ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಗಿರಣಿ ಮಾಲೀಕರ ವಿರುದ್ಧ ಎಫ್‌ಐಆರ್‌

ಗಿರಣಿಗಳಿಂದಲೇ ಎಂಎಸ್‌ಪಿ ಭತ್ತ ನಾಪತ್ತೆ

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಬಲ ಬೆಲೆ ಯೋಜನೆ (ಎಂಎಸ್‌ಪಿ) ಅಡಿಯಲ್ಲಿ ಖರೀದಿಸಿ ದಾಸ್ತಾನು ಮಾಡಿದ್ದ ಭತ್ತ ಗಿರಣಿಗಳಿಂದಲೇ ಕಳ್ಳಸಾಗಣೆ ಆಗುತ್ತಿರುವುದು ಬಯಲಿಗೆ ಬಂದಿದೆ. 22,285 ಕ್ವಿಂಟಲ್‌ ಎಂಎಸ್‌ಪಿ ಭತ್ತ ನಾಪತ್ತೆ ಸಂಬಂಧ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ದಾಖಲಾಗಿರುವ ಪ್ರಕರಣ ಆಧರಿಸಿ, ರಾಜ್ಯದಾದ್ಯಂತ ತನಿಖೆ ನಡೆಸಲು ಆಹಾರ ಇಲಾಖೆಯ ತನಿಖಾ ದಳ ಮುಂದಾಗಿದೆ.

ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ ಹಾಗೂ ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ
ಗಳ (ಟಿಎಪಿಸಿಎಂಸ್‌) ಸಗಟು ಉಗ್ರಾಣಗಳಿಂದ ಪಡಿತರ ಧಾನ್ಯ ಕಳ್ಳಸಾಗಣೆ ಹೆಚ್ಚಿರುವುದು, ಗಿರಣಿಗಳಿಂದ ಸಗಟು ಗೋದಾಮುಗಳಿಗೆ ಎಂಎಎಸ್‌ಪಿ ಅಕ್ಕಿ ಸಾಗಣೆಯಲ್ಲಿನ ಅಕ್ರಮದ ಬೆನ್ನಲ್ಲೇ ಗಿರಣಿಗಳಿಂದ ಭತ್ತವೂ ನಾಪತ್ತೆಯಾಗುತ್ತಿರುವುದು ಬಯಲಾಗಿದೆ. ಕೆಲವೆಡೆ ಅಕ್ಕಿ ಗಿರಣಿಗಳಲ್ಲೇ ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆಯಾಗಿದ್ದು, ಭತ್ತದ ಕಳ್ಳಸಾಗಣೆ ಮತ್ತು ಪಡಿತರ ಅಕ್ಕಿ ಕಳ್ಳಸಾಗಣೆ ನಡುವೆ ಪರಸ್ಪರ ನಂಟು ಇರುವ ಕುರಿತೂ ಅನುಮಾನ ವ್ಯಕ್ತವಾಗಿದೆ.

ಬೆಂಬಲ ಬೆಲೆ ಖರೀದಿ ಕೇಂದ್ರವಾಗಿ ಕಾರ್ಯನಿರ್ವಹಿಸಿದ್ದ ಪಾಂಡವಪುರದ ಎಂ.ಆರ್‌. ರೈಸ್‌ ಮಿಲ್‌ 2020ರ ಡಿಸೆಂಬರ್‌ 1ರಿಂದ 2021ರ ಮಾರ್ಚ್‌ 31ರವರೆಗೆ 30,562 ಕ್ವಿಂಟಲ್‌ ಭತ್ತವನ್ನು ರೈತರಿಂದ ಖರೀದಿಸಿತ್ತು. ಈ ಬಾಬ್ತು 818 ರೈತರಿಗೆ ಬೆಂಬಲ ಬೆಲೆ ಯೋಜನೆಯಡಿ ₹ 5.76 ಕೋಟಿ ಹಣ ಪಾವತಿಸಲಾಗಿತ್ತು.

8,277 ಕ್ವಿಂಟಲ್‌ ಭತ್ತದ ಬಾಬ್ತು ಅಕ್ಕಿಯನ್ನು ಎಂ.ಆರ್‌. ರೈಸ್‌ ಮಿಲ್‌ ಪೂರೈಸಿದೆ. ಉಳಿದ 22,285 ಕ್ವಿಂಟಲ್‌ ಭತ್ತವನ್ನು ಗಿರಣಿಯ ಮಾಲೀಕರ ಕುಟುಂಬದವರು ಕದ್ದು ಮಾರಾಟ ಮಾಡಿರುವುದು ಜೂನ್‌ 27ರಂದು ಆಹಾರ ಇಲಾಖೆಯ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿದಾಗ ಪತ್ತೆಯಾಗಿದೆ.

ಗಿರಣಿ ಮಾಲೀಕರಾದ ಝರೀನ್‌ ತಾಜ್‌ ಮತ್ತು ಇತರ ನಾಲ್ವರ ವಿರುದ್ಧ ಜೂನ್‌ 30ರಂದು ಎಫ್‌ಐಆರ್‌ ದಾಖಲಿಸಲಾಗಿದೆ.

ಪಡಿತರ ಅಕ್ಕಿ ಪತ್ತೆ: ಪಡಿತರ ಧಾನ್ಯ ಕಳ್ಳಸಾಗಣೆ ತಡೆಗೆ ಆಹಾರ ಇಲಾಖೆ ನೇಮಿಸಿರುವ ರಾಜ್ಯ ಮಟ್ಟದ ತನಿಖಾ ದಳದ ಮುಖ್ಯಸ್ಥರಾದ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ನೇತೃತ್ವದ ತಂಡ ಜುಲೈ 18ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರದ ವೀರಭದ್ರೇಶ್ವರ ರೈಸ್‌ ಮಿಲ್‌ಗೆ ಭೇಟಿನೀಡಿ ತಪಾಸಣೆ ನಡೆಸಿದೆ. ಎಂಎಸ್‌ಪಿ ಅಡಿಯಲ್ಲಿ ಖರೀದಿಸಿದ್ದ ಭತ್ತವನ್ನು ಹಲ್ಲಿಂಗ್‌ಗಾಗಿ ದಾಸ್ತಾನು ಮಾಡಿರುವ ಈ ಮಿಲ್‌ನಲ್ಲಿ 643.71 ಕ್ವಿಂಟಲ್‌ನಷ್ಟು ಪಡಿತರ ಅಕ್ಕಿ ಪತ್ತೆಯಾಗಿದೆ.

ಎಂಎಸ್‌ಪಿ ಭತ್ತ ಹಲ್ಲಿಂಗ್‌ ಮಾಡಿ ಪರಿವರ್ತಿತ ಅಕ್ಕಿ ನೀಡುವ ಬದಲಿಗೆ ಅನ್ನಭಾಗ್ಯ ಅಕ್ಕಿಯನ್ನೇ ಕಾಳಸಂತೆಯ ಮೂಲಕ ಖರೀದಿಸಿ ಪುನಃ ಪಡಿತರ ಚೀಟಿದಾರರಿಗೆ ವಿತರಿಸಲು ಹುನ್ನಾರ ನಡೆಸಿರುವ ಆರೋಪದಡಿ ಅಕ್ಕಿ ಗಿರಣಿ ಮಾಲೀಕ ವಿಜಯಶಂಕರ್‌ ಎಚ್‌.ಎನ್‌. ವಿರುದ್ಧ ಟಿ. ನರಸೀಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ರಾಜ್ಯದಲ್ಲಿ ಎಂಎಸ್‌ಪಿ ಅಡಿಯಲ್ಲಿ 2.06 ಲಕ್ಷ ಟನ್‌ ಭತ್ತ ಖರೀದಿಸಲಾಗಿತ್ತು. ಅಕ್ಕಿ ಗಿರಣಿಗಳಿಂದಲೇ ಭತ್ತ ಮತ್ತು ಅಕ್ಕಿಯ ಕಳ್ಳಸಾಗಣೆ ಕುರಿತು ತನಿಖಾ ದಳಕ್ಕೆ ದೂರುಗಳು ಬರುತ್ತಿದ್ದು, ರಾಜ್ಯದಾದ್ಯಂತ ತಪಾಸಣೆಗೆ ನಿರ್ಧರಿಸಲಾಗಿದೆ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿವೆ.

ನಿರಂತರ ತಪಾಸಣೆಗೆ ಸೂಚನೆ

‘ಅಕ್ಕಿ ಗಿರಣಿಗಳಿಂದಲೇ ಎಂಎಸ್‌ಪಿ ಭತ್ತ ಮತ್ತು ಅಕ್ಕಿ ಕಳ್ಳಸಾಗಣೆ ನಡೆಯುತ್ತಿದೆ ಎಂಬ ದೂರುಗಳು ಬರುತ್ತಿವೆ. ನಿಯಮಿತವಾಗಿ ತಪಾಸಣೆ ನಡೆಸಲು ಸೂಚಿಸಲಾಗಿದೆ. ಅಕ್ರಮ ಕಂಡುಬಂದಲ್ಲಿ ಕಠಿಣ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ’ ಎಂದು ಆಹಾರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

3,700 ಕ್ವಿಂಟಲ್‌ ಸಾಗಣೆಯತ್ತ ಅನುಮಾನ

ಪಾಂಡವಪುರದ ಎಂ.ಆರ್‌. ರೈಸ್‌ ಮಿಲ್‌ನಿಂದ ಜೂನ್‌ ತಿಂಗಳ ಪಡಿತರ ವಿತರಣೆಗಾಗಿ ನೆಲಮಂಗಲ ಟಿಎಪಿಸಿಎಂಎಸ್‌ ಸಗಟು ಉಗ್ರಾಣಕ್ಕೆ 1,917.10 ಕ್ವಿಂಟಲ್‌ ಮತ್ತು ದೊಡ್ಡಬಳ್ಳಾಪುರ ಟಿಎಪಿಸಿಎಂಎಸ್‌ ಸಗಟು ಉಗ್ರಾಣಕ್ಕೆ 1,700 ಕ್ವಿಂಟಲ್‌ ಅಕ್ಕಿ ಹಂಚಿಕೆ ಮಾಡಲಾಗಿತ್ತು. ಭತ್ತ ಕಳ್ಳಸಾಗಣೆ ಆಗಿರುವುದರಿಂದ ಅಕ್ಕಿ ನಿಜವಾಗಿಯೂ ಪೂರೈಕೆಯಾಗಿದೆಯೇ ಅಥವಾ ಪಡಿತರ ಕಳ್ಳಸಾಗಣೆ ಜಾಲದ ಜತೆ ಅಧಿಕಾರಿಗಳು, ಸಾಗಣೆ ಗುತ್ತಿಗೆದಾರರು ಶಾಮೀಲಾಗಿ ಲೆಕ್ಕ ಹೊಂದಾಣಿಕೆ ಮಾಡಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು