ಬುಧವಾರ, ಜನವರಿ 27, 2021
21 °C
ಪ್ರಮಾಣಿತ ಕಾರ್ಯಾಚರಣೆ ವಿಧಾನ ಹೊರಡಿಸಿದ ಆರೋಗ್ಯ ಇಲಾಖೆ

ಬ್ರಿಟನ್‌ನಿಂದ ಪ್ರಯಾಣ: ನಕಾರಾತ್ಮಕ ವರದಿ ಇದ್ದಲ್ಲಿ ಪ್ರಯಾಣಕರಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರ: ಬ್ರಿಟನ್‌ನಿಂದ ಬರುವವರು ಪ್ರಯಾಣಕ್ಕೂ ಮುನ್ನ 72 ಗಂಟೆಗಳ ಅವಧಿಯಲ್ಲಿ ನಡೆಸಲಾದ ಕೋವಿಡ್ ಪರೀಕ್ಷೆಯ ನಕಾರಾತ್ಮಕ ವರದಿಯನ್ನು ಹೊಂದಿರಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಶನಿವಾರ ರಾತ್ರಿಯಿಂದಲೇ ಬ್ರಿಟನ್‌ನಿಂದ ಇಲ್ಲಿಗೆ ಬರುವ ವಿಮಾನಗಳ ಹಾರಾಟ ಪ್ರಾರಂಭವಾಗಿದ್ದು, ಭಾನುವಾರ ಬೆಳಿಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ತಲುಪಲಿದೆ. ಹೀಗಾಗಿ ಆರೋಗ್ಯ ಇಲಾಖೆಯು ಬ್ರಿಟನ್‌ ಪ್ರಯಾಣಿಕರಿಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಬಿಡುಗಡೆ ಮಾಡಿದೆ. ಬ್ರಿಟನ್‌ನಲ್ಲಿ ರೂಪಾಂತರಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಕೆಲ ದಿನಗಳಿಂದ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿತ್ತು.

ಅಲ್ಲಿಂದ ಹೊರಡುವ ಎಲ್ಲ ಪ್ರಯಾಣಿಕರು ಕಳೆದ 14 ದಿನಗಳ ತಮ್ಮ ಪ್ರಯಾಣದ ಇತಿಹಾಸವನ್ನು ಘೋಷಿಸಿ, ಕೋವಿಡ್ ನಕಾರಾತ್ಮಕ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಈ ವರದಿಯು 72 ಗಂಟೆಗಳಿಗಿಂತ ಹಿಂದಿನದ್ದಾಗಿರಬಾರದು. ವಿಮಾನಯಾನ ಸಂಸ್ಥೆಗಳು ಈ ವರದಿಯನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು. ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳ ಬಗ್ಗೆ ಕೂಡ ಸಂಸ್ಥೆಯ ಸಿಬ್ಬಂದಿ ತಿಳಿಸಬೇಕು. ಇಲ್ಲಿಗೆ ಬಂದ ಬಳಿಕ ಕಡ್ಡಾಯವಾಗಿ ಎಲ್ಲ ಪ್ರಯಾಣಿಕರು ಕೋವಿಡ್‌ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಆ ಪರೀಕ್ಷೆಗೆ ತಗಲುವ ವೆಚ್ಚವನ್ನು ಅವರೇ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಕೋವಿಡ್ ಪರೀಕ್ಷೆಯ ಫಲಿತಾಂಶ ಬರುವವರೆಗೂ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾಯಬೇಕಾಗುತ್ತದೆ. ಯಾವುದೇ ವ್ಯಕ್ತಿಗೆ ಸೋಂಕು ದೃಢಪಟ್ಟಲ್ಲಿ ಅವರನ್ನು ನಿಗದಿತ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತದೆ. ಸೋಂಕಿತರ ಅಕ್ಕ ಪಕ್ಕ ಹಾಗೂ ಮುಂದೆ ಹಿಂದೆ ಕುಳಿತು ಪ್ರಯಾಣಿಸಿದ ನೇರ ಹಾಗೂ ಪರೋಕ್ಷ ಸಂಪರ್ಕಿತರನ್ನು ಗುರುತಿಸಿ, ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಸೋಂಕಿತರಾಗದವರು 14 ದಿನಗಳು ಮನೆ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಈ ಅವಧಿಯಲ್ಲಿ ಕಾಯಿಲೆ ಇರುವುದು ಖಚಿತಪಟ್ಟಲ್ಲಿ ಕೂಡ ವಿಮಾನದಲ್ಲಿ ಪ್ರಯಾಣಿಸಿದ ಸಂಪರ್ಕಿತರನ್ನೂ ಗುರುತಿಸಿ, ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ ಎಂದು ಎಸ್‌ಒಪಿಯಲ್ಲಿ ವಿವರಿಸಲಾಗಿದೆ.

ಸಿದ್ಧತೆ ಪರಿಶೀಲಿಸಿದ ಸುಧಾಕರ್

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ, ಬ್ರಿಟನ್‌ ಪ್ರಯಾಣಿಕರ ತಪಾಸಣೆಗೆ ಮಾಡಲಾಗಿರುವ ಸಿದ್ಧತೆ ಬಗ್ಗೆ ಪ‍ರಿಶೀಲಿಸಿದರು. ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಅಲ್ಲಿ ನಡೆಯುವ ಕಾರ್ಯವಿಧಾನದ ಬಗ್ಗೆ ಮಾಹಿತಿ ಪಡೆದುಕೊಂಡರು.

‘ಭಾನುವಾರ ಬೆಳಿಗ್ಗೆ 4 ಗಂಟೆಗೆ ಇಲ್ಲಿಗೆ ಬ್ರಿಟನ್‌ನಿಂದ ಮೊದಲ ವಿಮಾನ ಬರುತ್ತಿದೆ. ಪ್ರತಿ ವಿಮಾನದಲ್ಲಿ 300ರಿಂದ 350 ಜನ ಬರುತ್ತಾರೆ. ಅವರು ಕೋವಿಡ್ ನಕಾರಾತ್ಮಕ ವರದಿ ತಂದರೂ ಕಡ್ಡಾಯವಾಗಿ ಇಲ್ಲಿಯೂ ಕೋವಿಡ್ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಉತ್ತಮವಾಗಿ ವ್ಯವಸ್ಥೆ ಮಾಡಲಾಗಿದೆ’ ಎಂದು ಡಾ.ಕೆ. ಸುಧಾಕರ್ ತಿಳಿಸಿದರು.

‘ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಪ್ರಯಾಣಿಕರು ₹ 800 ಪಾವತಿಸಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಅಬೋಟ್ ಮಾದರಿಯ ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಈ ಮಾದರಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಅನುಮೋದನೆ ನೀಡಿದೆ. ಇದಕ್ಕೆ ₹ 4,500 ವೆಚ್ಚವಾಗಲಿದ್ದು, 15ರಿಂದ 20 ನಿಮಿಷದಲ್ಲಿ ವರದಿ ಬರಲಿದೆ. ಆದರೆ, ಈ ವಿಧಾನಕ್ಕೆ ನಾವು ಇನ್ನೂ ಅನುಮೋದನೆ ನೀಡಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು