ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಬೇಸರ ನೀಗಲು ‘ಬೆಂಡೆ’ಮದ್ದು!: ಆತಂಕ ಹೋಗಲಾಡಿಸಲು ಕೃಷಿ ‘ಅಸ್ತ್ರ’

ಬೀಜ ಸಂರಕ್ಷಣೆ, ಸ್ಥಳೀಯ ತಳಿಗಳ ಬೇಸಾಯ
Last Updated 7 ಜೂನ್ 2021, 1:06 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಹಾಗೂ ಲಾಕ್‌ಡೌನ್‌ನಿಂದ ಜನರಲ್ಲಿರುವ ಮೂಡಿರುವ ಆತಂಕ ಹೋಗಲಾಡಿಸಿ, ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಲು ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಕಾರ್ಕಳ ಶಾಸಕ ಹಾಗೂ ಸರ್ಕಾರದ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಇದಕ್ಕಾಗಿ ಕೃಷಿಯನ್ನೇ ‘ಅಸ್ತ್ರ’ವಾಗಿ ಬಳಸಿದ್ದಾರೆ.

ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಕಜೆ ಅಕ್ಕಿ ಬೆಳೆಯಲು ಪ್ರೋತ್ಸಾಹಿಸಿದ್ದ ಅವರು, ಈ ವರ್ಷ ಮನೆ– ಮನೆಗಳಲ್ಲಿ ಬಿಳಿ ಬೆಂಡೇಕಾಯಿ ಬೆಳೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಕಾರ್ಲ ಬೆಂಡೆಗೆ ಮನ್ನಣೆ:ಕರಾವಳಿ ಭಾಗದಲ್ಲಿ ಮಾತ್ರ ಬೆಳೆಯುವ ಕಾರ್ಕಳ ಮೂಲದ ಬಿಳಿ ಬೆಂಡೆ ವಿಶಿಷ್ಟ ಸ್ವಾದವುಳ್ಳದ್ದು. ರುಚಿ, ಬಣ್ಣ, ಆಕಾರ (ಎಂಟು ಕೋನಗಳು) ಮತ್ತು ಔಷಧೀಯ ಗುಣದಿಂದ ಪ್ರಸಿದ್ಧಿ ಪಡೆದಿದೆ. ‘ಕಾರ್ಲ ಬೆಂಡೆ’ ಎಂದೇ ಕರೆಯಲಾಗುತ್ತದೆ.

ಈ ಮಳೆಗಾಲದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ– ಮನೆಗಳಲ್ಲೂ ಬಿಳಿ ಬೆಂಡೆ ಬೆಳೆಯುವಂತೆ ಜನರನ್ನು ಪ್ರೇರೇಪಿಸಲು ಸುನಿಲ್ ಕುಮಾರ್ ಮುಂದಾಗಿದ್ದಾರೆ. ಜೂನ್‌ 1 ರಿಂದ ಜನರಿಗೆ ಉಚಿತವಾಗಿ ಬೀಜ ವಿತರಣೆ ಆರಂಭಿಸಿದ್ದಾರೆ.

‘ಕಾರ್ಕಳ ಬಿಳಿ ಬೆಂಡೆ’ ಬ್ರ್ಯಾಂಡ್‌ ಅನ್ನು ಹೆಚ್ಚು ಜನಪ್ರಿಯಗೊಳಿಸುವುದರ ಜತೆಗೆ ರಾಸಾಯನಿಕ ಮುಕ್ತ ಆಹಾರ ಸೇವನೆ ಪ್ರಚಾರಗೊಳಿಸುವುದು, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಮಾರುಕಟ್ಟೆ ಕಲ್ಪಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶ. ಕಳೆದ ಮುಂಗಾರಿನ ಸಂದರ್ಭದಲ್ಲಿ ‘ಕಾರ್ಲ ಕಜೆ’ ಅಕ್ಕಿಯನ್ನು (ಕಾರ್ಕಳಕ್ಕೆ ತುಳುವಿನಲ್ಲಿ ಕಾರ್ಲ ಎನ್ನುತ್ತಾರೆ) ಜನಪ್ರಿಯಗೊಳಿಸಿದ ಬಳಿಕ ಸ್ಥಳೀಯವಾಗಿ ಬೆಳೆಯುವ ಅಕ್ಕಿಗೆ ವ್ಯಾಪಕ ಬೇಡಿಕೆ ಬಂದಿದೆ.

ಮನೆ ಅಂಗಳ, ಗದ್ದೆ, ಗುಡ್ಡೆ, ಕುಂಡ, ಗೋಣಿ ಚೀಲ ಹೀಗೆ ಎಲ್ಲಿ ಬೇಕಾದರೂ ಬೆಂಡೆಯನ್ನು ಬೆಳೆಸಬಹುದು. ರೈತರು ಮಾತ್ರವಲ್ಲ, ಎಲ್ಲರ ಮನೆಯಲ್ಲೂ ಇದನ್ನು ಬೆಳೆಯಬೇಕು. ಸ್ಥಳೀಯ ತಳಿಯನ್ನು ಪ್ರವರ್ಧಮಾನಕ್ಕೆ ತರಬೇಕು ಎಂಬ ಕಾರಣಕ್ಕೆ ಒಂದೂವರೆ ವರ್ಷದ ಹಿಂದೆ 200 ರೈತರನ್ನು ಸೇರಿಸಿ ಯೋಜನೆ ಸಿದ್ಧಪಡಿಸಲಾಯಿತು. ಸ್ಥಳೀಯ ತಳಿಯ ಕಜೆ ಅಕ್ಕಿ, ಬೆಂಡೆ, ಅರಿಶಿಣ, ಜೇನು ಕೃಷಿ ಕೈಗೆತ್ತಿಕೊಳ್ಳುವ ಸಲಹೆಯೂ ಬಂದಿತ್ತು. ಅಂತಿಮವಾಗಿ ಕಜೆ ಅಕ್ಕಿ ಮೊದಲ ಬಾರಿಗೆ ಕೈಗೆತ್ತಿಕೊಂಡೆವು. ಇದೀಗ ಕ್ಷೇತ್ರದ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಲು ಬೆಂಡೆ ಆಯ್ದುಕೊಂಡಿದ್ದೇವೆ ಎಂದು ಸುನಿಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಳಿಯೇ ಮರೆಯಾಗುತ್ತಿರುವ ಇದರ ಬೀಜಗಳನ್ನು ಕಷ್ಟಪಟ್ಟು ಸಂಪಾದಿಸಲಾಗಿದೆ. ಈ ಬಾರಿ ಹೆಚ್ಚು ಇಳುವರಿ ಬರುವುದರಿಂದ ಬಿತ್ತನೆ ಬೀಜವನ್ನು ಸಂಗ್ರಹಿಸಲಾಗುತ್ತದೆ’ ಎಂದರು.

ಕಜೆ ಅಕ್ಕಿಯೇ ಉಡುಗೊರೆ
ವಿವಿಧ ಸರ್ಕಾರಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಒಂದು ಕೆ.ಜಿ ಅಥವಾ ಎರಡು ಕೆ.ಜಿಯಷ್ಟು ಕಜೆ ಅಕ್ಕಿ (ಕೆಂಪು ಅಕ್ಕಿ) ಪೊಟ್ಟಣವನ್ನು ನೆನಪಿನ ಕಾಣಿಕೆಯಾಗಿ ನೀಡುವ ಪರಿಪಾಠ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಆರಂಭವಾಗಿದೆ. ಮರದಿಂದ ಮಾಡಿದ ಅಥವಾ ಇತರ ರೀತಿಯ ಕಾಣಿಕೆ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಸುನಿಲ್‌ ಕುಮಾರ್‌ ತಿಳಿಸಿದರು.

ಕಳೆದ ವರ್ಷ 5,500 ಕ್ವಿಂಟಲ್‌ ಸಾವಯವ ಕಜೆ ಅಕ್ಕಿ ಬೆಳೆಯಲಾಯಿತು. ‘ಪರಂಪರಾ ಸಹಕಾರ ಸಂಘ’ದ ಜತೆ ಒಪ್ಪಂದ ಮಾಡಿಕೊಂಡೆವು. ಮಾರುಕಟ್ಟೆ ದರಕ್ಕಿಂತ ₹2 ಜಾಸ್ತಿ ಕೊಟ್ಟು ರೈತರಿಂದ ಖರೀದಿ ಮಾಡಿದರು. ಮುಂಬೈ, ಬೆಂಗಳೂರು ಸೇರಿದಂತೆ ಹಲವು ನಗರಗಳಿಂದ ಬೇಡಿಕೆ ಬಂದಿತು. ಈ ವರ್ಷ 10,500 ಕ್ವಿಂಟಲ್‌ ಬೆಳೆಯುವ ಗುರಿ ಹಾಕಿಕೊಂಡಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT