ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಹಾನಿ: ಸರ್ಕಾರ ರಾಜಕಾರಣದಲ್ಲಿ ಮುಳುಗಿ ಮನುಷ್ಯತ್ವ ಮರೆಯಬಾರದು– ಎಚ್‌ಡಿಕೆ

Last Updated 20 ನವೆಂಬರ್ 2021, 6:21 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್–19ನಿಂದಾಗಿ ತತ್ತರಿಸಿದ್ದ ಜನರು ಸಹಜ ಜೀವನಕ್ಕೆ ವಾಪಸ್ ಆಗುತ್ತಿರುವಾಗಲೇ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರ ನೆರವಿಗೆ ಮುಂದಾಗಬೇಕು. ರಾಜಕಾರಣದಲ್ಲಿ ಮುಳುಗಿ ಮನುಷ್ಯತ್ವ ಮರೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.‌

ಈ ಸಂಬಂಧ ಕೂ, ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಅವರು,'ಕೋವಿಡ್‌ ಮಹಾಮಾರಿಯಿಂದ ತತ್ತರಿಸಿದ್ದ ಜನ ಈಗ ಮಳೆಯಿಂದ ಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೆ ಅವರು ಬದುಕು ಕಟ್ಟಿಕೊಳ್ಳುವ ಮುನ್ನವೇ ಮಳೆ ಸಂಕಷ್ಟಕ್ಕೀಡು ಮಾಡಿದೆ. ಬೆಳೆದ ಬೆಳೆ ಕಣ್ಮುಂದೆಯೇ ಕೊಚ್ಚಿಹೋಗುತ್ತಿದೆ. ನಾಡಿಗೆ ಅನ್ನ ಕೊಡುವ ಅನ್ನದಾತ ಆಪತ್ತಿನಲ್ಲಿದ್ದಾನೆ. ಮಾಧ್ಯಮಗಳಿಗೆ ಅಧಿಕಾರಿಗಳೇ ನೀಡಿರುವ ಮಾಹಿತಿಯಂತೆ ಜುಲೈ-ನವೆಂಬರ್‌ʼನಲ್ಲಿ 7.31 ಲಕ್ಷ ಹೆಕ್ಟೇರ್‌ ಅಥವಾ ಅದಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ಮಳೆ ಪಾಲಾಗಿದೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

'ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ, ಹಳೆ ಮೈಸೂರು, ಬಯಲು ಸೀಮೆ ಸೇರಿ ರಾಜ್ಯದ ಉದ್ದಗಲಕ್ಕೂ ಮಳೆಯ ರುದ್ರನರ್ತನ ಮುಂದುವರಿದಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಿದೆ. ಚಿಕ್ಕಮಗಳೂರು, ಕೊಡಗಿನಲ್ಲಿ ಕಾಫಿ ತೋಟಗಳು ಪೂರ್ಣ ನಾಶವಾಗಿವೆ. ಬಯಲುಸೀಮೆ ಜಿಲ್ಲೆಗಳಲ್ಲಿ ಮಳೆ ಪ್ರಳಯವನ್ನೇ ಸೃಷ್ಟಿಸಿದೆ. ಕೆರೆಕಟ್ಟೆಗಳು ಒಡೆದುಹೋಗಿ ಗ್ರಾಮಗಳಿಗೆ ಸಂಪರ್ಕವೇ ತಪ್ಪಿಹೋಗಿದೆ. ಹಳ್ಳಿಗಳು ನಡುಗಡ್ಡೆಗಳಾಗಿವೆ. ತೋಟಗಳು ಕೆರೆಗಳಾಗಿವೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ,'ಕೋಲಾರ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು ಬೆಳೆ ನಾಶವಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಆ ಒಂದು ಜಿಲ್ಲೆಯಲ್ಲೇ 34,447 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ಮಳೆ ನುಂಗಿದೆ. 14 ಜಿಲ್ಲೆಗಳಲ್ಲಿ 48,000 ಹೆಕ್ಟೇರ್‌ʼಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಫಸಲು ರೈತರ ಕೈಗೆ ಸಿಕ್ಕಿಲ್ಲ. ಕರ್ನಾಟಕದ ರೈತರು ಇಷ್ಟು ದೊಡ್ಡ ಸಂಕಷ್ಟಕ್ಕೆ ಹಿಂದೆಂದೂ ಸಿಲುಕಿರಲಿಲ್ಲ' ಎಂದು ತಿಳಿಸಿದ್ದಾರೆ.

ಮುಂದುವರಿದು, 'ಈ ವಿಷಯದಲ್ಲಿ ರಾಜ್ಯ ಸರಕಾರ ಮಾಡಿರುವುದೇನು? ಸಚಿವರು ಎಲ್ಲಿದ್ದಾರೆ? ಅಧಿಕಾರಿಗಳೇನು ಮಾಡುತ್ತಿದ್ದಾರೆ? ಸರಕಾರ ಸಭೆಗಳಿಗೆ ಸೀಮಿತವಾದರೆ ಪ್ರಯೋಜನ ಶೂನ್ಯ. ಅಧಿಕಾರಿಗಳು ಹಳ್ಳಿಗಳತ್ತ ನಡೆಯಲಿ. ಜಿಲ್ಲೆಗಳಿಗೆ ಕೋವಿಡ್‌ ಉಸ್ತುವಾರಿಗಳೆಂದು ನೇಮಕವಾದ ಸಚಿವರು ಎಲ್ಲಿ? ಅನೇಕ ಸಚಿವರಂತೂ ಜಿಲ್ಲೆಗಳ ಕಥೆ ಹಾಗಿರಲಿ, ಅವರ ಕಚೇರಿಗಳಲ್ಲೇ ಪತ್ತೆ ಇಲ್ಲ. ಮುಖ್ಯಮಂತ್ರಿಗಳು ಕೂಡಲೇ ಸಚಿವರನ್ನು ಜಿಲ್ಲೆಗಳಿಗೆ ಅಟ್ಟಬೇಕು!' ಎಂದು ಒತ್ತಾಯಿಸಿದ್ದಾರೆ.

ಹಾಗೆಯೇ, ‘ಮಳೆ-ಬೆಳೆ ಪರಿಹಾರ ಕಾರ್ಯಕ್ರಮಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಬೇಕು.ಇಷ್ಟೆಲ್ಲ ಅನಾಹುತ ಆಗುತ್ತಿದ್ದರೂ ಕೃಷಿ ಸಚಿವರು, ಅವರ ಇಲಾಖೆ ಹಾಗೂ ಕಂದಾಯ ಇಲಾಖೆ ಏನು ಮಾಡುತ್ತಿದೆ? ಈಗಾಗಲೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಲಾಗಿದೆಯಾ? ಬೆಳೆ ವಿಮೆ ಪರಿಸ್ಥಿತಿ ಏನು?' ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

'ಕಾಟಾಚಾರಕ್ಕೆ ಸರ್ವೇ ಮಾಡಿ ಸಭೆಗಳಲ್ಲಿ ಕಾಲಹರಣ ಮಾಡುವುದು ಬೇಡ. ಜನಸ್ವರಾಜ್‌ ಯಾತ್ರೆ ಹೆಸರಿನಲ್ಲಿ ಜಾತ್ರೆ ಮಾಡುವ ಸಮಯ ಇದಲ್ಲ. ಶಂಖ ಊದಿಕೊಂಡು ಹೋಗಿ ರೈತರ ಕಣ್ಣೀರನ್ನು ಅಣಕಿಸಬೇಡಿ. ಕೃಷಿ ಕಾಯ್ದೆ ವಾಪಸ್‌ ಪಡೆದೆವು ಎಂದು ಬೀಗುತ್ತಾ ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಸರಕಾರವು ಅಧಿಕಾರ ರಾಜಕಾರಣದಲ್ಲಿ ಮುಳುಗಿ ಮನುಷ್ಯತ್ವ ಮರೆಯಬಾರದು' ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT