲು ಸಚಿವ ಸಂಪುಟ ಉಪ ಸಮಿತಿಯಂತಹ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ವಿವರಿಸಿವೆ.

‘ಜಾತಿಗೊಂದು ನಿಗಮ ರಚನೆಗೆ ಪಕ್ಷದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಹಿಂದೂ ಧರ್ಮ ಹಾಗೂ ರಾ‌ಷ್ಟ್ರೀಯತೆಯ ಹೆಸರಿನಲ್ಲಿ ಜನರನ್ನು ಒಗ್ಗೂಡಿಸುವ ಸಂಘ ಹಾಗೂ ಪಕ್ಷದ ಚಿಂತನೆಗೆ ಯಡಿಯೂರಪ್ಪನಡೆ ವಿರುದ್ಧವಾಗಿದೆ’ ಎಂದು ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಪ್ರತಿನಿಧಿಸುವ ಕರ್ನಾಟಕದ ನಾಯಕ
ರೊಬ್ಬರು ಹೇಳಿದರು.

‘ತಮ್ಮನ್ನು ಬದಲಾವಣೆ ಮಾಡಲು ಪಕ್ಷದ ವರಿಷ್ಠರು ಮುಂದಾದರೆ ನೆರವಿಗೆ ಇರಲಿ ಎಂದು ಕೋಟೆ ಕಟ್ಟಿಕೊಳ್ಳುವುದು
ಯಡಿಯೂರಪ್ಪ ಲೆಕ್ಕಾಚಾರ. ಬುಧವಾರ ನವದೆಹಲಿಗೆ ತೆರಳುವ ಮುನ್ನ ಕೇವಲ 15 ನಿಮಿಷ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಮೂಲಕ ತಮ್ಮ ಬಲ ದೊಡ್ಡದಿದೆ ಎಂದು ಸಂದೇಶ ರವಾನಿಸುವ ಯತ್ನವನ್ನು ಯಡಿಯೂರಪ್ಪ ಮಾಡಿದಂತಿದೆ’ ಎಂದು ಅವರು ವಿವರಿಸಿದರು.

‘2-3 ದಿನಗಳಲ್ಲಿ ಪಟ್ಟಿ’

ಬೆಂಗಳೂರು: ‘ಸಂಪುಟ ವಿಸ್ತರಣೆ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸಿ ಬಂದಿರುವೆ. ವರಿಷ್ಠರಿಂದ ಅನುಮತಿ ದೊರಕುವುದಕ್ಕೆ ಕಾಯುತ್ತಿರುವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೆಹಲಿಯಿಂದ ಪಟ್ಟಿ ಬರಬೇಕು. ಆ ಬಳಿಕವೇ ಮುಂದಿನ ಪ್ರಕ್ರಿಯೆ ಆರಂಭಿಸಲು ಸಾಧ್ಯ. 2–3 ದಿನ
ಗಳಲ್ಲಿ ವರಿಷ್ಠರಿಂದ ಅನುಮೋದನೆಗೊಂಡ ಪಟ್ಟಿ ಬರುವ ಸಾಧ್ಯತೆ ಇದೆ’ ಎಂದರು.

ಪ್ರತ್ಯೇಕ ಸಭೆಯತ್ತ ಶಾಸಕರ ನಡೆ?

ಸಚಿವ ಸಂಪುಟದಿಂದ ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು, ಪಕ್ಷದ ಮೂಲ ನಿವಾಸಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಲು ಮುಂದಾಗಿರುವ ಆ ಪಕ್ಷದ ಕೆಲ ಶಾಸಕರು ‘ಪ್ರತ್ಯೇಕ’ ಸಭೆ ನಡೆಸಲು ಮುಂದಾಗಿದ್ದಾರೆ.

ಸಂಪುಟ ಪುನಾರಚನೆ ಮಾಡುವ ಉತ್ಸುಕತೆಯಿಂದ ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರಸ್ತಾವಕ್ಕೆ ವರಿಷ್ಠರು ಒಪ್ಪಿಗೆ ಸೂಚಿಸಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಯಡಿಯೂರಪ್ಪ, ತಮ್ಮ ಬೆಂಬಲಿಗ ಶಾಸಕರ ಮೂಲಕ ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗಿದೆ.

ಗುರುವಾರ ಸಂಜೆಯೇ ಬೆಂಗಳೂರಿಗೆ ಬರುವಂತೆ 40ಕ್ಕೂ ಹೆಚ್ಚು ಶಾಸಕರಿಗೆ ಸಂದೇಶ ರವಾನೆಯಾಗಿತ್ತು. ‘ಪ್ರತ್ಯೇಕ ಸಭೆ ನಡೆಸಿದರೆ, ಬಿಜೆಪಿಯಲ್ಲಿ ಭಿನ್ನಮತದ ಚಟುವಟಿಕೆ ಎಂಬ ಹಣೆಪಟ್ಟಿ ಬೀಳುವುದರಿಂದ ಪಕ್ಷ ಮುಜುಗರಕ್ಕೆ ಈಡಾಗಬೇಕಾಗುತ್ತದೆ. ಅಂತಹ ಸಭೆ ನಡೆಸಬೇಡಿ ಎಂದು ಪಕ್ಷದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರು ತಮ್ಮನ್ನು ಭೇಟಿ ಮಾಡಿದ ಶಾಸಕರಿಗೆ ಕಿವಿಮಾತು ಹೇಳಿದರು. ಹೀಗಾಗಿ ಸಭೆ ಮುಂದೂಡಿಕೆಯಾಗಿದ್ದು, ಶುಕ್ರವಾರ ನಡೆಯುವ ಸಾಧ್ಯತೆ ಇದೆ’ ಎಂದು ಶಾಸಕರೊಬ್ಬರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು