ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಜೂ.10ಕ್ಕೆ 30 ಲಕ್ಷ ಪ್ರಕರಣ, ಮೃತರ ಸಂಖ್ಯೆ 35 ಸಾವಿರಕ್ಕೆ ಏರಿಕೆ –ವರದಿ

Last Updated 15 ಮೇ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಜೂ.10ರ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 30ಲಕ್ಷಕ್ಕೆ ಏರಿಕೆಯಾಗಲಿದೆ. ಮೃತರ ಸಂಖ್ಯೆ 35,000ಕ್ಕೆ ತಲುಪಲಿದೆ ಎಂದು ತಜ್ಞರ ನೆರವಿನಿಂದ ನಡೆಸಲಾದ ಅಧ್ಯಯನದಿಂದ ಸರ್ಕಾರೇತರ ಸಂಸ್ಥೆಯೊಂದು ಅಂದಾಜಿಸಿ.

ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ವರದಿಯಾಗುತ್ತಿರುವ ಪ್ರಕರಣ ಹಾಗೂ ಸೋಂಕು ದೃಢ ಪ್ರಮಾಣವನ್ನು ಆಧರಿಸಿ ಸರ್ಕಾರೇತರ ಸಂಸ್ಥೆಯಾದ ಪ್ರಾಕ್ಸಿಮಾ ‘ಜೀವನ್ ರಕ್ಷಾ’ ಯೋಜನೆಯಡಿ ಅಧ್ಯಯನ ನಡೆಸಿದೆ. ಇದಕ್ಕೆ ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನವು ತಾಂತ್ರಿಕ ಸಹಕಾರ ನೀಡಿದೆ.

ಮೇ 10ರಿಂದ ಜೂನ್ 10ರ ಅವಧಿಯಲ್ಲಿ 10 ಲಕ್ಷ ಪ್ರಕರಣಗಳು ದೃಢಪಡಲಿವೆ. ಅದೇ ರೀತಿ, ಈ ಅವಧಿಯಲ್ಲಿ 15 ಸಾವಿರ ಮರಣ ಪ್ರಕರಣಗಳು ವರದಿಯಾಗಲಿವೆ. ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಪರೀಕ್ಷೆ, ಸಂಪರ್ಕ ಪತ್ತೆ ನಡೆಸಬೇಕು. ವೈದ್ಯಕೀಯ ವ್ಯವಸ್ಥೆಯನ್ನು ಬಲಗೊಳಿಸಿ, ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

6 ಲಕ್ಷ ದಾಟಿದ ಸಕ್ರಿಯ ಪ್ರಕರಣ: ರಾಜ್ಯದಲ್ಲಿ 24 ಗಂಟೆಗಳ ಅವಧಿಯಲ್ಲಿ 41,664 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷದ ಗಡಿ ದಾಟಿದೆ.

ಈ ವರ್ಷ ಫೆಬ್ರವರಿ ಅಂತ್ಯಕ್ಕೆ 5,804 ಸಕ್ರಿಯ ಪ್ರಕರಣಗಳಿದ್ದವು. ಬಳಿಕ ಸೋಂಕಿತರ ಸಂಖ್ಯೆ ಏರಿಕೆ ಕಂಡ ಪರಿಣಾಮ ಸಕ್ರಿಯ ಪ್ರಕರಣಗಳು ಕೂಡ ಹೆಚ್ಚಳವಾಗಿದೆ. ಈ ತಿಂಗಳು 15 ದಿನಗಳಲ್ಲಿಯೇ 6.48 ಲಕ್ಷ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಕೋವಿಡ್ ಪರೀಕ್ಷೆಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, ಒಂದು ದಿನದ ಅವಧಿಯಲ್ಲಿ 1.18 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣ ಮಾತ್ರ ಶೇ 35.20ಕ್ಕೆ ಏರಿಕೆಯಾಗಿದೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 94 ಮಂದಿ ಸೇರಿದಂತೆ ರಾಜ್ಯದಲ್ಲಿ 349 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿಯಲ್ಲಿ 24 ಮಂದಿ, ಕಲಬುರ್ಗಿಯಲ್ಲಿ 21 ಮಂದಿ, ತುಮಕೂರಿನಲ್ಲಿ 18 ಮಂದಿ, ಶಿವಮೊಗ್ಗ ಹಾಗೂ ಮೈಸೂರಿನಲ್ಲಿ ತಲಾ 15 ಮಂದಿ, ಬಾಗಲಕೋಟೆಯಲ್ಲಿ 24 ಮಂದಿ, ಹಾಸನದಲ್ಲಿ 11 ಮಂದಿ, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ಮಂಡ್ಯದಲ್ಲಿ ತಲಾ 10 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 21,434ಕ್ಕೆ ಏರಿಕೆಯಾಗಿದೆ.

13 ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ ಕಂಡಿದೆ. 13,402 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಮೈಸೂರು (2,489), ಹಾಸನ (2,443), ತುಮಕೂರು (2,302), ದಕ್ಷಿಣ ಕನ್ನಡ (1,787), ಬಳ್ಳಾರಿ (1,622), ಬೆಳಗಾವಿ (1,502) ಜಿಲ್ಲೆಯಲ್ಲಿ ಅಧಿಕ ‍ಪ್ರಕರಣಗಳು ವರದಿಯಾಗಿವೆ. ಕೋವಿಡ್ ಪೀಡಿತರಲ್ಲಿ 34,425 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 15.44 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT