ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹರಾಜು ನಡೆದರೆ ವರದಿ ಮಾಡಿ’

ನೋಡಲ್‌ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಸೂಚನೆ
Last Updated 10 ಡಿಸೆಂಬರ್ 2020, 13:21 IST
ಅಕ್ಷರ ಗಾತ್ರ

ಮಡಿಕೇರಿ: ‘ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಹರಾಜು ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಕೊಡಗು ಜಿಲ್ಲೆಯಲ್ಲೂ ಇಂಥ ಪ್ರಕರಣ ಕಂಡುಬಂದಲ್ಲಿ ಕೂಡಲೇ ವರದಿ ಮಾಡಬೇಕು. ಈ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಚುನಾವಣಾ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಗ್ರಾ.ಪಂ ಚುನಾವಣೆ ಸಂಬಂಧ ನಡೆದ ಸಭೆಯ‌ಲ್ಲಿ ಅವರು ಮಾತನಾಡಿದರು.

ಮತಗಟ್ಟೆಗಳ ಸಿದ್ಧತೆ, ದುರಸ್ತಿ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು. ಮತಗಟ್ಟೆ ಅಧಿಕಾರಿಗಳ ಪಟ್ಟಿ ಸಿದ್ಧ ಪಡಿಸುವುದು ಮತ್ತಿತರ ಬಗ್ಗೆ ಮಾಹಿತಿ ಪಡೆದರು.

ಮತದಾರರ ಪಟ್ಟಿ ಮುದ್ರಿಸಿಕೊಡುವುದು, ಮಸ್ಟರಿಂಗ್ ಮತ್ತು ‘ಡಿ’ಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರ ಗುರುತಿಸಿ ಜನದಟ್ಟಣೆ ಹೆಚ್ಚಾಗದಂತೆ ಕ್ರಮ ವಹಿಸಬೇಕು. ಕೋವಿಡ್ ಮಾರ್ಗಸೂಚಿ ಅನುಸರಿಸಬೇಕಿರುವುದರಿಂದ, ಈ ಬಗ್ಗೆ ಎಚ್ಚರ ವಹಿಸಬೇಕು. ಭದ್ರತಾ ಕೊಠಡಿ ಸ್ಥಾಪಿಸುವುದು, ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೇವಾ ಮತದಾರರ ಮತಪತ್ರ ನೀಡುವುದು, ಈಗಾಗಲೇ ಸಂತೆ, ಜಾತ್ರೆ, ಮದ್ಯ ಮಾರಾಟ ನಿಷೇಧ ಸಂಬಂಧ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಮೊದಲ ಹಂತದಲ್ಲಿ ನಡೆಯುವ ಮಡಿಕೇರಿ ಮತ್ತು ಸೋಮವಾರಪೇಟೆ ಮತಗಟ್ಟೆ ಅಧಿಕಾರಿಗಳಿಗೆ ಡಿ.17 ಮತ್ತು ವಿರಾಜಪೇಟೆ ಮತಗಟ್ಟೆ ಅಧಿಕಾರಿಗಳಿಗೆ ಡಿ.24 ರಂದು ತರಬೇತಿ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಮತಪೆಟ್ಟಿಗೆ ಮತ್ತು ಮತಗಟ್ಟೆ ಸಾಮಗ್ರಿಗಳನ್ನು ಮತಗಟ್ಟೆವಾರು ಸಿದ್ಧಪಡಿಸಿಕೊಳ್ಳುವುದು, ಕಾಡಾನೆ ಹಾವಳಿ ಇರುವ ಕಡೆ ಮುನ್ನೆಚ್ಚರಿಕೆ ವಹಿಸುವುದು. ಜೊತೆಗೆ, ಅಗತ್ಯ ವಾಹನ ಕಲ್ಪಿಸುವುದು ಮತ್ತಿತರ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಸಲಹೆ ಮಾಡಿದರು.

ಗ್ರಾ.ಪಂ ಚುನಾವಣೆ ಮತದಾನ ಸಂಬಂಧ ಮೊದಲ ಹಂತದಲ್ಲಿ ನಡೆಯುವ ಚುನಾವಣೆಗೆ ಡಿ.3ರೊಳಗೆ ಮತ್ತು 2ನೇ ಹಂತದಲ್ಲಿ ನಡೆಯುವ ಚುನಾವಣೆಗೆ ಡಿ.8ರ ಒಳಗೆ ನೋಂದಣಿ ಮಾಡಿರಬೇಕು ಎಂದು ಹೇಳಿದರು.

ಎಲ್ಲ ಮತಗಟ್ಟೆ ಕೇಂದ್ರಗಳಿಗೆ ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್ ಪೂರೈಸಬೇಕು, ಜನದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ ಖಂಡು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಸಿಂಧೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ತಹಶೀಲ್ದಾರ್‌ ಗೋವಿಂದ ರಾಜು, ಮಹೇಶ್, ಯೋಗಾನಂದ, ಡಿವೈಎಸ್‍ಪಿಗಳಾದ ದಿನೇಶ್ ಕುಮಾರ್, ಶೈಲೇಂದ್ರ, ಡಿಎಚ್‍ಒ ಡಾ.ಕೆ.ಮೋಹನ್, ತಾಲ್ಲೂಕು ವೈದ್ಯಾಧಿಕಾರಿಗಳು, ಚುನಾವಣಾ ನೋಡಲ್ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT