ಬುಧವಾರ, ಮೇ 25, 2022
29 °C

₹ 4.58 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಕಳವು: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಅಂಗಡಿಯಿಂದಲೇ ₹4.58 ಕೋಟಿ ಬೆಲೆ ಬಾಳುವ ಚಿನ್ನದ ಗಟ್ಟಿಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. 

ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸ್ವಪ್ನೀಲ್ ಘಾಡ್ಗೆ (19) ಬಂಧಿತ ಆರೋಪಿ.

ಬೆಂಗಳೂರಿನ ನಗರ್ತಪೇಟೆಯಲ್ಲಿ ಸಿದ್ದೇಶ್ವರ್ ಹರಿಭಾ ಸಿಂಧೆ ಎಂಬುವರು ಉದ್ಯಮಿಗಳಿಂದ ಹಳೆಯ ಚಿನ್ನದ ಆಭರಣ ಪಡೆದು, ಕರಗಿಸಿ ಚಿನ್ನದ ಗಟ್ಟಿ ತಯಾರಿಸುವ ಅಂಗಡಿಯನ್ನು ಹೊಂದಿದ್ದರು. ಅದೇ ಅಂಗಡಿಯಲ್ಲಿ ಆರೋಪಿ ಸ್ವಪ್ನೀಲ್ ಕೆಲಸ ಮಾಡಿಕೊಂಡಿದ್ದ.

ಜನವರಿ 29ರಂದು ಸುಮಾರು 12 ಕೆ.ಜಿಯಷ್ಟು ಚಿನ್ನ ಕರಗಿಸಿ ಮಾಡಲಾಗಿದ್ದ ಚಿನ್ನದ ಗಟ್ಟಿಗಳನ್ನು ಸಿದ್ದೇಶ್ವರ್ ತನ್ನ ಕೆಲಸಗಾರರ ಜೊತೆ ತೆರಳಿ, ಆರ್‌.ಟಿ.ಸ್ಟ್ರೀಟ್‌ನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಇಟ್ಟು ಬಂದಿದ್ದರು.

ಈ ವಿಷಯ ತಿಳಿದಿದ್ದ ಆರೋಪಿ ಸ್ವಪ್ನೀಲ್, ಮರುದಿನವೇ ಆ ಮನೆಗೆ ತೆರಳಿದ್ದ. ಮಾಲೀಕರು ಕಳುಹಿಸಿದ್ದಾರೆ ಎಂದು ಸುಳ್ಳು ಹೇಳಿ ಮನೆಯಿಂದ ಚಿನ್ನದ ಗಟ್ಟಿಗಳನ್ನು ಅಂಗಡಿಗೆ ತಂದು, ಬಳಿಕ ಅಲ್ಲಿಂದ ಕಳವು ಮಾಡಿದ್ದ. ಈ ಸಂಬಂಧ ಅಂಗಡಿ ಮಾಲೀಕ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು.

‘ಕಳವು ಮಾಡಿದ ಬಳಿಕ ಆರೋಪಿ ಮಹಾರಾಷ್ಟ್ರದ ತನ್ನ ಮನೆಯಲ್ಲಿ ಅಡಗಿಕೊಂಡಿದ್ದ. ಆತನನ್ನು ಪತ್ತೆ ಹಚ್ಚಿ, ₹ 4.58 ಕೋಟಿ ಬೆಲೆ ಬಾಳುವ 11 ಕೆ.ಜಿಯಷ್ಟು ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ. ಉಳಿದ ಒಂದು ಕೆ.ಜಿ ಚಿನ್ನವನ್ನು ಪರಿಚಿತರಿಗೆ ಮಾರಾಟ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆರೋಪಿ ಈ ಹಿಂದೆ ಹೈದರಾಬಾದ್‌ನಲ್ಲಿ ಚಿನ್ನ ಕರಗಿಸುವ ಕೆಲಸ ಮಾಡಿಕೊಂಡಿದ್ದ. ಕಳೆದ ವರ್ಷ ಕೊರೊನಾದಿಂದ ಊರಿಗೆ ಮರಳಿದ್ದು, ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ. ಜೀವನದಲ್ಲಿ ಬೇಗ ಶ್ರೀಮಂತನಾಗಬೇಕು ಎಂಬ ದುರಾಸೆಯಿಂದ ಚಿನ್ನದ ಗಟ್ಟಿಗಳನ್ನು ಕಳವು ಮಾಡಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು