ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಚುನಾವಣೆ ಶೀಘ್ರ

ಡಿ.ಸಿ, ಸಿಇಒ, ಎಸ್‌ಪಿಗಳ ಜೊತೆ ಆಯೋಗದಿಂದ ವಿಡಿಯೊ ಸಂವಾದ ನಾಳೆ
Last Updated 15 ನವೆಂಬರ್ 2020, 20:50 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತಾವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಮೂರು ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದ ಬೆನ್ನಲ್ಲೇ, ಚುನಾವಣೆ ನಡೆಸಲು ಅಗತ್ಯವಾದ ಸಿದ್ಧತೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುರುಕು ನೀಡಿದೆ.

‘ಹೈಕೋರ್ಟ್‌ ನಿರ್ದೇಶನ ನೀಡಿರುವುದರಿಂದ ಕೋವಿಡ್‌ ಸವಾಲಿನ ನಡುವೆಯೂ ರಾಜ್ಯದ 5,800 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ಡಿಸೆಂಬರ್‌ ಮೊದಲ ವಾರದ ಒಳಗೆ ಚುನಾವಣೆಯ ದಿನಾಂಕ ಘೋಷಿಸಲಾಗುವುದು’ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಿ. ಬಸವರಾಜು ತಿಳಿಸಿದರು.

ಚುನಾವಣೆ ನಡೆಸಲು ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತಂತೆ ಇದೇ 17ರಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ
ಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಲಾಗುವುದು. ಅಂದು ಬೆಳಿಗ್ಗೆ ಬೆಂಗಳೂರು ಮತ್ತು ಕಲಬುರ್ಗಿ ವಿಭಾಗ ಹಾಗೂ ಮಧ್ಯಾಹ್ನದ ಬಳಿಕ ಬೆಳಗಾವಿ ಮತ್ತು ಮೈಸೂರು ವಿಭಾಗದ ಅಧಿಕಾರಿಗಳ ಜೊತೆ ವಿಚಾರ ವಿನಿಮಯ ನಡೆಸಲಾಗುವುದು’ ಎಂದು ಅವರು ಹೇಳಿದರು.

‘ಚುನಾವಣೆ ನಡೆಸುವಂತೆ ಹೈಕೋರ್ಟ್‌ ನೀಡಿದ ನಿರ್ದೇಶನದಿಂದ ನಮಗೆ ಬಲ ಬಂದಂತಾಗಿದೆ. ಹೀಗಾಗಿ, ನಾವು ಆ ನಿಟ್ಟಿನಲ್ಲಿ ಮುಂದುವರಿಯುತ್ತೇವೆ. ಕೆಲವು ಗ್ರಾಮ ಪಂಚಾಯಿತಿಗಳಿಗೆ ಈ ಹಿಂದೆ ವಿಳಂಬವಾಗಿ ಚುನಾವಣೆ ನಡೆದಿತ್ತು. ಕೆಲವು ಪಂಚಾಯಿತಿಗಳ ವ್ಯಾಜ್ಯ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ಆ ಪಂಚಾಯಿತಿಗಳನ್ನು ಹೊರತುಪಡಿಸಿ ಉಳಿದವುಗಳಿಗೆ ಈಗ ಚುನಾವಣೆ ನಡೆಸಲಾಗುವುದು’ ಎಂದು ಅವರು ವಿವರಿಸಿದರು.

‘ಚುನಾವಣೆ ನಡೆಸಲು ಕೋವಿಡ್‌ ನಮ್ಮ ಮುಂದಿರುವ ದೊಡ್ಡ ಸವಾಲು. ಕೋವಿಡ್‌ ಭಯದಿಂದ ಮತದಾರರು ಮತಗಟ್ಟೆಗೆ ಮತ ಚಲಾಯಿಸಲು ಬರಬಹುದೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಕೂಡಾ ಈ ಬಗ್ಗೆ ಭಯ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಸಿದ್ಧತೆಯ ಜೊತೆಗೆ, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಮತಗಟ್ಟೆಗೆ ಬರುವಂತೆ ಮಾಡಲು ಏನೇನು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆಯೂ ಚರ್ಚೆ ನಡೆಸಲಾಗುವುದು’ ಎಂದರು.

‘ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ ಇನ್ನೂ ಹರಡುತ್ತಿದೆ. ಇಂತಹ ಪರಿಸ್ಥಿತಿ
ಯಲ್ಲಿ ಈ ಜಿಲ್ಲೆಗಳಲ್ಲಿ ಚುನಾವಣೆ ನಡೆಸಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಈ ಜಿಲ್ಲೆಗಳಲ್ಲಿ ಏನೇನು ಸಮಸ್ಯೆಗಳು ಎದುರಾಗಬಹುದು ಎಂಬ ಬಗ್ಗೆಯೂ ಅಭಿಪ್ರಾಯಗಳನ್ನು ಪಡೆಯಲಾಗುವುದು. ಸಮಸ್ಯೆಗಳಿಗೆ ಪರಿಹಾರವನ್ನೂ ಸೂಚಿಸಲಾಗುವುದು’ ಎಂದು ವಿವರಿಸಿದರು.

ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ಶೀಘ್ರ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಕೆ.ಸಿ. ಕೊಂಡಯ್ಯ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ‌ ನೇತೃತ್ವದ ವಿಭಾಗೀಯ ಪೀಠ, ಮೂರು ವಾರಗಳಲ್ಲಿ ಚುನಾವಣೆಯ ದಿನಾಂಕ ಪ್ರಕಟಿಸುವಂತೆ ಆಯೋಗಕ್ಕೆ ನಿರ್ದೇಶನ ನೀಡಿತ್ತು.

*****

ಕೋರ್ಟ್‌ ಆದೇಶದಂತೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲು ನಿರ್ಧರಿಸಿದ್ದೇವೆ. ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸುತ್ತೇವೆ
-ಬಿ. ಬಸವರಾಜು, ಆಯುಕ್ತರು, ರಾಜ್ಯ ಚುನಾವಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT