ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರ ಆಳ್ವಿಕೆ ಬಂದಂತಿದೆ: ಡಿ.ಕೆ ಶಿವಕುಮಾರ್‌

Last Updated 19 ಏಪ್ರಿಲ್ 2021, 20:59 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ವಿಚಾರವಾಗಿ ಮಂಗಳವಾರ (ಏ. 20) ಸರ್ವಪಕ್ಷ ಸಭೆ ಕರೆದಿರುವುದಾಗಿ ರಾಜಭವನದಿಂದ ಆಹ್ವಾನ ಬಂದಿದ್ದು, ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ’ ಎಂದು
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದೇ ಮೊದಲ ಬಾರಿಗೆ ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿದ್ದು, ಮುಂದಿನ ದಿನಗಳಲ್ಲಿ ರಾಜ್ಯಪಾಲರ ಆಳ್ವಿಕೆ ಅಧಿಕೃತವಾಗಿ ಜಾರಿಯಾಗುವ ಲಕ್ಷಣ ಗೋಚರಿಸುತ್ತಿದೆ. ಮಂಗಳವಾರ ನಡೆಯಲಿರುವ ಸಭೆಯಲ್ಲಿ ನಾವು ಭಾಗವಹಿಸುತ್ತೇವೆ’ ಎಂದರು.

'ಕೊರೊನಾ ವಾಸ್ತವಾಂಶದ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿವೆ. ಈ ವಿಚಾರ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ. ಕೊರೊನಾ ಲಸಿಕೆ ಪೂರೈಕೆ ಗುತ್ತಿಗೆಯನ್ನು ಕೇವಲ ಎರಡು ಕಂಪನಿಗಳಿಗೆ ಯಾಕೆ ನೀಡಲಾಗಿದೆ’ ಎಂದು ಪ್ರಶ್ನಿಸಿದರು.

‘ಪಕ್ಷದ ಕಚೇರಿಯಲ್ಲಿ ನಾವು ವೈದ್ಯರ ಘಟಕದ ಜತೆ ಚರ್ಚೆ ಮಾಡಿ ಒಂದು ಸಹಾಯವಾಣಿ ಆರಂಭಿಸಲು ತೀರ್ಮಾನಿಸಿದ್ದೇವೆ. ಅಲ್ಲಿ ಸೋಂಕಿತರಿಗೆ ಮಾರ್ಗದರ್ಶನ ನೀಡಿ ನೆರವಾಗುತ್ತೇವೆ’ ಎಂದರು.

‘70 ವರ್ಷ ಕಾಂಗ್ರೆಸ್ ಏನು ಮಾಡಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಕೇಳಿದ್ದಾರೆ. ಅವರು ಕೇವಲ ಒಂದು ವರ್ಷದಿಂದಷ್ಟೇ ಬಿಜೆಪಿಯಲ್ಲಿದ್ದಾರೆ. ಉಳಿದ ಅವಧಿಯಲ್ಲಿ ಕಾಂಗ್ರೆಸ್‌ನಲ್ಲೇ ಇದ್ದರಲ್ಲ. ಅವರನ್ನು ಬೆಳೆಸಿ, ಶಾಸಕರನ್ನಾಗಿ ಮಾಡಿದ್ದು ಕಾಂಗ್ರೆಸ್ ಅಲ್ಲವೇ’ ಎಂದು ತಿರುಗೇಟು ನೀಡಿದರು.

‘₹ 30 ಸಾವಿರ ಕೋಟಿ ಮೀಸಲಿಡಿ’

ಬೆಂಗಳೂರು: ‘ಕೊರೊನಾ ಎರಡನೇ ಅಲೆ ವ್ಯಾಪಕವಾಗುತ್ತಿರುವುದನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ಕ್ಷೇತ್ರಕ್ಕೆ ₹ 30 ಸಾವಿರ ಕೋಟಿ ಮೀಸಲಿಡ ಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿ ಸೋಂಕಿತರಿಗೆ ಹಾಸಿಗೆಗಳು ಸಿಗುತ್ತಿಲ್ಲ. ಪ್ರತಿ ವಿಚಾರದಲ್ಲೂ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿ, ಆ ಹಣವನ್ನು ಕೊರೊನಾ ನಿಯಂತ್ರಣಕ್ಕೆ ವಿನಿಯೋಗಿಸಬೇಕು. ಸಮರೋಪಾದಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT