ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಎಸ್‌ಎಲ್‌ ಪುನಶ್ಚೇತನಕ್ಕೆ ಚಿಂತನೆ: ಸಿಎಂ ಬೊಮ್ಮಾಯಿ

Last Updated 10 ಏಪ್ರಿಲ್ 2022, 15:51 IST
ಅಕ್ಷರ ಗಾತ್ರ

ಬೆಂಗಳೂರು: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (ವಿಐಎಸ್‌ಎಲ್‌) ಖಾಸಗಿಯವರ ಸಹಭಾಗಿತ್ವದಲ್ಲಿ ಪುನಶ್ಚೇತನಗೊಳಿಸುವ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೆಂಗಳೂರಿನಲ್ಲಿ ನೆಲೆಸಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಿವಾಸಿಗಳಿಗಾಗಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಮಲೆನಾಡಿಗರ ಸ್ನೇಹ ಮಿಲನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಶಿವಮೊಗ್ಗ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮೈಸೂರು ಕಾಗದ ಕಾರ್ಖಾನೆ ಮತ್ತು ವಿಐಎಸ್‌ಎಲ್‌ ಶಿವಮೊಗ್ಗದ ಪ್ರಮುಖ ಉದ್ದಿಮೆಗಳಾಗಿದ್ದವು. ಜಾಗತೀಕರಣದ ಪರಿಣಾಮಗಳಿಂದ ಅವು ಮುಚ್ಚುವ ಹಂತಕ್ಕೆ ಬಂದಿವೆ. ಅಲ್ಲಿನ ನೌಕರರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಖಾಸಗಿ ಸಹಭಾಗಿತ್ವದಲ್ಲಿ ವಿಐಎಸ್‌ಎಲ್‌ ಪುನಶ್ಚೇತನಗೊಳಿಸುವ ಚಿಂತನೆ ಇದೆ’ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಬೃಹತ್‌ ಉದ್ದಿಮೆಗಳು ಕಾರ್ಯಾರಂಭ ಮಾಡಿವೆ. ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವೂ ನಿರ್ಮಾಣವಾಗುತ್ತಿದೆ. ಜೋಗ ಜಲಪಾತವನ್ನು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ₹ 270 ಕೋಟಿ ಅನುದಾನ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ಹೇಳಿದರು.

ಮರಳಿ ತೀರ್ಥಹಳ್ಳಿಗೆ ಅಭಿಯಾನ: ಬೆಂಗಳೂರಿನಲ್ಲಿ ನೆಲೆಸಿರುವ ತೀರ್ಥಹಳ್ಳಿಯ ಜನರ ಸೇವೆ ತವರು ಕ್ಷೇತ್ರಕ್ಕೂ ದೊರೆಯಬೇಕು. ಇದಕ್ಕಾಗಿ ‘ಮರಳಿ ತೀರ್ಥಹಳ್ಳಿಗೆ’ ಎಂಬ ಅಭಿಯಾನವನ್ನು ಆರಂಭಿಸಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು.

‘ತೀರ್ಥಹಳ್ಳಿ ಎಂದರೆ ದೇವರು ವಾಸಿಸುವ ಸ್ಥಳ, ಅದು ದೇವರ ದರ್ಶನವಾಗುವ ಸ್ಥಳ. ಆ ನೆಲದಲ್ಲಿ ಹುಟ್ಟಿ ಬೆಳೆದ ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳು ಎಂದಿಗೂ ಪ್ರಸ್ತುತ’ ಎಂದರು.

ಸಚಿವರಾದ ಆರಗ ಜ್ಞಾನೇಂದ್ರ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಬಿ.ಎಸ್‌. ಯಡಿಯೂರಪ್ಪ, ಹರತಾಳು ಹಾಲಪ್ಪ, ಕುಮಾರ್‌ ಬಂಗಾರಪ್ಪ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT