ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಆರೋಪಿ ಪರ ದುಬಾರಿ ವಕೀಲರ ವಾದ!: ಹೈಕೋರ್ಟ್‌ನಲ್ಲಿ ಎನ್ಐಎ ಪ್ರಾಸಿಕ್ಯೂಷನ್ ಆತಂಕ

Last Updated 17 ಜೂನ್ 2022, 8:53 IST
ಅಕ್ಷರ ಗಾತ್ರ

ಬೆಂಗಳೂರು:‘ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ–1967ರ (ಯುಎಪಿಎ) ಅಡಿಯಲ್ಲಿ ಜೈಲಿನಲ್ಲಿರುವ ಕೈದಿಗಳು; ನಾವೆಲ್ಲಾ ಅತ್ಯಂತ ಬಡ ಕುಟುಂಬದಿಂದ ಬಂದಿದ್ದೇವೆ ಎಂದು ಕೋರ್ಟ್‌ಗಳಿಗೆ ಜಾಮೀನು ಅರ್ಜಿ, ಪ್ರಮಾಣ ಪತ್ರ, ಮೆಮೊ ಸಲ್ಲಿಸುವಾಗ ಹೇಳುತ್ತಾರೆ. ಆದರೆ, ಇವರ ಪರವಾಗಿ ವಿಚಾರಣಾ ಮತ್ತು ಹೈಕೋರ್ಟ್‌ಗಳಲ್ಲಿ ವಾದ ಮಂಡಿಸಲು ಹತ್ತಾರು ಲಕ್ಷ ರೂಪಾಯಿ ಶುಲ್ಕ ಪಡೆಯುವ ಪ್ರತಿಷ್ಠಿತ ಹಿರಿಯ ವಕೀಲರು ಹಾಜರಾಗುತ್ತಾರೆ. ಹಾಗಾದರೆ, ಈ ಬಡ ಆರೋಪಿಗಳು ಪ್ರತಿಷ್ಠಿತ ಹಿರಿಯ ವಕೀಲರನ್ನು ನಿಯೋಜಿಸಿ ಅವರಿಗೆ ಹತ್ತಾರು ಲಕ್ಷ ರೂಪಾಯಿಗಳನ್ನು ಎಲ್ಲಿಂದ ತಂದು ಕೊಡುತ್ತಾರೆ...?

ಇಂತಹುದೊಂದು ಪ್ರಶ್ನೆಯನ್ನು ರಾಷ್ಟ್ರೀಯ ತನಿಖಾದಳದ (ಎನ್‌ಐಎ) ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್ ಅವರು, ನ್ಯಾಯಮೂರ್ತಿ ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಮಂಡಿಸುವ ಮೂಲಕ, ‘ಸ್ವಘೋಷಿತ ಬಡ ಆರೋಪಿಗಳ ಪರ ವಾದ ಮಂಡಿಸುವ ಹಿರಿಯ ವಕೀಲರಿಗೆ ಅಂತರರಾಷ್ಟ್ರೀಯವಾಗಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯಾರು ಹಣ ಸಂದಾಯ ಮಾಡುತ್ತಾರೆ ಎಂಬ ಅಂಶವನ್ನು ದಯವಿಟ್ಟು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ’ ಎಂದು ಮನವಿ ಮಾಡಿದರು.

ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಅಂಡ್‌ ಸಿರಿಯಾ) ಉಗ್ರ ಚಟುವಟಿಕೆಗಳಲ್ಲಿ ಸೇರ್ಪಡೆಯಾಗಲು ಪ್ರಚೋದಿಸುತ್ತಿದ್ದ ಮತ್ತು ಐಎಸ್‌ಗೆ ದೇಣಿಗೆ ಸಂಗ್ರಹ ಮಾಡಿ ಮುಗ್ಧ ಮುಸ್ಲಿಂ ಯುವಕರನ್ನು ಸಿರಿಯಾಕ್ಕೆ ಕಳುಹಿಸಲು ನೆರವು ನೀಡುತ್ತಿದ್ದ ಆರೋಪದ ಮೇರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ನಗರದ ಫ್ರೇಜರ್‌ ಟೌನ್‌ ನಿವಾಸಿ 33 ವರ್ಷದ ಆರೋಪಿ ಇರ್ಫಾನ್‌ ನಾಸಿರ್ ಅಲಿಯಾಸ್ ಇರ್ಫಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಆರೋಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್‌ ಚೌಟ, ‘ಆರೋಪಿ ಯಾವುದೇ ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ವಾಸ್ತವವಾಗಿ ಐಎಸ್‌ ಸಂಘಟನೆಯನ್ನು 2015ರಲ್ಲೇ ಅಂತರರಾಷ್ಟ್ರೀಯವಾಗಿ ಮತ್ತು ಭಾರತದಲ್ಲೂ ನಿಷೇಧಿತ ಉಗ್ರ ಸಂಘಟನೆ ಎಂದು ಘೋಷಿಸಲಾಗಿದೆ. ಈ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿರುವುದು 2020ರ ಸೆಪ್ಟೆಂಬರ್ 19ರಂದು. ಹಾಗಾಗಿ, ಇದು ಯುಎಪಿಎ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ. ಆದ್ದರಿಂದ, ಆರೋಪಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.

ಇದನ್ನು ಅಲ್ಲಗಳೆದ ಪ್ರಸನ್ನಕುಮಾರ್, ಐಎಸ್‌ ಸಂಘಟನೆ 1999–2000ನೇ ಇಸವಿಯಿಂದಲೇ ಕಾರ್ಯ ನಿರ್ವಹಿಸಲು ಆರಂಭಿಸಿತ್ತು. ಮೊದಲು ‘ಅಲ್‌ ಕೈದಾ‘ ಹೆಸರಿನಲ್ಲಿ ನಂತರ ‘ದಹೀಶ್‌‘ ಹೆಸರಿನಲ್ಲಿ, 2012ರಲ್ಲಿ, ‘ಅಲ್‌ ನುಸ್ರಾ‘ ಹೆಸರಿನಲ್ಲಿ, 2013ನೇ ಇಸವಿಯಲ್ಲಿ, ‘ಐಎಸ್‌ಐಎಲ್‌’ (ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಅಂಡ್‌ ದಿ ಲೆವೆಂತ್‌) ಹೆಸರಿನಲ್ಲಿ ನಂತರ ಐಎಸ್‌ ಹೆಸರಿನಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೀಡಿರುವ ವರದಿ ಅನುಸಾರ ಈ ಉಗ್ರ ಸಂಘಟನೆಯು ಈತನಕ ವಿಶ್ವದಾದ್ಯಂತ ಒಂದು ಲಕ್ಷ ನಾಗರಿಕರು ಮತ್ತು 10 ಸಾವಿರ ಮಕ್ಕಳನ್ನು ಕೊಂದಿರುವ ಆರೋಪ ಇದೆ’ ಎಂದು ವಿವರಿಸಿದರು.

‘ಐಎಸ್ ಸದಸ್ಯರು 2015ಕ್ಕೂ ಮೊದಲಿಗೆ ದೇವತೆಗಳೇನೂ ಆಗಿರಲಿಲ್ಲ. 2015ನೇ ಇಸವಿಯ ಹಿಂದೆ ಕೂಡಾ ಹಲವು ದುಷ್ಕೃತ್ಯ ಎಸಗಿರುವ ಆರೋಪಗಳಿವೆ. ಸಿರಿಯಾ ಭಾರತದೊಂದಿಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದೆ. ಆರೋಪಿಗಳ ಇಂತಹ ಕೃತ್ಯದಿಂದ ಉಭಯ ದೇಶಗಳ ನಡುವಣ ಬಾಂಧವ್ಯ ಹಾಳಾಗುತ್ತದೆ. ಆರೋಪಿಗಳನ್ನು ವಶದಲ್ಲಿರಿಸಿಕೊಂಡೇ ವಿಚಾರಣೆ ನಡೆಸಬೇಕಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬಾರದು’ ಎಂದು ಪ್ರತಿಪಾದಿಸಿದರು.

ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳಿದ್ದು, ಇವರಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು ಒಬ್ಬ ನವದೆಹಲಿ ನಿವಾಸಿಯಾಗಿದ್ದರೆ ಉಳಿದವರೆಲ್ಲರೂ ಬೆಂಗಳೂರು ನಿವಾಸಿಗಳು. ಮೊಹಮದ್ ಶಿಹಾಬ್‌ ಸಿದ್ದಿಕಿ ಎಂಬಾತ ತಲೆಮರೆಸಿಕೊಂಡಿದ್ದಾನೆ. ಐವರ ವಿರುದ್ಧವೂ ಯುಎಪಿಎ ಕಾಯ್ದೆಯ ಕಲಂ 17 ಮತ್ತು 18ರ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

ನ್ಯಾಯಪೀಠ ಅರ್ಜಿದಾರ ಇರ್ಫಿಯ ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಕಾಯ್ದಿರಿಸಿದೆ.

‘ಆರೋಪಿಗಳು 2013ರಲ್ಲಿ ಬೆಂಗಳೂರಿನಲ್ಲಿ ‘ಕುರಾನ್ ಸರ್ಕಲ್‌’ ಹೆಸರಿನಲ್ಲಿ ಸಂಘಟನೆಯೊಂದನ್ನು ರಚಿಸಿಕೊಂಡು ಅಮಾಯಕ ಮುಸ್ಲಿಂ ಯುವಕರನ್ನು ಸೆಳೆದು ಅವರಿಗೆ ಹಣ ಕೊಟ್ಟು ವಿಮಾನದ ಟಿಕೆಟ್‌ಗಳನ್ನು ತೆಗೆಸಿ ಸಿರಿಯಾಕ್ಕೆ ಇಸ್ಲಾಮಿಕ್ ಸ್ಟೇಟ್‌ ಪರ ಹೋರಾಡಲು ಕಳುಹಿಸಿಕೊಡುತ್ತಿದ್ದರು’ ಎಂಬುದು ಎನ್‌ಐಎ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT