ಶುಕ್ರವಾರ, ಅಕ್ಟೋಬರ್ 30, 2020
27 °C

ಗೆಜೆಟೆಡ್‌ ಪ್ರೊಬೇಷನರಿ: ಕೆಪಿಎಸ್‌ಸಿ ಪರೀಕ್ಷೆಗೆ ಶೇ 50ರಷ್ಟು ಗೈರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 106 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಸೋಮವಾರ ನಡೆಸಿದ ಪೂರ್ವಭಾವಿ ಪರೀಕ್ಷೆಗೆ ಶೇ 50ರಷ್ಟು ಮಂದಿ ಗೈರಾಗಿದ್ದಾರೆ.

‘ಅರ್ಜಿ ಸಲ್ಲಿಸಿದ್ದ 1,65,250 ಅಭ್ಯರ್ಥಿಗಳ ಪೈಕಿ, 83,716 (ಶೇ 50.5) ಮಂದಿ ಪರೀಕ್ಷೆ ಬರೆದಿದ್ದಾರೆ. ಯಾವುದೇ ಗೊಂದಲಗಳಿಲ್ಲದೆ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಕೋವಿಡ್‌ ದೃಢಪಟ್ಟ 45 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ’ ಎಂದು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾದ ದಿವ್ಯಾಪ್ರಭು ತಿಳಿಸಿದರು.

‘ಬೆಂಗಳೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ರಾಯಚೂರು, ಶಿವಮೊಗ್ಗ ಜಿಲ್ಲೆಗಳಲ್ಲಿನ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಕೋವಿಡ್‌ ದೃಢಪಟ್ಟವರು ಆಯಾ ಜಿಲ್ಲೆಗಳಲ್ಲೇ ಪರೀಕ್ಷೆ ಬರೆಯಲು ಎಲ್ಲ 30 ಜಿಲ್ಲೆಗಳಲ್ಲೂ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 50 ಮಂದಿ ಕೋವಿಡ್‌ ದೃಢಪಟ್ಟವರಿದ್ದಾರೆ ಎಂಬ ಮಾಹಿತಿ ಇತ್ತು. ಈ ಪೈಕಿ, ಮೂವರು ಗೈರಾಗಿದ್ದು, ಇಬ್ಬರು ಸಂಪೂರ್ಣ ಗುಣಮುಖರಾಗಿದ್ದ ಕಾರಣ ಸಾಮಾನ್ಯ ಕೇಂದ್ರದಲ್ಲೇ ಪರೀಕ್ಷೆ ಬರೆದಿದ್ದಾರೆ’ ಎಂದರು.

‘2015ನೇ ಸಾಲಿನಲ್ಲಿ 428 ಹುದ್ದೆಗಳಿಗೆ ನಡೆದಿದ್ದ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 2,31,379 ಅಭ್ಯರ್ಥಿಗಳಲ್ಲಿ 1,31,110 (ಶೇ 56) ಪರೀಕ್ಷೆ ಬರೆದಿದ್ದರು. ಈ ಬಾರಿ ಉಪ ವಿಭಾಗಾಧಿಕಾರಿ ಹುದ್ದೆ ಇಲ್ಲ, ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳು ಹೆಚ್ಚು ಇದ್ದುದರಿಂದ ಅರ್ಜಿ ಸಲ್ಲಿಸಿದವರ ಸಂಖ್ಯೆ ಕಡಿಮೆಯಾಗಿದೆ’ ಎಂದೂ ಹೇಳಿದರು.

ಕೋವಿಡ್‌ ಹರಡುತ್ತಿರುವ ಕಾರಣ ಮತ್ತು ಪರೀಕ್ಷೆಗೆ ಅರ್ಜಿ ಸಲ್ಲಿಸಿದವರ ಪೈಕಿ, ಶೇ 20ರಷ್ಟು ಮಂದಿ ಸರ್ಕಾರಿ ನೌಕರರಾಗಿದ್ದು, ಕೊರೊನಾ ಸೇನಾನಿಗಳಾಗಿ ಕರ್ತವ್ಯದಲ್ಲಿರುವುದರಿಂದ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್‌ ನಾಯಕರು ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದರು. ಆದರೆ, ಕೆಪಿಎಸ್‌ಸಿ ಈ ಬೇಡಿಕೆಗೆ ಮನ್ನಣೆ ನೀಡಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು