ಬುಧವಾರ, ಮಾರ್ಚ್ 3, 2021
19 °C

ಹಂಪನಾ ವಿಚಾರಣೆ: ವ್ಯಾಪಕ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಸಾಹಿತಿ ಹಂ.ಪ. ನಾಗರಾಜಯ್ಯ(ಹಂಪನಾ) ಅವರ ವಿರುದ್ಧ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಿದ ಪೊಲೀಸರ ನಡೆಗೆ ರಾಜ್ಯದಾದ್ಯಂತ  ವ್ಯಾಪಕ ಖಂಡನೆ ವ್ಯಕ್ತವಾಗಿದೆ. ‘ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ ಎಂದು ಹಿರಿಯ ಸಾಹಿತಿಗಳು ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ದೊಡ್ಡ ಮಟ್ಟದ ಚರ್ಚೆಯೇ ಶುರುವಾಗಿದೆ.

ಮಂಡ್ಯದಲ್ಲಿ ಕಳೆದ ಜ.17ರಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದ ಅವರು, ಕೇಂದ್ರ ಸರ್ಕಾರವನ್ನು ದುರ್ಯೋಧನ, ಗೋಮುಖ ವ್ಯಾಘ್ರಕ್ಕೆ ಹೋಲಿಕೆ ಮಾಡಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ಕಾರ್ಯಕರ್ತರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಹಂಪನಾ ಅವರವಿಚಾರಣೆ ನಡೆಸಿದ್ದ ಪೊಲೀಸರು, ಹೇಳಿಕೆ ಪಡೆದು ಕಳುಹಿಸಿದ್ದರು. ಪೊಲೀಸರ ಈ ನಡೆಯ ವಿರುದ್ಧ ಸಾಹಿತ್ಯ ವಲಯದ ಪ್ರಮುಖರು ಸಿಡಿದೆದ್ದಿದ್ದು, ಹಂಪನಾ ಅವರಿಗೆ ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಹೋರಾಟಗಾರರಾದ  ರಾ.ನಂ. ಚಂದ್ರಶೇಖರ, ಕೆ.ಎಸ್. ವಿಮಲಾ, ವ.ಚ. ಚನ್ನೇಗೌಡ,  ಟಿ.ಎ. ನಾರಾಯಣಗೌಡ ಸೇರಿದಂತೆ ಹಲವರು ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ: ‘85 ವರ್ಷದ ಹಂಪನಾ ಅವರನ್ನು ಪೊಲೀಸರು ಮಂಡ್ಯಕ್ಕೆ ಕರೆಸಿಕೊಂಡು ಹೇಳಿಕೆ ಪಡೆದಿರುವುದು ಆಘಾತಕಾರಿ ಬೆಳವಣಿಗೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾವುದೇ ನೇತಾರರು ಹಾಗೂ ಸರ್ಕಾರವನ್ನು ಟೀಕಿಸುವ, ವಿಮರ್ಶಿಸುವ ಸ್ವಾತಂತ್ರ್ಯ ಇರುತ್ತದೆ. ರೈತರು ನಡೆಸುತ್ತಿರುವ ಚಳವಳಿಗೆ ಸ್ಪಂದಿಸಿ, ಕೇಂದ್ರ ಸರ್ಕಾರವನ್ನು ಅವರು ಪ್ರಶ್ನಿಸಿದ್ದಾರೆ. ಅದು ಇಷ್ಟವಾಗದವರು ಪ್ರತ್ಯು‌ತ್ತರ ನೀಡಬಹುದಾಗಿತ್ತು. ಆದರೆ, ಪೊಲೀಸ್ ಠಾಣೆಗೆ ಕರೆಸಿಕೊಳ್ಳುವಂತೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಈ ಅನುಚಿತ ವರ್ತನೆಯನ್ನು ಖಂಡಿಸುತ್ತೇವೆ’ ಎಂದು ನಿವೃತ್ತ ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡ, ಎ.ಜೆ. ಸದಾಶಿವ, ನಾಗಮೋಹನದಾಸ್, ಸಾಹಿತಿಗಳಾದ ಜಿ. ರಾಮಕೃಷ್ಣ, ಕೆ. ಮರುಳ ಸಿದ್ಧಪ್ಪ, ಬರಗೂರು ರಾಮಚಂದ್ರಪ್ಪ, ಸಿದ್ಧನಗೌಡ ಪಾಟೀಲ, ಬಸವರಾಜ ಸಬರದ, ಸುಕನ್ಯಾ ಮಾರುತಿ, ರಘುನಂದನ, ಕೆ. ಶರೀಫಾ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಪ್ರತಿಭಟನಾ ನಿರತ ರೈತರನ್ನು ಮಾತನಾಡಿಸುವ ಕನಿಷ್ಠ ಸೌಜನ್ಯ ತೋರದ ಪ್ರಧಾನಿಗಳ ವಿರುದ್ಧ ಮಾತ
ನಾಡುವುದೇ ಅಪರಾಧವೆಂದಾದರೆ ಪ್ರಜಾಪ್ರಭುತ್ವ ಎಲ್ಲಿದೆ? ಪ್ರಜಾಪ್ರಭುತ್ವದಲ್ಲಿ ವಿರೋಧದ ಧ್ವನಿಯೇ ಇರಕೂಡದೆನ್ನುವ ಈ ಬಗೆಯ ವರ್ತನೆ ಖಂಡನೀಯ’ ಎಂದು ಕವಿ ಎಸ್.ಜಿ. ಸಿದ್ಧರಾಮಯ್ಯ ಹೇಳಿದ್ದಾರೆ.

‘ದಾಖಲೆಗಳಿಲ್ಲದೆ ದೂರು ಕೊಟ್ಟವರ ಮಾತಿಗೆ ನಾಡಿನ ಹಿರಿಯ ಸಾಹಿತಿಯೊಬ್ಬರನ್ನು ಠಾಣೆಗೆ ಕರೆಯಿಸಿ, ಹೇಳಿಕೆ ಪಡೆದ ಪೊಲೀಸರ ಕ್ರಮ ಖಂಡನೀಯ. ಇದು ಪ್ರಜಾಪ್ರಭುತ್ವಕ್ಕೆ ಸಲ್ಲುವ ನಡೆಯಲ್ಲ’ ಎಂದು ಜನವಾದಿ ಮಹಿಳಾ ಸಂಘನೆಯ ಕೆ.ಎಸ್‌. ವಿಮಲಾ ಅವರು ಟೀಕಿಸಿದ್ದಾರೆ.

ಮಾಹಿತಿಯಿಲ್ಲ: ಬಳಿಗಾರ್:

‘ಮಂಡ್ಯದಲ್ಲಿ ಏನು ನಡೆದಿತ್ತು, ಹಂಪನಾ ಅವರನ್ನು ಏಕೆ ಕರೆಸಿದರು ಎಂಬ ಮಾಹಿತಿ ಇಲ್ಲ’ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ಪ್ರತಿಕ್ರಿಯಿಸಿದ್ದಾರೆ.

ಮಂಡ್ಯದಲ್ಲಿ ನಡೆದ ಘಟನೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗ, ‘ಹಂಪನಾ ಅವರನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಲಾಗಿದೆ ಎಂಬ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ. ಪೂರ್ಣ  ಮಾಹಿತಿಯಿಲ್ಲ. ಹಾಗಾಗಿ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅಗತ್ಯ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯಿಸುತ್ತೇನೆ’ ಎಂದರು.

‘ದುರ್ಯೋಧನ ಸರ್ಕಾರ’:

ಹಂಪನಾ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ ಪೊಲೀಸರ ಕೃತ್ಯ ಖಂಡನೀಯ ಎಂದಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಈ ಮೂಲಕ ಬಿಜೆಪಿ ಸರ್ಕಾರ ತಮ್ಮದು ದುರ್ಯೋಧನ ಸರ್ಕಾರ ಎಂದು ಸಾಬೀತುಪಡಿಸಿದೆ ಎಂದು ಕುಟುಕಿದ್ದಾರೆ.

‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊರಟಿರುವ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರದ ಗೋಮುಖವ್ಯಾಘ್ರ ನೀತಿ ಬಯಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಸಾಹಿತ್ಯ ಲೋಕಕ್ಕೆ ಅಪಮಾನ’:

'ತನ್ನ ವಿರುದ್ಧ ಧ್ವನಿ ಎತ್ತಿದವರನ್ನು ಜೈಲಿಗೆ ಕಳುಹಿಸಿ ಬೆದರಿಸುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಹಂಪನಾ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಮಾಡಿದ ಅಪಮಾನ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಹಂಪನಾ ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಸಾಹಿತ್ಯ ಲೋಕಕ್ಕೆ ಹೆಸರು ತಂದವರು. ಕೇಂದ್ರ ಸರ್ಕಾರ ಧರ್ಮರಾಯನಂತೆ ಬಂದು ದುರ್ಯೋಧನಂತೆ ವರ್ತಿಸುತ್ತಿದೆ ಎಂದು ಅವರು ಹೇಳಿದ್ದಕ್ಕೆ ಅವರನ್ನು ಪೊಲೀಸ್ ಠಾಣೆಗೆ ಕಳುಹಿಸಿ ವಿಚಾರಣೆ ನಡೆಸುವುದು ಎಂದರೆ ಏನಿದು? ಕನ್ನಡ ಸಾಹಿತ್ಯ ಪರಿಷತ್ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.

ಹಂಪನಾ ವಿಚಾರಣೆ: ಎಸ್ಪಿ ವಿಷಾದ:

(ಮಂಡ್)ಯ: ಸಾಹಿತಿ ಹಂ.ಪ.ನಾಗರಾಜಯ್ಯ  ಅವರನ್ನು ಪೊಲೀಸ್‌ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಶುಕ್ರವಾರ ವಿಷಾದ ವ್ಯಕ್ತಪಡಿಸಿದ್ದಾರೆ.

‘ಹಂ.ಪ.ನಾಗರಾಜಯ್ಯ ಅವರು ಖ್ಯಾತ ಸಾಹಿತಿ ಹಾಗೂ ಹಿರಿಯ ನಾಗರಿಕರು. ಅವರು ಪೊಲೀಸ್‌ ಠಾಣೆಗೆ ಬಂದು ಹೇಳಿಕೆ ನೀಡುವ ಸನ್ನಿವೇಶ ಉದ್ಬವಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸಲಾಗಿದೆ. ಘಟನೆ ಕುರಿತು ವಿಚಾರಣೆ ನಡೆಸಿ, ವರದಿಸಲ್ಲಿಸಲು ಡಿವೈಎಸ್‌ಪಿಗೆ ಸೂಚಿಸಲಾಗಿದೆ. ವರದಿ ಆಧರಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪೊಲೀಸ್‌ ಠಾಣೆಗೆ ತೆರಳಿ ನಾನು ಯಾವುದೇ ಪತ್ರ ಬರೆದುಕೊಟ್ಟಿಲ್ಲ.  ಕ್ಷಮೆ ಕೇಳಿಲ್ಲ, ವಿಷಾದ ವ್ಯಕ್ತಪಡಿಸಿಲ್ಲ. ಪ್ರಧಾನಮಂತ್ರಿ ಬಗ್ಗೆ ನನಗೆ ಗೌರವವಿದೆ. ಭಾಷಣದಲ್ಲಿ ರೈತರ ಹೋರಾಟವನ್ನು ವಿಶ್ಲೇಷಣೆ ಮಾಡಿದ್ದೇನೆ ಎಂದಷ್ಟೇ ಪೊಲೀಸರಿಗೆ ತಿಳಿಸಿದ್ದೇನೆ’ ಎಂದು ಹಂ.ಪ.ನಾಗರಾಜಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು