ಮಂಗಳವಾರ, ಸೆಪ್ಟೆಂಬರ್ 27, 2022
27 °C

ಎಸಿಬಿ ರದ್ದು| ಮೂರೂ ಪಕ್ಷಗಳ ನಾಯಕರು ಬೆತ್ತಲಾಗಿದ್ದಾರೆ ಎಂದ ಎಚ್‌. ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿ ಹೈಕೋರ್ಟ್‌ ನೀಡಿರುವ ತೀರ್ಪಿನಿಂದಾಗಿ ಪ್ರಮುಖ ಮೂರೂ ರಾಜಕೀಯ ‍ಪಕ್ಷಗಳ ನಾಯಕರು ಬೆತ್ತಲಾಗಿದ್ದಾರೆ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್‌ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ತೀರ್ಪು ಸ್ವಾಗತಾರ್ಹ. ರಾಜಕೀಯ ಭ್ರಷ್ಟಾಚಾರ ತೊಲಗಿಸಲು ಲೋಕಾಯುಕ್ತ ತರಲಾಗಿತ್ತು. ಅದನ್ನು 2014ರಲ್ಲಿದ್ದ ರಾಜ್ಯ ಸರ್ಕಾರ ಶಿಥಿಲಗೊಳಿಸಿತ್ತು’ ಎಂದರು.

ಇದನ್ನೂ ಓದಿ: 

‘ತೀರ್ಪಿನ ಪ್ರತಿ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಪ್ರತಿಕ್ರಿಯೆ ಸರಿ ಇಲ್ಲ. ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕೂಡ ಉತ್ತಮ ಪ್ರತಿಕ್ರಿಯೆ ಕೊಟ್ಟಿಲ್ಲ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಆಗಿದ್ದವರೇ ಲೋಕಾಯುಕ್ತದಿಂದಾಗಿ ಜೈಲಿಗೆ ಹೋಗಿದ್ದರು. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಮನೆಯಲ್ಲಿ ಹಣ ಎಣಿಸುವ ಯಂತ್ರ ಸಿಕ್ಕಿತ್ತು. ಇದೆಲ್ಲದರಿಂದಾಗಿ, ಲೋಕಾಯುಕ್ತ ಮುಚ್ಚುವ ಹುನ್ನಾರ ನಡೆದಿತ್ತು. ಅದಕ್ಕೆ ಪೂರಕವಾಗಿ ಸಿದ್ದರಾಮಯ್ಯ ನಡೆದುಕೊಂಡಿದ್ದರು’ ಎಂದು ಆರೋಪಿಸಿದರು.

‘ರಾಜಕೀಯ ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಾಯುಕ್ತ ಬೇಕು. ರಾಜ್ಯ ಸರ್ಕಾರವು ಯಾವುದೇ ಮುಲಾಜಿಲ್ಲದೆ ಲೋಕಾಯುಕ್ತಕ್ಕೆ ಬಲ ತುಂಬಬೇಕು. ಯಾರೋ ನಾಯಕರ ರಕ್ಷಣೆಗಾಗಿ ಲೋಕಾಯುಕ್ತ ದುರ್ಬಲಗೊಳಿಸಬಾರದು’ ಎಂದರು.

‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಕೂಡ ಹೈಕೋರ್ಟ್‌ ತೀರ್ಪು ಸ್ವಾಗತಿಸಿಲ್ಲ. ಏಕೆಂದರೆ, ಅವರ ಪುತ್ರ ಬಾಲಕೃಷ್ಣ ಕೇಸ್ ಕೂಡ ಲೋಕಾಯುಕ್ತದಲ್ಲಿದೆ. ಭ್ರಷ್ಟಾಚಾರವು, ಎಲ್ಲರ ಮನೆಯ ದೋಸೆಯೂ  ತೂತೇ ಎನ್ನುವ ರೀತಿಯಾಗಿದೆ’ ಎಂದು ವಿಶ್ಲೇಷಿಸಿದರು.

‘ಕಾಂಗ್ರೆಸ್‌ನವರಿಗೆ ಕೆಲಸ ಇಲ್ಲದಿದ್ದರಿಂದಲೇ, ಮುಖ್ಯಮಂತ್ರಿ ಬದಲಾವಣೆ ವಿಚಾರ ಎತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಕೆಳಗಿಳಿಸಲಾಗುತ್ತದೆ ಎಂದು ಕಾಂಗ್ರೆಸ್‌ನವರಿಗೆ ಹೇಳಿದವರಾರು?’ ಎಂದು ಕೇಳಿದರು.

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು