ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ‘ನಿಶ್ಶಬ್ದ ಸ್ಫೋಟ’ದಿಂದ ಅಂತರ್ಜಲ ಕಲುಷಿತ

ಕಲ್ಲು ಗಣಿಗಾರಿಕೆಯ ಪರಿಣಾಮ ಭಯಾನಕ * ನಾಶವಾದ ಸಾಲು ಬೆಟ್ಟಗಳು *ಪಾಳು ಬಿದ್ದ ಶಾಲೆ
Last Updated 10 ಜುಲೈ 2021, 20:09 IST
ಅಕ್ಷರ ಗಾತ್ರ

ಮಂಡ್ಯ: ಬೇಬಿಬೆಟ್ಟದ ಕಲ್ಲು ಗಣಿಗಳಲ್ಲಿ ನಡೆಯುತ್ತಿದ್ದ ಅಪಾಯಕಾರಿ ‘ನಿಶ್ಶಬ್ದಸ್ಫೋಟ’ದಿಂದಾಗಿ (ಸೈಲೆಂಟ್‌ ಬ್ಲಾಸ್ಟ್‌) ಅಂತರ್ಜಲ ಕಲುಷಿತಗೊಂಡಿದೆ.

2018ರಲ್ಲಿ ‘ಕಲ್ಲುಗಣಿಗಳಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆಯುಂಟಾಗುವ ಸಾಧ್ಯತೆ ಇದೆ’ ಎಂಬ ವರದಿ ಬಂದ ನಂತರ ಗಣಿಗಾರಿಕೆ ನಿಷೇಧ ಎಂಬುದು ಹಾವು–ಏಣಿ ಆಟದಂತಾಗಿದೆ. ನಿಷೇಧದ ನಡುವೆಯೂ ಗಣಿಗಾರಿಕೆಗೆ ಉಪಾಯ ಹುಡುಕಿಕೊಂಡ ಮಾಲೀಕರು ಶಬ್ದವಿಲ್ಲದ ಸ್ಫೋಟದ ತಂತ್ರವನ್ನು ರೂಪಿಸಿಕೊಂಡಿದ್ದಾರೆ. ಇತ್ತೀಚಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೇ ಅದನ್ನು ಬಹಿರಂಗಗೊಳಿಸಿದ್ದಾರೆ.

‘ಆಳವಾಗಿ ಕುಳಿ ತೋಡಿ, ಅಪಾಯಕಾರಿ ರಾಸಾಯನಿಕ ಬಳಸಿ ಬಂಡೆಯನ್ನು ಸಡಿಲಗೊಳಿಸುವ (ವೈಬ್ರೇಷನ್‌) ತಂತ್ರವಿದು. ಅದರಿಂದ ಕಲ್ಲು ಬಂಡೆ ಸಿಡಿಯದೆ ಇದ್ದಲ್ಲಿಯೇ ಒಡೆದುಕೊಳ್ಳುತ್ತದೆ. ರಾಸಾಯನಿಕಗಳು ಅಂತರ್ಜಲದೊಂದಿಗೆ ಬೆರೆಯುತ್ತವೆ. ಬೃಹತ್‌ ಕಾಮಗಾರಿ ಸೇರಿ ತುರ್ತು ಸಂದರ್ಭದಲ್ಲಿ ಮಾತ್ರ ರಾಸಾಯನಿಕಯುಕ್ತ ಸ್ಫೋಟಕ್ಕೆ ಅವಕಾಶವಿದೆ. ಅದಕ್ಕೆ ಸ್ಫೋಟಕ ಕಾಯ್ದೆಯಡಿ ವಿಶೇಷ ಅನುಮತಿ ಪಡೆಯಬೇಕು. ಬೇಬಿಬೆಟ್ಟದಲ್ಲಿ ಈಚೆಗೆ ಅಂಥ ಸ್ಫೋಟ ನಡೆಸಿದ್ದಾರೆ’ ಎಂದು ಹಿರಿಯ ಭೂವಿಜ್ಞಾನಿಯೊಬ್ಬರು ತಿಳಿಸಿದರು.

ನಿಶ್ಯಬ್ದ ಸ್ಫೋಟದಿಂದ ಬೇಬಿಬೆಟ್ಟದ ಅಕ್ಕಪಕ್ಕದ ಗ್ರಾಮಗಳ ಜನ ರಾತ್ರಿ ದುರ್ವಾಸನೆಯ ನಡುವೆ ನಿದ್ದೆ ಮಾಡಬೇಕಾಗಿದೆ. ಕೊಳವೆಬಾವಿಯಲ್ಲೂ ದುರ್ವಾಸನೆಯುಕ್ತ ನೀರು ಬರುತ್ತಿರುವುದರಿಂದ ಕ್ಯಾನ್‌ ನೀರು ಬಳಸುತ್ತಿದ್ದಾರೆ.

‘ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀರು ಪರೀಕ್ಷೆ ನಡೆಸುವುದಾಗಿ ಜಿಲ್ಲಾಧಿಕಾರಿ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ’ ಎಂದು ಬೇಬಿ ಗ್ರಾಮದ ಲೋಕೇಶ್‌ ತಿಳಿಸಿದರು.

ಸಾಲುಬೆಟ್ಟ ನಾಶ: ’ಬೇಬಿಬೆಟ್ಟವೆಂದರೆ ಒಂದಲ್ಲ, ಬೆಟ್ಟಗಳ ಸಾಲು. ಏಳೆಂಟು ತಲೆಮಾರುಗಳ ಗಣಿಗಾರಿಕೆಯಿಂದಾಗಿ ಬೆಟ್ಟಗಳು ನಾಶವಾಗಿವೆ. ಈಗ ಉಳಿದಿರುವುದು ಬೇಬಿಬೆಟ್ಟ ಮಾತ್ರ. ಕೆಳಗೆ ಮಹದೇಶ್ವರ, ಮೇಲ್ಭಾಗದಲ್ಲಿ ಸಿದ್ದೇಶ್ವರ ದೇವಾಲಯವಿದ್ದು ಗಣಿ ಮಾಲೀಕರು ಅದನ್ನು ಮುಟ್ಟಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಸ್ಥಳೀಯರು.

ಬೆಟ್ಟದ ತಪ್ಪಲಲ್ಲಿ ಶ್ರೀರಾಮ ಯೋಗೀಶ್ವರ ಮಠವಿದ್ದು ದಾಸೋಹ ಭವನದ ಗೊಡೆಗಳು ಬಿರುಕು ಬಿಟ್ಟಿವೆ. ಸ್ಫೋಟದ ಸದ್ದು,ದೂಳಿನಿಂದಾಗಿ ಮಠದ ಪ್ರೌಢಶಾಲೆ ಮುಚ್ಚಿದೆ. ಅಲ್ಲಿಯೇ ಆರಂಭವಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಳಾಂತರಗೊಂಡಿದ್ದು ಕಟ್ಟಡ ಪಾಳುಬಿದ್ದಿದೆ.

‘ಕ್ರಷರ್‌ ಹಾವಳಿಯಿಂದ ಭಕ್ತರು ಜಾತ್ರೆ, ಧಾರ್ಮಿಕ ಉತ್ಸವಗಳಿಗೆ ಮಠಕ್ಕೆ ಬರಲು ಹೆದರುತ್ತಾರೆ. ನಮಗೂ ಭಯ. ದೇವರ ಮೇಲೆ ಭಾರ ಹಾಕಿದ್ದೇವೆ’ ಎಂದು ಶ್ರೀರಾಮ ಯೋಗೀಶ್ವರ ಮಠದ ಗುರು ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಗಣಿಸ್ಫೋಟದಿಂದ ಹಳ್ಳಿಗಳ ಜನ ನಲುಗಿದ್ದಾರೆ. ಮನೆಗಳು ಬಿರುಕು ಬಿಟ್ಟಿವೆ. ಜಲಾಶಯದಿಂದ ಮಂಡ್ಯ ತಾಲ್ಲೂಕು ದುದ್ದ ಹೋಬಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಶುದ್ಧೀಕರಣ ಘಟಕ ಕ್ರಷರ್‌ಗಳ ನಡುವೆಯೇ ಸಿಲುಕಿದೆ. ಪೈಪ್‌ಲೈನ್‌ ಒಡೆಯುತ್ತಿದ್ದು ನೀರು ಕಲುಷಿತಗೊಳ್ಳುತ್ತಿದೆ.

ಸುಮಲತಾ, ಎಚ್‌ಡಿಕೆ ವಿರುದ್ಧ ಅಸಮಾಧಾನ
ಮಂಡ್ಯದ ಬೇಬಿಬೆಟ್ಟ, ಕೆಆರ್‌ಎಸ್‌ ವಿಚಾರ ಇಟ್ಟುಕೊಂಡು ಬೆಂಗಳೂರಿನಲ್ಲಿ ವಾಕ್ಸಮರದಲ್ಲಿ ತೊಡಗಿರುವ ಸಂಸದೆ ಸುಮಲತಾ, ಜೆಡಿಎಸ್‌ ಶಾಸಕಾಂಗದ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೆಆರ್‌ಎಸ್‌ ಬಿರುಕು ಬಿಟ್ಟಿದೆ ಎಂದು ಹೇಳಿ ಸುಮಲತಾ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದ್ದಾರೆ. ಅದನ್ನೇ ಮುಂದಿಟ್ಟುಕೊಂಡು ಎಚ್‌.ಡಿ.ಕುಮಾರಸ್ವಾಮಿ ರಾಜಕಾರಣ ಮಾಡುತ್ತಿದ್ದಾರೆ. ಮೇ ತಿಂಗಳಲ್ಲಿ ಕೋವಿಡ್‌ ಕಾಡುತ್ತಿದ್ದಾಗ ಇವರಿಬ್ಬರೂ ಎಲ್ಲಿದ್ದರು’ ಎಂದು ವಕೀಲ ಜೆ.ರಾಮಯ್ಯ ಪ್ರಶ್ನಿಸಿದರು.

<strong>ಬೇಬಿಬೆಟ್ಟದ ತಪ್ಪಲಲ್ಲಿ ಶ್ರೀರಾಮ ಯೋಗೀಶ್ವರ ಮಠದ ಪ್ರೌಢಶಾಲೆ ಪಾಳು ಬಿದ್ದಿರುವುದು</strong>
ಬೇಬಿಬೆಟ್ಟದ ತಪ್ಪಲಲ್ಲಿ ಶ್ರೀರಾಮ ಯೋಗೀಶ್ವರ ಮಠದ ಪ್ರೌಢಶಾಲೆ ಪಾಳು ಬಿದ್ದಿರುವುದು

ಬಾಯಿ ಬಿಟ್ಟರೆ ಟ್ರಕ್‌ ಹತ್ತಿಸುತ್ತಾರೆ!
ದಿನ 24 ಗಂಟೆಯೂ ಕಲ್ಲು ತುಂಬಿದ ಟ್ರಕ್‌ಗಳು ಓಡಾಡುವ ಕಾರಣ ಸುತ್ತಮುತ್ತಲಿನ ಹಳ್ಳಿಗಳ ರೈತರ ಜಮೀನು, ನಾಲೆ ಏರಿ ನಾಶವಾಗಿವೆ. ಗ್ರಾಮೀಣ ರಸ್ತೆಗಳು ಕೆರೆಯಂತಾಗಿವೆ.

‘ಕಲ್ಲುಗಣಿ ವಿರುದ್ಧ ನಾವು ಯಾವುದೇ ಹೇಳಿಕೆ ನೀಡುವುದಿಲ್ಲ, ಬಾಯಿ ಬಿಟ್ಟರೆ ಟ್ರಕ್‌ ಹತ್ತಿಸುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ಬೇಬಿಬೆಟ್ಟಕ್ಕೆ ಹೊಂದಿಕೊಂಡಂತಿರುವ ಕಾಲೊನಿಯೊಂದರ ಜನರು ಭಯ ವ್ಯಕ್ತಪಡಿಸಿದರು.

ಪ್ರತಿಧ್ವನಿಸಿದ ‘ಪ್ರಜಾವಾಣಿ’ ವರದಿ
ಕಲ್ಲುಗಣಿಗಾರಿಕೆಗೆ ಅನುಮತಿ ಕೊಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಗಣಿ ಮಾಲೀಕರು ನಗರದ ಕಲ್ಯಾಣ ಮಂಟಪವೊಂದರಲ್ಲಿ ಶನಿವಾರ ನಡೆಸಿದ ಸಭೆಯಲ್ಲಿ 'ಪ್ರಜಾವಾಣಿ' ವರದಿ ಪ್ರತಿಧ್ವನಿಸಿತು.

‘ಗಣಿ ಸ್ಫೋಟವನ್ನು ಅವೈಜ್ಞಾನಿಕ ಎಂದು ಬಿಂಬಿಸಿ ಬರೆಯುತ್ತಿದ್ದಾರೆ. ನಾವು ಕ್ವಾರೆಗಾಗಿ ಸಣ್ಣ ಪ್ರಮಾಣದ ಸ್ಫೋಟ ನಡೆಸುತ್ತಿದ್ದೇವೆ. ಅದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗುವುದಿಲ್ಲ’ ಎಂದರು.

‘ಗಣಿಗಾರಿಕೆ ಸ್ಥಗಿತಗೊಂಡಿರುವ ಕಾರಣ ಸರ್ಕಾರಿ ಕಾಮಗಾರಿಗಳು ನಡೆಯುತ್ತಿಲ್ಲ. ಸದ್ಯ ಹೊರ ಜಿಲ್ಲೆಗಳಿಂದ ಕಾಮಗಾರಿ ಸಾಮಗ್ರಿ ತರಿಸಿಕೊಳ್ಳಲಾಗುತ್ತಿದೆ. ವಾರದೊಳಗೆ ಗಣಿಗಾರಿಕೆಗೆ ಅವಕಾಶ ನೀಡದಿದ್ದರೆ ಹೊರ ಜಿಲ್ಲೆಯಿಂದ ಬರುತ್ತಿರುವ ಲಾರಿಗಳನ್ನು ತಡೆದು ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

*
ಕೇಂದ್ರ ಜಲ ಆಯೋಗದ ಮಾರ್ಗದರ್ಶಿ ಸೂತ್ರದಂತೆ ಹಲವು ಹಂತಗಳಲ್ಲಿ ಜಲಾಶಯ ನಿರ್ವಹಣೆ ಮಾಡಲಾಗುತ್ತಿದೆ. ಜಲಾಶಯಕ್ಕೆ ತೊಂದರೆ ಇಲ್ಲ
–ಶಂಕರೇಗೌಡ, ಅಣೆಕಟ್ಟೆ ಸುರಕ್ಷತಾ ಪರಿಶೀಲನಾ ಸಮಿತಿ ಸದಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT