ಭಾನುವಾರ, ಮೇ 22, 2022
24 °C

ತಾನೇ ಎತ್ತಿದ ಕತ್ತಿ ತನಗೇ ಭಾರವಾದಾಗ: ಕೃಷಿ ಕಾಯ್ದೆ ಬಗ್ಗೆ ತಜ್ಞರ ವಿಶ್ಲೇಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟಕ್ಕೆ ಕೊನೆಗೂ ಮಣಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಘೋಷಣೆ ಮಾಡಿದ್ದಾರೆ. ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೈಗೊಂಡ ಈ ನಿರ್ಧಾರ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ‘ವಿವಾದಾತ್ಮಕ ಕೃಷಿ ಕಾಯ್ದೆ ಹಿಂದಕ್ಕೆ: ಕಾರಣಗಳೇನು?’ ಎನ್ನುವ ಕುರಿತು ‘ಪ್ರಜಾವಾಣಿ’ ಶನಿವಾರ ಆಯೋಜಿಸಿದ್ದ ಫೇಸ್‌ ಬುಕ್‌ ಲೈವ್‌ ಸಂವಾದದಲ್ಲಿ ಅತಿಥಿಗಳು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

***

‘ನಷ್ಟ ಪರಿಹಾರವೂ ಹೊರೆಯಾಗುತ್ತಿತ್ತು’

ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರದಲ್ಲಿ ರಾಜಕೀಯ ಹೊರತಾಗಿಯೂ ಕಾರಣಗಳಿವೆ. ಹೊಸ ಕಾಯ್ದೆಗಳಿಂದ ಕೃಷಿ ಕ್ಷೇತ್ರದ ಲಾಭವೆಲ್ಲ ಕಾರ್ಪೊರೇಟ್ ಕಂಪನಿಗಳ ಪಾಲಾಗುತ್ತಿದೆ. ಆದರೆ, ಪ್ರಕೃತಿ ವಿಕೋಪ ರೀತಿಯ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ರೈತರಿಗೆ ಪರಿಹಾರ ಕೊಡಬೇಕಾದ ಜವಾಬ್ದಾರಿ ಸರ್ಕಾರದ್ದೆ ಆಗಿರುತ್ತದೆ. ಎಪಿಎಂಪಿಯಿಂದ ಹೊರಗೆ ನಡೆಯುವ ವಹಿವಾಟನ್ನೂ ಅಧಿಕೃತಗೊಳಿಸಿದರೆ ಸರ್ಕಾರಕ್ಕೆ ವರಮಾನದ ಮೂಲವೊಂದು ಕಡಿತವಾಗುತ್ತದೆ. 2024ರ ವೇಳೆಗೆ ಕೃಷಿ ಕ್ಷೇತ್ರದಲ್ಲಿ ಆಗುವ ನಷ್ಟಕ್ಕೆ ಪರಿಹಾರವೇ ದೊಡ್ಡ ಹೊರೆಯಾಗಲಿದೆ. ತಾನೇ ಎತ್ತಿದ ಕತ್ತಿ ತಮಗೇ ಭಾರವಾಗುತ್ತದೆ ಎಂಬುದು ಪ್ರಧಾನಿಗೆ ಅರ್ಥವಾಗಿದೆ. ಬೆಲೆ ಏರಿಕೆ ಬಿಸಿಯೂ ಕೃಷಿ ವಲಯಕ್ಕೆ ತಟ್ಟಿದೆ. ಡೀಸೆಲ್ ಬೆಲೆಯಿಂದ ಉಳುಮೆ ವೆಚ್ಚ ಹೆಚ್ಚಾಗಿದೆ. ಇದರ ನಡುವೆ ನುಂಗಲಾಗದ ಉಗುಳನ್ನು ರೈತರ ಪರವಾದ ಘೋಷಣೆ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ.

–ಕೆ.ಪಿ. ಸುರೇಶ್‌, ಪ್ರಗತಿಪರ ರೈತ, ಲೇಖಕ

***

‘ದೀರ್ಘಾವಧಿ ಕಾರ್ಯತಂತ್ರಗಳು ಇವೆ’

ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಧಾನಿ ನಿರ್ಧಾರದಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಕಾರ್ಯತಂತ್ರಗಳಿವೆ. ಎರಡನೇ ಅವಧಿಯ ಕೊನೆಯ ಎರಡು ವರ್ಷದ ಕಾರ್ಯ ಯೋಜನೆ ಮುಖ್ಯವಾಗುತ್ತದೆ. ಹತ್ತಿರದಲ್ಲಿರುವ ಪಂಜಾಬ್‌, ಉತ್ತರ ಪ್ರದೇಶದ ಚುನಾವಣೆಯಲ್ಲಿ ತೊಂದರೆ ಆಗಬಹುದು ಎಂಬ ಕಾರಣದ ಜೊತೆಗೆ 2024ರ ಲೋಕಸಭೆಯ ಚುನಾವಣೆಯಲ್ಲೂ ತೊಂದರೆ ಆಗಬಹುದೆಂಬ ಲೆಕ್ಕಾಚಾರ ಇದ್ದಂತಿದೆ. ಒಂದು ಹೆಜ್ಜೆ ಹಿಂದಕ್ಕೆ ಇಟ್ಟರೆ, ಎರಡು ಹೆಜ್ಜೆ ಬೇರಿ ದಿಕ್ಕಿನಲ್ಲಿ ಚಲಿಸುತ್ತಾರೆ ಎಂಬ ಮಾತಿದೆ. ಆದೇ ರೀತಿ ಈ ಬೆಳವಣಿಗೆಯ ಪ್ರಯತ್ನವೂ ಇರಬಹುದು. 8 ವರ್ಷಗಳಲ್ಲಿ ಈ ನಾಯಕತ್ವ ಹಿಂದಿಕ್ಕಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಆದರೆ, ರೈತರ ಹೋರಾಟ ವಿರೋಧ ಪಕ್ಷಕ್ಕೆ ಮಹತ್ವದ ವಿಷಯ ಕೊಟ್ಟಂತಾಗಿತ್ತು. ಕಾಯ್ದೆ ತಿದ್ದುಪಡಿ ಹಿಂಪಡೆದ ಮಾತ್ರಕ್ಕೆ ಮುಂದಿನ ಚುನಾವಣೆಯಲ್ಲಿ ಇದು ವಿಷಯವಾಗಲಾರದು ಎಂಬುದು ತಪ್ಪು.

–ಸಂದೀಪ್ ಶಾಸ್ತ್ರಿ, ರಾಜಕೀಯ ವಿಶ್ಲೇಷಕ

***

‘ಆಶಾದಾಯಕ ಆದರೂ ಎಚ್ಚರಿಕೆ ಬೇಕು’

ಇಡೀ ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ನೆನಪಿಸುವಂತೆ ರೈತ ಚಳವಳಿ ನಡೆದಿದೆ. ದೇಶದ ಕೃಷಿ ಅಸ್ಥಿತ್ವದ ಮೂಲಕ್ಕೇ ಪೆಟ್ಟು ಕೊಡುವ ಹುನ್ನಾರ ನಡೆದಿತ್ತು. ಇದಕ್ಕೆ ಉತ್ತರವನ್ನು ರೈತ ಚಳವಳಿ ಕೊಟ್ಟಿದೆ. ಸಮಸ್ಯೆ ಆಧಾರಿತ ಸಾಂಘಿಕ ಹೋರಾಟಕ್ಕೆ ಜಯ ಸಿಕ್ಕಿದೆ. ದೈತ್ಯ ಶಕ್ತಿಯನ್ನು ಜನಶಕ್ತಿ ಹಿಮ್ಮೆಟ್ಟಿಸಿದೆ. ಪರಿಸ್ಥಿತಿಯ ಅರಿವು ಕೃಷಿಕರಿಗೆ ಮತ್ತು ನಾಗರಿಕರಿಗೆ ಆಗಿದೆ. ಗಂಭೀರ ಸಮಸ್ಯೆಗಳ ವಿರುದ್ಧ ನಮ್ಮ ಪ್ರತಿಕ್ರಿಯೆ ಹೇಗಿರಬೇಕು ಎಂಬುದು ಗೊತ್ತಾಗಿದೆ. ಸರ್ಕಾರದ ಈ ರೀತಿಯ ನಿರ್ಧಾರಗಳ ವಿರುದ್ಧ ಇದೇ ರೀತಿಯ ಪ್ರತಿರೋಧ ಮರುಕಳಿಸಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಸದ್ಯಕ್ಕೆ ಆಶಾದಾಯಕ ಆದರೂ, ಮುಂದಿನ ದಿನಗಳಲ್ಲಿ ಸರ್ಕಾರ ಮತ್ತೆ ರೈತ ವಿರೋಧಿ ನಿಲುವ ತಾಳದಂತೆ ನೋಡಿಕೊಳ್ಳಬೇಕಾಗಿದೆ. ಆ ಎಚ್ಚರಿಕೆಯೂ ರೈತ ಸಮುದಾಯದಲ್ಲಿ ಇರಬೇಕಾಗುತ್ತದೆ.

–ಸುನಂದಾ ಜಯರಾಂ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು

***

‘ಪ್ರಯೋಜನ ಇಲ್ಲದ ಕಾಯ್ದೆ ಎಂದು ಅರ್ಥವಾಗಿದೆ’

ಕಳೆದ ಒಂದು ವರ್ಷದಿಂದ ಇಡೀ ದೇಶ ಮಾನಸಿಕ ತೊಳಲಾಟದಲ್ಲಿತ್ತು. ಭವಿಷ್ಯದ ಬಗ್ಗೆ ರೈತರಲ್ಲಿ ಆತಂಕ ಇತ್ತು. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಬಗ್ಗೆ ರಾಜಕೀಯ ಲೆಕ್ಕಾಚಾರದ ಬಗ್ಗೆ ಹೆಚ್ಚಿಗೆ ಹೇಳುವುದಿಲ್ಲ. ರಾಜಕೀಯ ಅಷ್ಟೇ ಅಲ್ಲದೇ ಆರ್ಥಿಕ, ನೀತಿ ನಿರೂಪಣೆ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ. ಆರ್ಥಿಕ ತಜ್ಞರು ನೀಡುವ ಸಲಹೆ ಮೇರೆಗೆ ನೀತಿ ನಿರೂಪಣೆ ಮಾಡಲಾಗುತ್ತದೆ. ಜಾಗತಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದ ಬದಲಾವಣೆ ಕಾರಣದಿಂದ ಸ್ಥಿತ್ಯಂತರ ಆಗಿದೆ. ಈ ಹೊಸ ಕಾಯ್ದೆಗಳಿಂದ ಸಕಾರಾತ್ಮಕ ಪ್ರತಿಫಲ ದೊರಕುವುದಿಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತಜ್ಞರು ತಂದಿರಬಹುದು. ಮುಂದಿನ ದಿನಗಳಲ್ಲಿ ಇದರಿಂದ ಒಳ್ಳೆಯದಾಗುವುದಿಲ್ಲ ಎಂಬ ಸಲಹೆ ನೀಡಿರಬೇಕು. ಕೃಷಿ ಪ್ರಧಾನ ರಾಷ್ಟ್ರದಲ್ಲಿ ರಾಷ್ಟ್ರೀಯ ಕೃಷಿ ನೀತಿಯೇ ಇಲ್ಲದಿರುವುದು ವಿಷಾದದ ಸಂಗತಿ. ಸಮಗ್ರ ನೀತಿ ರೂಪಿಸುವ ಅಗತ್ಯವಿದೆ.

-ರಾಜೇಂದ್ರ ಪೋದ್ದಾರ್, ಕರ್ನಾಟಕ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ನಿರ್ದೇಶಕ

ಪೂರ್ಣ ಸಂವಾದ ವೀಕ್ಷಿಸಲು: www.facebook.com/prajavani.net

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು