ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರೂ ಸಚಿವರಾಗಿದ್ದರೆ ಸಮ್ಮಿಶ್ರ ಸರ್ಕಾರ ಉಳಿಯುತ್ತಿತ್ತು: ಎಚ್‌. ವಿಶ್ವನಾಥ್‌

ಸಭಾಪತಿ ಬಸವರಾಜ ಹೊರಟ್ಟಿ ಅಭಿನಂದನೆ ವೇಳೆ ಎಚ್‌. ವಿಶ್ವನಾಥ್‌
Last Updated 9 ಫೆಬ್ರುವರಿ 2021, 16:55 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಮತ್ತು ಬಸವರಾಜ ಹೊರಟ್ಟಿ ಇಬ್ಬರೂ ಜೆಡಿಎಸ್‌ ಪಕ್ಷದಲ್ಲಿದ್ದೆವು. ನಾವಿಬ್ಬರೂ ಮಂತ್ರಿಗಳಾಗಿದ್ದರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತಿರಲಿಲ್ಲ’ ಎಂದು ಬಿಜೆಪಿ ಸದಸ್ಯ ಎಚ್‌. ವಿಶ್ವನಾಥ್‌ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಹೇಳಿದರು.

ನೂತನ ಸಭಾಪತಿಯಾಗಿ ಆಯ್ಕೆಯಾದ ಹೊರಟ್ಟಿ ಅವರನ್ನು ಅಭಿನಂದಿಸಿ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದ ಅವರು, ‘ಹೊರಟ್ಟಿ ಎಂಬ ಶಬರಿಯ ಶಾಪವನ್ನು ಬಿಜೆಪಿಯ ರಾಮ ವಿಮೋಚನೆ ಮಾಡಿದ್ದಾನೆ’ ಎಂದರು.

ಕಾಂಗ್ರೆಸ್‌ ಪಕ್ಷ ನಜೀರ್‌ ಅಹ್ಮದ್ ಅವರನ್ನು ಕಣಕ್ಕಿಳಿಸಿತ್ತು. ಇದರಿಂದ ಸೋಲು ಇರುವಲ್ಲಿ ಮುಸ್ಲಿಮರನ್ನು ಅಭ್ಯರ್ಥಿ ಮಾಡಲಾಗುತ್ತದೆ ಎಂಬ ಸಂದೇಶ ಹೋಗಬಾರದು. ಯುವ ಕಾಂಗ್ರೆಸ್‌ ಚುನಾವಣೆಯಲ್ಲಿ ಮುಸ್ಲಿಂ ಯುವಕ ಗೆದ್ದರೂ ಸೋತಿದ್ದಾನೆ ಎಂದು ಹೇಳಿದರು.

ಎಲ್ಲರ ಬೆಂಬಲ ಇತ್ತು: ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ‘ನಮ್ಮ ಪಕ್ಷದಲ್ಲಿ ಯಾವುದೇ ಅವಕಾಶ ಇದ್ದರೂ ಹೊರಟ್ಟಿಯವರಿಗೇ ಸಿಗಲಿ ಎಂಬ ಭಾವನೆ ನಮ್ಮೆಲ್ಲರದ್ದಾಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಎಲ್ಲರೂ ನಮ್ಮ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೆವು. ಸಂದರ್ಭ, ಸಂದಿಗ್ಧತೆಗಳ ಕಾರಣಕ್ಕೇನೋ ಅದು ಸಾಧ್ಯವಾಗಲಿಲ್ಲ’ ಎಂದರು.

‘1980ರಲ್ಲಿ ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ಅದೇ ಶಾಲೆಯಲ್ಲಿ ಹೊರಟ್ಟಿಯವರು ಶಿಕ್ಷಕರಾಗಿದ್ದರು. ಅದೇ ವರ್ಷ ಚುನಾವಣೆಗೆ ಸ್ಪರ್ಧಿಸಿ ವಿಧಾನ ಪರಿಷತ್‌ಗೆ ಆಯ್ಕೆಯಾದರು. ಅಲ್ಲಿ ಗುರುಗಳಾಗಿದ್ದವರು ಇಲ್ಲಿಯೂ ಗುರುಗಳಾಗಿದ್ದಾರೆ. ನನ್ನ ಪಾಲಿಗೆ ಇದು ಹೆಮ್ಮೆಯ ಕ್ಷಣ’ ಎಂದು ಬಿಜೆಪಿಯ ಪ್ರದೀಪ್ ಶೆಟ್ಟರ್‌ ಸಂತಸ ವ್ಯಕ್ತಪಡಿಸಿದರು.

ವಿಭಜನೆಯಿಂದ ಅನುಕೂಲ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ‘ಜನತಾ ಪರಿವಾರವನ್ನು ಒಗ್ಗೂಡಿಸಲು ನಿರಂತರವಾಗಿ ಪ್ರಯತ್ನಿಸಿದವರು ಬಸವರಾಜ ಹೊರಟ್ಟಿ. ಎಷ್ಟು ಮಂದಿ ಪಕ್ಷದಿಂದ ಹೊರ ಹೋದರೂ ಅವರು ಮಾತ್ರ ಅಲ್ಲೇ ಉಳಿದರು. ದೇಶದ ಉದ್ದಗಲಕ್ಕೆ ಜನತಾ ಪರಿವಾರ ವಿಭಜನೆ ಆಗಿದ್ದರಿಂದಲೇ ಬಿಜೆಪಿಗೆ ಅನುಕೂಲ ಆಯಿತು. ಜನತಾ ಪರಿವಾರದ ನಾಯಕರ ಸೇರ್ಪಡೆಯಿಂದ ಬಿಜೆಪಿ ಹೆಮ್ಮರವಾಗಿ ಬೆಳೆಯಿತು. ಹೊರಟ್ಟಿ ಅವರಿಗೂ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದೆವು. ಅವರು ಬರಲೇ ಇಲ್ಲ’ ಎಂದು ಹೇಳಿದರು.

ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಲಕ್ಷ್ಮಣ ಸವದಿ, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಬಿಜೆಪಿಯ ಎಸ್‌.ವಿ. ಸಂಕನೂರ, ಭಾರತಿ ಶೆಟ್ಟಿ, ಪ್ರತಾಪಸಿಂಹ ನಾಯಕ, ತೇಜಸ್ವಿನಿ ಗೌಡ, ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ಎನ್‌. ಅಪ್ಪಾಜಿಗೌಡ, ಎಚ್‌.ಎಂ. ರಮೇಶ್ ಗೌಡ ನೂತನ ಸಭಾಪತಿಯವರನ್ನು ಅಭಿನಂದಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT