ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಶೇ 80 ಮೊದಲ ಡೋಸ್‌

ಕೋವಿಡ್‌ ಲಸಿಕೆ: ದೇಶದ ವಯಸ್ಕ ಜನಸಂಖ್ಯೆಯ ಕಾಲುಭಾಗಕ್ಕೆ ಮಾತ್ರ ಎರಡೂ ಡೋಸ್‌
Last Updated 29 ಸೆಪ್ಟೆಂಬರ್ 2021, 19:28 IST
ಅಕ್ಷರ ಗಾತ್ರ

ನವದೆಹಲಿ:ಕರ್ನಾಟಕವೂ ಸೇರಿದಂತೆ ದೇಶದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶೇ 80ರಷ್ಟು ವಯಸ್ಕ ನಾಗರಿಕರಿಗೆ ಕೋವಿಡ್‌–19ರ ಲಸಿಕೆಯ ಮೊದಲ ಡೋಸ್‌ ಹಾಕಿಸಲಾಗಿದೆ. ಗೋವಾದಲ್ಲಿ ಶೇ 78ರಷ್ಟು ವಯಸ್ಕ ಜನರಿಗೆ ಲಸಿಕೆಯ ಮೊದಲ ಹಾಕಲಾಗಿದೆ ಎಂದು ಲಸಿಕೆ ಅಭಿಯಾನದ ಅಧಿಕೃತ ಅಂಕಿ ಅಂಶಗಳು ಹೇಳಿವೆ.

ಶೇ 80ರ ಸಾಧನೆ ಮಾಡಿರುವ ರಾಜ್ಯಗಳಲ್ಲಿ ಮಧ್ಯ ಪ್ರದೇಶ, ಗುಜರಾತ್‌, ತೆಲಂಗಾಣ, ಕೇರಳ ಮತ್ತು ಹರಿಯಾಣದಂತಹ ದೊಡ್ಡ ರಾಜ್ಯಗಳು ಸೇರಿವೆ.

ದೇಶದಲ್ಲಿ ಶೇ 68ಕ್ಕೂ ಹೆಚ್ಚು ಜನರು ಲಸಿಕೆಯ ಮೊದಲ ಡೋಸ್‌ ಪಡೆದಿದ್ದರೆ, ಒಟ್ಟು ವಯಸ್ಕ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಮಾತ್ರ ಲಸಿಕೆಯ ಎರಡೂ ಡೋಸ್‌ ಪಡೆದಿದ್ದಾರೆ.

ಲಸಿಕಾ ದತ್ತಾಂಶದ ಪ್ರಕಾರ, ಹೆಚ್ಚು ಜನಸಂಖ್ಯೆ ಇರುವ ಮಧ್ಯಪ್ರದೇಶ, ಗುಜರಾತ್‌, ತೆಲಂಗಾಣ, ಕೇರಳ ಮತ್ತು ಹರಿಯಾಣದಲ್ಲಿ ಮೊದಲ ಡೋಸ್‌ ಪಡೆದವರ ಸಂಖ್ಯೆ ಶೇ 80 ಇದೆ. ರಾಜಸ್ಥಾನ (ಶೇ 78), ಅಸ್ಸಾಂ (ಶೇ 79), ಗೋವಾ (ಶೇ 78) ಹಾಗೂ ದೆಹಲಿ (ಶೇ 75) ಈ ಸಂಖ್ಯೆಗೆ ಸಮೀಪದಲ್ಲಿವೆ.

ಆದರೆ, ಎರಡೂ ಡೋಸ್‌ ಲಸಿಕೆ ಹಾಕಿಸುವಲ್ಲಿ ಕೇವಲ ಒಂಬತ್ತು ರಾಜ್ಯಗಳು ಶೇ 40ರ ಗುರಿ ತಲು‍‍ಪಿವೆ. ಈ ಗುಂಪಿನಲ್ಲಿ, ದಕ್ಷಿಣದ ರಾಜ್ಯಗಳ ಪೈಕಿ ಗೋವಾ ಮಾತ್ರ ಇದೆ. ಗೋವಾ ಹೊರತುಪಡಿಸಿದರೆ ಉಳಿದವುಗಳು ಈಶಾನ್ಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು.

ಎರಡನೇ ಡೋಸ್‌ ಪಡೆಯುವಲ್ಲಿ ಅತ್ಯಂತ ಹಿಂದೆ ಉಳಿದಿರುವ ರಾಜ್ಯಗಳೆಂದರೆ ಬಿಹಾರ (ಶೇ 15), ಉತ್ತರ ಪ್ರದೇಶ (ಶೇ 13) ಹಾಗೂ ಜಾರ್ಖಂಡ್‌ (ಶೇ 15). ಅಲ್ಲಿ ದಸರೆ, ದೀಪಾವಳಿ ಹಾಗೂ ಛತ್‌ ಸಂದರ್ಭದಲ್ಲಿ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.

‘ಹಲವು ರಾಜ್ಯಗಳಲ್ಲಿ ಲಸಿಕೆ ಪಡೆಯಲು ಈಗಲೂ ಹಿಂಜರಿಕೆ ಇದೆ. ಎಲ್ಲೆಲ್ಲಿ ಲಸಿಕೆ ನೀಡಿದ ಪ್ರಮಾಣ ಕಡಿಮೆ ಇದೆಯೋ ಅಲ್ಲೆಲ್ಲ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ಭಾನುವಾರದಂದು ವಿಶೇಷ ಲಸಿಕಾ ಮೇಳ ಆಯೋಜನೆ ಮಾಡುವುದು, ಮನೆ ಬಾಗಿಲಿಗೆ ತೆರಳಿ ಪ್ರಚಾರ ಮಾಡುವುದು ಅಗತ್ಯ’ ಎಂದು ಅಪೊಲೊ ಆಸ್ಪತ್ರೆಯ ಹಿರಿಯ ತಜ್ಞವೈದ್ಯ ಅಬ್ದುಲ್‌ ಗಫೂರ್‌ ಅಭಿಪ್ರಾಯಪಟ್ಟರು.

‘ಲಸಿಕೆಯ ಎರಡೂ ಡೋಸ್‌ ಪಡೆದವರು, ಕೊರೊನಾ ಸೋಂಕು ಹಬ್ಬುವುದನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹೀಗಾಗಿ, ಲಸಿಕೆ ನೀಡುವುದನ್ನು ತ್ವರಿತಗೊಳಿಸುವುದರ ಮೂಲಕ, ಬೇಗನೇ ಸೋಂಕು ಬಾಧಿಸುವ ಸಾಧ್ಯತೆ ಇರುವ ಎಲ್ಲರನ್ನೂ ರಕ್ಷಿಸಬೇಕಿದೆ’ ಎಂದು ನವದೆಹಲಿಯ ಜಾರ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಗ್ಲೋಬಲ್‌ ಹೆಲ್ತ್‌ ಸಂಸ್ಥೆಯ ಹಿರಿಯ ಸಾರ್ವಜನಿಕ ಆರೋಗ್ಯ ಸಂಶೋಧಕ ಉಮ್ಮನ್‌ ಜಾನ್‌ ಹೇಳಿದರು.

‘ಲಸಿಕೆಯ ಒಂದು ಡೋಸ್‌, ಡೆಲ್ಟಾ ಸೋಂಕಿನಿಂದ ಶೇ 30ರಿಂದ ಶೇ 40ರವರೆಗೆ ರಕ್ಷಣೆ ನೀಡುತ್ತದೆ. ಎರಡೂ ಡೋಸ್‌ ‍ಪಡೆಯುವುದರಿಂದ ಶೇ 60ರಷ್ಟು ರಕ್ಷಣೆ ಸಾಧ್ಯ. ಲಸಿಕೆಯ ನಂತರದಲ್ಲಿ ಸೋಂಕಿನ ತೀವ್ರತೆ ಗಂಭೀರವಾಗಿಲ್ಲ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ’ ಎಂದು ದೆಹಲಿಯ ಆನುವಂಶಿಕ ರಚನೆ ಹಾಗೂ ಸಮಗ್ರ ಜೀವವಿಜ್ಞಾನ ಸಂಸ್ಥೆಯ ನಿರ್ದೇಶಕ ಅನುರಾಗ್‌ ಅಗರ್‌ವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT