ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಯವಾಯಿತು ‘ವಿಜಯನಗರ’ ಜಿಲ್ಲೆ!

ಸ್ವಾಗತ–ವಿರೋಧದ ನಡುವೆಯೇ 31ನೇ ಜಿಲ್ಲೆ ಅಸ್ತಿತ್ವಕ್ಕೆ
Last Updated 8 ಫೆಬ್ರುವರಿ 2021, 15:23 IST
ಅಕ್ಷರ ಗಾತ್ರ

ಬಳ್ಳಾರಿ/ಹೊಸಪೇಟೆ:ನಿರಂತರ ಪ್ರತಿಭಟನೆ, ಆಕ್ಷೇಪಣೆ ಹಾಗೂ ಹೊಸ ಜಿಲ್ಲೆಯ ಪ್ರತಿಪಾದನೆಗಳ ನಡುವೆಯೇ ರಾಜ್ಯದಲ್ಲಿ 31ನೇ ಜಿಲ್ಲೆಯಾಗಿ ‘ವಿಜಯನಗರ’ ಉದಯವಾಗಿದೆ. ಹೊಸ ಜಿಲ್ಲೆಯ ರಚನೆಯ ಪ್ರಮುಖ ‍ಪ್ರೇರಕ ಶಕ್ತಿಯಾಗಿದ್ದ ಸಚಿವ ಆನಂದ್‌ಸಿಂಗ್‌ ಅವರ ಪ್ರಯತ್ನವೂ ಕೈಗೂಡಿದೆ.

ಸೋಮವಾರ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು, ವಿಜಯನಗರ ಜಿಲ್ಲೆಗೆ6 ತಾಲ್ಲೂಕು, ಬಳ್ಳಾರಿಗೆ 5 ತಾಲ್ಲೂಕನ್ನು ಸೇರಿಸಲಾಗಿದೆ. ಆ ಮೂಲಕ ಬಳ್ಳಾರಿಯು ಐತಿಹಾಸಿಕ ‘ಹಂಪಿ’ ಹಾಗೂ ‘ತುಂಗಭದ್ರಾ ಜಲಾಶಯ’ದೊಂದಿಗೆ ಭಾವನಾತ್ಮಕ ನಂಟನ್ನು ಕಳೆದುಕೊಂಡಂತಾಗಿದೆ. ಹೊಸ ಜಿಲ್ಲೆಯ ತಾಲ್ಲೂಕುಗಳಲ್ಲಿ ಅಭಿವೃದ್ಧಿಯ ಕನಸು ಚಿಗುರಿದೆ.

ಅಖಂಡ ಜಿಲ್ಲೆಯ ಪ್ರತಿಪಾದಕರು ಕಾನೂನು ಹೋರಾಟಕ್ಕೆ ಸಜ್ಜಾಗಿದ್ದರೆ, ವಿಜಯನಗರ ಜಿಲ್ಲೆಯ ತಾಲ್ಲೂಕುಗಳಲ್ಲಿ ವಿಜಯೋತ್ಸವ ನಡೆದಿದೆ. ಪಶ್ಚಿಮ ತಾಲ್ಲೂಕುಗಳ ಅಭಿವೃದ್ಧಿಗಾಗಿ ವಿಶಾಲ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಯನ್ನು ಘೋಷಿಸಬೇಕೆಂದು ಜನರ ಹೋರಾಟಕ್ಕೆ ಒಂದೂವರೆ ದಶಕದ ಇತಿಹಾಸವೂ ಇದೆ. ಈ ಭಾಗದ ಜನರಲ್ಲಿ ಈಗ ‘ಆನಂದ’ ಮೂಡಿದೆ.

ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಹನ್ನೊಂದು ತಾಲ್ಲೂಕುಗಳಿದ್ದು, ಜಿಲ್ಲಾ ಕೇಂದ್ರದಿಂದ ಹೂವಿನಹಡಗಲಿ, ಹರಪನಹಳ್ಳಿ ತಾಲ್ಲೂಕಿನ ಅಂಚಿನ ಗ್ರಾಮಗಳು ಸುಮಾರು ಇನ್ನೂರು ಕಿ.ಮೀಗೂ ಹೆಚ್ಚು ದೂರದಲ್ಲಿವೆ. ಈ ದೂರದ ಕಾರಣಕ್ಕೆ ಜನ ಸಮಸ್ಯೆಗಳನ್ನೆದುರಿಸುತ್ತಿದ್ದುದರಿಂದ ವಿಭಜನೆ ಅನುಕೂಲಕರವಾಗಿದೆ ಎಂಬುದು ಪಶ್ಚಿಮ ತಾಲ್ಲೂಕುಗಳ ಜನರ ಪ್ರತಿಪಾದನೆ.

ಆದರೆ ಅಖಂಡ ಜಿಲ್ಲೆಯ ಪ್ರತಿಪಾದಕರು, ಸರ್ಕಾರದ ‘ಆಡಳಿತಾತ್ಮಕ ಅನುಕೂಲಕ್ಕಾಗಿ ಜಿಲ್ಲೆ ವಿಭಜನೆ’ ಎಂಬುದನ್ನೂ ವಿರೋಧಿಸಿದ್ದಾರೆ. ಹೊಸಪೇಟೆ ಜಿಲ್ಲಾ ಕೇಂದ್ರವಾಗುವುದರಿಂದ ಹಡಗಲಿ, ಹರಪನಹಳ್ಳಿಯ ಗಡಿಭಾಗದ ಜನರಿಗೆ ಯಾವ ಅನುಕೂಲವೂ ಆಗುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

‘ವಿಜಯನಗರ ಸಾಮ್ರಾಜ್ಯ’ದ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕಾದರೆ ಅದೇ ಹೆಸರಿನಲ್ಲಿ ಜಿಲ್ಲೆ ರಚನೆಯಾಗಬೇಕು. ಅದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ’ಎಂದಿದ್ದರು ಆನಂದ್‌ಸಿಂಗ್. ಅದಕ್ಕಾಗಿಯೇ, ಎರಡು ಬಾರಿ ಖಾತೆ ಬದಲಾದರೂ, ವೈಯಕ್ತಿಕ ಟೀಕೆಗಳೆದ್ದರೂ ದನಿ ಎತ್ತಿರಲಿಲ್ಲ.

ಹೋರಾಟದ ಹಿನ್ನೆಲೆ: ಜಿಲ್ಲೆಯ ವಿಭಜನೆಗಾಗಿ 13 ವರ್ಷದ ಹಿಂದೆ ವಿಜಯನಗರ ಜಿಲ್ಲಾ ಹೋರಾಟ‌ ಸಮಿತಿಯು ಸತತ ಮೂರು ತಿಂಗಳು ಹೋರಾಟ ನಡೆಸಿತ್ತು. 2019ರಲ್ಲಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.

‘ವಿಜಯನಗರ ವಿಜಯೋತ್ಸವ’ಕ್ಕೆ ಸಿದ್ಧತೆ

ವಿಜಯನಗರ ಜಿಲ್ಲೆ ರಚನೆಯಾಗಿರುವುದರಿಂದ ವಿಜಯೋತ್ಸವವನ್ನು ಏರ್ಪಡಿಸಲಿದ್ದು, ಕಾರ್ಯಕ್ರಮದ ವೇದಿಕೆ ನಿರ್ಮಿಸಲು ಎರಡರಿಂದ ಮೂರು ತಿಂಗಳು ಅವಧಿ ಹಿಡಿಯಲಿದೆ. ಇಡೀ ದೇಶ ವಿಜಯನಗರದ ವೈಭವ ನೋಡುವ ರೀತಿಯಲ್ಲಿ ಆ ಕಾರ್ಯಕ್ರಮ ಸಂಘಟಿಸಲಾಗುವುದು’ ಎಂದು ಸಚಿವ ಆನಂದ್‌ಸಿಂಗ್ ತಿಳಿಸಿದ್ದಾರೆ.

‘ಜನರಿಗೆ ತಪ್ಪು ಮಾಹಿತಿ ನೀಡಿದ ಸರ್ಕಾರ’

’ವಿಭಜನೆ ವಿರುದ್ಧ ಸಲ್ಲಿಸಿದ ಆಕ್ಷೇಪಣೆಗಳ ಕುರಿತು ಚರ್ಚೆಯನ್ನೇ ನಡೆಸದೆ ಸರ್ಕಾರ ತಪ್ಪು ಮಾಹಿತಿ ನೀಡಿದೆ’ ಎಂದು ಅಖಂಡ ಬಳ್ಳಾರಿ ಜಿಲ್ಲೆ ಪ್ರತಿಪಾದಕರಾದ ಎಸ್‌.ಪನ್ನರಾಜ್‌, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಆರೋಪಿಸಿದ್ದಾರೆ.

‘ತನ್ನ ನಿರ್ಧಾರದ ಕುರಿತು ಜನರ ಧ್ವನಿಯನ್ನು ಆಲಿಸುವ, ಪ್ರಯತ್ನವನ್ನೇ ಸರ್ಕಾರ ಮಾಡದಿರುವುದು ಕಾನೂನಿನ ಆಶಯವನ್ನು ಮೂಲೆಗುಂಪು ಮಾಡಿದಂತಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಸೇರಿದ ತಾಲ್ಲೂಕುಗಳು

* ಹೊಸಪೇಟೆ (ಕೇಂದ್ರ ಸ್ಥಾನ)
* ಕೂಡ್ಲಿಗಿ
* ಕೊಟ್ಟೂರು
* ಹಗರಿಬೊಮ್ಮನಹಳ್ಳಿ
* ಹೂವಿನಹಡಗಲಿ
* ಹರಪನಹಳ್ಳಿ

ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಸೇರಿದ ತಾಲ್ಲೂಕುಗಳು

* ಬಳ್ಳಾರಿ (ಕೇಂದ್ರ ಸ್ಥಾನ)
* ಸಂಡೂರು
* ಸಿರುಗುಪ್ಪ
* ಕಂಪ್ಲಿ
* ಕುರುಗೋಡು

***

ಸರ್ವಾಧಿಕಾರಿ ಧೋರಣೆಯಿಂದ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ

ಎಸ್‌.ಪನ್ನರಾಜ್‌, ಅಖಂಡ ಬಳ್ಳಾರಿ ಹೋರಾಟ ಸಮಿತಿ ಮುಖಂಡರು

***

ಪಶ್ಚಿಮ ತಾಲ್ಲೂಕುಗಳ ಜನರ ಎರಡು ದಶಕಗಳ ಕನಸು ಸಾಕಾರಗೊಂಡಿದೆ. ಅಭಿವೃದ್ಧಿಯ ಹೊಸ ಶಕೆ ಆರಂಭವಾಗುತ್ತದೆ. ಪಕ್ಷಾತೀತ ಹೋರಾಟಕ್ಕೆ ಸಂದ ಜಯ.

ವೈ. ಯಮುನೇಶ , ಸಂಚಾಲಕ ವಿಜಯನಗರ ಜಿಲ್ಲಾ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT