ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ವಿದೇಶಿ ಭಾಷೆ ಪದವಿ

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಫ್ರೆಂಚ್‌ ಬೋಧನೆ
Last Updated 23 ಸೆಪ್ಟೆಂಬರ್ 2021, 22:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲೇ ಮೊದಲ ಬಾರಿ ಬೆಂಗಳೂರು ನಗರ ವಿಶ್ವವಿದ್ಯಾಲಯವು (ಬಿಸಿಯು) ವಿದೇಶಿ ಭಾಷೆಯಲ್ಲಿ ಬಿ.ಎ ಪದವಿ ಕೋರ್ಸ್‌ ಆರಂಭಿಸಲಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಕೋರ್ಸ್‌ಗೆ ಚಾಲನೆ ದೊರೆಯಲಿದ್ದು, ಫ್ರೆಂಚ್‌ ಭಾಷೆ ಕಲಿಸುವಿಕೆಯನ್ನು ಮೊದಲು ಆರಂಭಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಇದನ್ನು ಮಲ್ಲೇಶ್ವರದಲ್ಲಿರುವ ವಿಶ್ವವಿದ್ಯಾಲಯದ ಬಹುಶಿಸ್ತೀಯ ಮಹಿಳಾ ಕಾಲೇಜಿನಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ.

‘ಕರ್ನಾಟಕದಲ್ಲಿ ಯಾವ ವಿಶ್ವವಿದ್ಯಾಲಯವೂ ವಿದೇಶಿ ಭಾಷೆಯನ್ನು ಪ್ರಮುಖ ವಿಷಯವನ್ನಾಗಿ ಬೋಧಿಸುತ್ತಿಲ್ಲ. ಇದುವರೆಗೆ ಫ್ರೆಂಚ್‌ ಮತ್ತು ಜರ್ಮನ್‌ ಭಾಷೆಗಳನ್ನು ಐಚ್ಛಿಕ ವಿಷಯಗಳನ್ನಾಗಿ ಅಧ್ಯಯನ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿ ಫ್ರೆಂಚ್‌ ಅನ್ನು ಪ್ರಮುಖ ವಿಷಯವನ್ನಾಗಿ ಸ್ನಾತಕ ಪದವಿ ಕೋರ್ಸ್‌ನಲ್ಲಿ ಆರಂಭಿಸಲಾಗುತ್ತಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಕೋರ್ಸ್‌ಗೆ ಪ್ರವೇಶ ಪಡೆಯಲು ಅ. 11ರವರೆಗೆ ಕಾಲಾವಕಾಶ ನೀಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು www.bcu.ac.in ಅಥವಾ http://bcuportal.com ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಮಲ್ಲೇಶ್ವರದ 13ನೇ ಅಡ್ಡ ರಸ್ತೆಯಲ್ಲಿರುವ ಬಹುಶಿಸ್ತೀಯ ಮಹಿಳಾ ಕಾಲೇಜಿಗೆ ನೇರವಾಗಿ ಭೇಟಿ ನೀಡಬಹುದು’ ಎಂದು ತಿಳಿಸಿದ್ದಾರೆ.

ಜಪಾನ್‌ ಮತ್ತು ಸ್ಪೇನ್‌ ರಾಯಭಾರಿಗಳ ಜತೆಯೂ ಒಪ್ಪಂದ ಮಾಡಿಕೊಳ್ಳಲು ವಿಶ್ವವಿದ್ಯಾಲಯ ಯೋಜನೆ ರೂಪಿಸಿದೆ. ಆ ಭಾಷೆಗಳ ಶಿಕ್ಷಕರ ಲಭ್ಯತೆಗೆ ಕ್ರಮಕೈಗೊಳ್ಳುವುದು ಈ ಯೋಜನೆಯ ಉದ್ದೇಶ.

‘ಈಗಾಗಲೇ ಕೆಲವು ರಾಯಭಾರ ಕಚೇರಿಗಳು ನಮ್ಮನ್ನು ಸಂಪರ್ಕಿಸಿವೆ. ಎರಡು ವರ್ಷಗಳ ಕಾಲ ಆ ಶಿಕ್ಷಕರು ನಮ್ಮ ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ. ಶೀಘ್ರದಲ್ಲೇ ಜಪಾನ್‌ ರಾಯಭಾರಿ ಜತೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ’ ಎಂದು ಜಾಗತಿಕ ಭಾಷೆಗಳ ಕೇಂದ್ರದ ಅಧ್ಯಕ್ಷೆ ಮತ್ತು ಮಹಿಳಾ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ಜ್ಯೋತಿ ವೆಂಕಟೇಶ್‌ ತಿಳಿಸಿದರು.

ಹೊಸ ಕೋರ್ಸ್‌ಗಳು: ‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿಸಿಯು ಹೊಸ ವಿಭಾಗಗಳನ್ನು ಮತ್ತು ಕೋರ್ಸ್‌ಗಳನ್ನು ಆರಂಭಿಸಲಿದೆ. ಸೆಂಟ್ರಲ್‌ ಕಾಲೇಜಿನ ಪ್ರಾಂಗಣದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳ ನಾಲ್ಕು ಹೊಸ ವಿಭಾಗಗಳನ್ನು ಸ್ಥಾಪಿಸಲಿದೆ. ಕಲೆ ಮತ್ತು ಸೌಂದರ್ಯ ವಿಜ್ಞಾನ ವಿಭಾಗ, ನಗರ ಅಧ್ಯಯನ ಮತ್ತು ಯೋಜನೆ ವಿಭಾಗ, ಪರಿಸರ ಮತ್ತು ಹವಾಮಾನ ಬದಲಾವಣೆ ಹಾಗೂ ತಂತ್ರಜ್ಞಾನ ವಿಭಾಗಗಳನ್ನು ಆರಂಭಿಸಲಾಗುವುದು’ ಎಂದು ಕುಲಪತಿ ಪ್ರೊ. ಲಿಂಗರಾಜ ಗಾಂಧಿ ತಿಳಿಸಿದರು.

’ಈ ವಿಭಾಗಗಳಲ್ಲಿ ಅನಿಮೇಷನ್‌ ವಿನ್ಯಾಸ, ಒಳಾಂಗಣ ವಿನ್ಯಾಸ, ನಗರ ಅಧ್ಯಯನ ಮತ್ತು ಯೋಜನೆ, ಪರಿಸರ ವಿಜ್ಞಾನ ಮತ್ತು ಕಂಪ್ಯೂಟರ್‌ ವಿಜ್ಞಾನ ಕೋರ್ಸ್‌ಗಳನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.

ಪದವಿ ಕೋರ್ಸ್‌ಗೆ ಬೇಡಿಕೆ
ಈ ವರ್ಷ ಪದವಿ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸೀಟುಗಳನ್ನು ಹೆಚ್ಚಿಸುವಂತೆ ಕೋರಿ ಸುಮಾರು 30 ಕಾಲೇಜುಗಳು ಅರ್ಜಿ ಸಲ್ಲಿಸಿವೆ. ಇನ್ನೂ ಹಲವು ಕಾಲೇಜುಗಳು ಇದೇ ರೀತಿ ಬೇಡಿಕೆಗೆ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ’ ಎಂದು ಪ್ರೊ. ಲಿಂಗರಾಜ ಗಾಂಧಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT