ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.67ಲಕ್ಷ ಮನೆಗಳಿಗೆ ಜಿಪಿಎಸ್: ಬಸವರಾಜ ಬೊಮ್ಮಾಯಿ

ಗ್ರಾಮೀಣ ವಸತಿ ಫಲಾನುಭವಿಗಳ ವಿವರ ದಾಖಲಿಸಿ: ಬೊಮ್ಮಾಯಿ ಸೂಚನೆ
Last Updated 17 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಗ್ರಾಮೀಣ ವಸತಿ ಯೋಜನೆಗಳಡಿ 4.09 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಬಾಕಿ ಇರುವ 1.67 ಲಕ್ಷ ಮನೆಗಳಿಗೆ 15 ದಿನಗಳ ಒಳಗೆ ಜಿಪಿಎಸ್ ಅಪ್‌ಲೋಡ್ ಮತ್ತು ಆಧಾರ್ ಜೋಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ವಸತಿ ಇಲಾಖೆ ಪ್ರಗತಿ ಪರಿಶೀಲನೆ ಮಂಗಳವಾರ ನಡೆಸಿದ ಮುಖ್ಯಮಂತ್ರಿ, ‘ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ನಗರ) 1.8 ಲಕ್ಷ ಮನೆಗಳ ನಿರ್ಮಾಣ ಆರಂಭವಾಗಿಲ್ಲ. ಈ ಯೋಜನೆಗೆ ಪರಿಶಿಷ್ಟರ ಉಪ ಯೋಜನೆ (ಎಸ್‌ಸಿಎಸ್‌ಪಿ, ಟಿಎಸ್‌ಪಿ), ಹಿಂದುಳಿದ ವರ್ಗಗಳು ಹಾಗೂ ಕಾರ್ಮಿಕ ಫಲಾನುಭವಿಗಳ ವಂತಿಗೆ ಮೊತ್ತವನ್ನು ಆಯಾ ಇಲಾಖೆಗಳ ಯೋಜನೆಗಳಡಿ ಪಡೆದುಕೊಂಡು ಅನುಷ್ಠಾನಗೊಳಿಸಬೇಕು’ ಎಂದು ಸೂಚಿಸಿದರು.

ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ ಬೆಂಗಳೂರಿನಲ್ಲಿ 42,361 ಮನೆ ನಿರ್ಮಾಣವಾಗುತ್ತಿದ್ದು, ಬಾಕಿ ಮನೆಗಳ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ವಿವಿಧ ವಸತಿ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಅಲ್ಲದೆ, ಪ್ರವಾಹ ಸಂದರ್ಭದಲ್ಲಿ ಮನೆ ಹಾನಿಗೆ ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು ಎಂದೂ ಮುಖ್ಯಮಂತ್ರಿ ಸೂಚಿಸಿದರು.

ವಸತಿ ಸಚಿವ ವಿ. ಸೋಮಣ್ಣ ಸಭೆಯಲ್ಲಿ ಇದ್ದರು.

ವಿಶ್ವಾಸಕ್ಕೆ ಪಡೆದು ಶಿಕ್ಷಣ ನೀತಿ ಜಾರಿ: ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಲಹೆ ನೀಡಿದರು.

ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ನೀತಿ ಜಾರಿಗೆ ಪೂರಕವಾಗಿ ಕರ್ನಾಟಕ ರಾಜ್ಯ ಶಿಕ್ಷಣ ಆಯೋಗ ಮತ್ತು ಇತರ ಸಾಂಸ್ಥಿಕ ವ್ಯವಸ್ಥೆಯನ್ನು ಸ್ಥಾಪಿಸಲು ರೂಪುರೇಷೆಗಳನ್ನು ಸಿದ್ಧಪಡಿಸಬೇಕು. ಖಾಸಗಿಯವರ ಸಹಯೋಗವನ್ನೂ ಪಡೆದುಕೊಳ್ಳಬೇಕು’ ಎಂದು ಸೂಚಿಸಿದರು.

ರಾಜ್ಯದ ಉನ್ನತ ಶಿಕ್ಷಣದಲ್ಲಿ ನಿವ್ವಳ ದಾಖಲಾತಿ ಅನುಪಾತ (ಜಿಇಆರ್) ಶೇ32ರಷ್ಟಿದ್ದು, ಇದನ್ನು ಶೇ 50ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹೊಸ ನೀತಿ ಅನುಷ್ಠಾನಕ್ಕೆ ಪೂರಕವಾಗಿ ಬಿ.ಇಡಿ., ಡಿ.ಇಡಿ ಪಠ್ಯ ವಿಷಯವನ್ನು ಇನ್ನಷ್ಟು ಪರಿಣಾಮಕಾರಿಯಾಗುವಂತೆ ಪರಿಷ್ಕರಿಸಬೇಕು. ಯುವಕರು ಉದ್ಯೋಗ ಪಡೆದುಕೊಳ್ಳಲು ಅನುವಾಗುವಂತೆ ಜಿಲ್ಲೆಗೊಂದು ತಾಂತ್ರಿಕ ಶಿಕ್ಷಣ ಶಾಲೆ ಆರಂಭಿಸಬೇಕು’ ಎಂದೂ ಮುಖ್ಯಮಂತ್ರಿ ಸಲಹೆ ನೀಡಿದರು.ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಸಭೆಯಲ್ಲಿದ್ದರು.

ರಸ್ತೆ ದುರಸ್ತಿಗೆ ಆದ್ಯತೆ: ಸಿ.ಎಂ ಸೂಚನೆ

ಬೆಂಗಳೂರು: ಭಾರಿ ಮಳೆಯಿಂದ ಹಾಳಾದ ರಸ್ತೆಗಳ ದುರಸ್ತಿ ಕಾರ್ಯವನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ರಸ್ತೆ ದುರಸ್ತಿಗೆ ₹ 300 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿ ಜಿಲ್ಲೆಯ ರಸ್ತೆಗಳ ಸಾಂದ್ರತೆ ಪರಿಶೀಲಿಸಿ, ಕಡಿಮೆ ಇರುವ ಜಿಲ್ಲೆಗಳಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ₹ 1000 ಕೋಟಿಯ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT