ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಳಕೆ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿ: ಎಚ್‌ಡಿಕೆ

Last Updated 2 ಮೇ 2022, 7:59 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಯನ್ನು ವಿರೂಪಗೊಳಿಸಿದ್ದ ಎಂಇಎಸ್‌ ಕಿರಾತಕರ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರಮೃದು ಧೋರಣೆ ತಾಳಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಎಂಇಎಸ್‌ ನಿಷೇಧಿಸಿ ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು (ಎಂಇಎಸ್‌) ನಿಷೇಧಿಸಿ ಎಂದು ಇಡೀ ಕರ್ನಾಟಕವೇ ಒಕ್ಕೊರಲಿನಿಂದ ಆಗ್ರಹ ಮಾಡಿತ್ತು. ಬಿಜೆಪಿ ಸರ್ಕಾರ ಅಸಡ್ಡೆ ತೋರಿದ ಪರಿಣಾಮ ಪುಂಡರು ಮತ್ತೆ ಬಾಲ ಬಿಚ್ಚಿದ್ದಾರೆ. ಭಾಷೆ-ಭಾಷೆಗಳ ಜನರ ನಡುವೆ ಬೆಂಕಿ ಹಚ್ಚುವ ಇವರು ಭಯೋತ್ಪಾದಕರು. ಮಹಾರಾಷ್ಟ್ರ ದಿನದ ನೆಪದಲ್ಲಿ ಎಂಇಎಸ್‌ ಪುಂಡರು ನಾಡದ್ರೋಹ ಎಸಗಿದ್ದಾರೆ. ಕರ್ನಾಟಕದಲ್ಲೇ ಇದ್ದು ಕನ್ನಡ ನೆಲದ ವಿರುದ್ಧ ವಿಧ್ವಂಸಕ ಕೃತ್ಯ ಎಸಗಿರುವ ಶುಭಂ ಶೆಳಕೆ ಎಂಬ ಧೂರ್ತನು ಫೇಸ್‌ಬುಕ್‌ನಲ್ಲಿ ರಾಜ್ಯವನ್ನು ಒಡೆಯುವ ಸಂದೇಶ ಪೋಸ್ಟ್‌ ಮಾಡಿದ್ದಾನೆ. ವಿಡಿಯೋ ಮೂಲಕ ಕನ್ನಡಿಗರನ್ನು ಕೆಣಕಿದ್ದಾನೆ ಎಂದು ಎಚ್‌ಡಿಕೆ ಕಿಡಿ ಕಾರಿದ್ದಾರೆ.

ಕರ್ನಾಟಕದ ಭೂಪಟವನ್ನು ತಿರುಚಿ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ‌ ನಾಡದ್ರೋಹಿ ಗ್ರಾಫಿಕ್ ಮಾಡಿ ಅದನ್ನು ಪೋಸ್ಟ್‌ ಮಾಡಿರುವ ಶೆಳಕೆಗೆ ಚಳಿ ಬಿಡಿಸಬೇಕಿದೆ.

‘ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತ ಹೋರಾಟದ ಮುನ್ನುಡಿ ಬರೆದಿದೆ‘ಎಂದು ಉದ್ರೇಕಕಾರಿ ಬರಹ ಬರೆದ ಅವನ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೆಳಗಾವಿ ಗಲಾಟೆಯಲ್ಲಿ ಜೈಲು ಸೇರಿದ್ದ ಶುಭಂ ಶೆಳಕೆ, ಈಗ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರ ಸರ್ಕಾರ ಇದೆಯಾ? ಅಥವಾ ಮಹಾರಾಷ್ಟ್ರದ ಬಾಲಂಗೋಚಿ ಆಡಳಿತ ಉಂಟಾ? ತಲೆಯ ಮೇಲೆ ಕೇಸರಿ ಪೇಟ, ಭುಜದ ಮೇಲೆ ಕೇಸರಿಶಾಲು ಧರಿಸಿ ಪೋಸು ಕೊಡುವ ಎಂಇಎಸ್ ಪುಂಡರ ಮೇಲೆ ಪ್ರಕರಣ ದಾಖಲಿಸಲು ಬಿಜೆಪಿ ಸರ್ಕಾರದ ಮನಸ್ಸು ಒಪ್ಪುತ್ತಿಲ್ಲವಾ? ಸ್ಪಷ್ಟಪಡಿಸಲಿ ಎಂದಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಇರುವುದು ಒಂದೇ ಆಯ್ಕೆ. ಎಂಇಎಸ್ ಅನ್ನು ಕೂಡಲೇ ನಿಷೇಧಿಸಬೇಕು ಹಾಗೂ ಕಿಡಿಗೇಡಿ ಶೆಳಕೆಯನ್ನು ಬಂಧಿಸಿ ರಾಜ್ಯದಿಂದ ಹೊರಹಾಕಬೇಕು. ಇಲ್ಲವಾದರೆ ʼಬಿಜೆಪಿಯನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ ಬಾಲʼ ಎನ್ನದೇ ವಿಧಿ ಇಲ್ಲ ಎಂದು ಹೇಳಿದ್ದಾರೆ.

‘ರಾಜ್ಯವಿರೋಧಿ ರಾಷ್ಟ್ರೀಯವಾದʼವನ್ನು ಕನ್ನಡಿಗರು ಎಂದೂ ಸಹಿಸುವುದಿಲ್ಲ ಎನ್ನುವುದನ್ನು ಬಿಜೆಪಿ ನೆನಪಿನಲ್ಲಿ ಇಟ್ಟುಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT