ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲವೂ ಸುಖಾಂತ್ಯ: ಮಾತುಕತೆ ಬಳಿಕ ಬೊಮ್ಮಾಯಿ ಹೇಳಿಕೆ

ದೆಹಲಿ ಅಂಗಳಕ್ಕೆ ಆನಂದ್‌ ಬೇಡಿಕೆ
Last Updated 11 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಖಾತೆ ಬದಲಾವಣೆಗಾಗಿ ಪಟ್ಟು ಹಿಡಿದು ರಾಜೀನಾಮೆಯ ‘ಗುಮ್ಮ’ ಮುಂದಿಟ್ಟಿದ್ದ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು, ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಖಾತೆ ಬದಲಿಸುವ ವಿಚಾರದಲ್ಲಿ ಅಂತಿಮ ತೀರ್ಮಾನವನ್ನು ವರಿಷ್ಠರೇ ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ದೆಹಲಿಯಲ್ಲಿ ವರಿಷ್ಠರನ್ನು ಕಾಣುವುದೇ ಸೂಕ್ತ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು. ಆಗಸ್ಟ್ 15ರ ಬಳಿಕ, ಆನಂದ್‌ ದೆಹಲಿಗೆ ಹೋಗಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಚಿವ ಸ್ಥಾನ ಸಿಗದೇ ಕುಪಿತಗೊಂಡಿರುವ ಶಾಸಕರಾದ ರಮೇಶ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಎಂ.ಪಿ.ರೇಣುಕಾಚಾರ್ಯ ಅವರೂ ದೆಹಲಿಗೆ ಹೋಗುವ ಸಿದ್ಧತೆ ನಡೆಸಿದ್ದಾರೆ. ಸಚಿವ ಸ್ಥಾನ ಹಾಗೂ ಖಾತೆ ಬದಲಾವಣೆಗಾಗಿ ಬೇಡಿಕೆಯನ್ನು ವರಿಷ್ಠರೇ ನಿಭಾಯಿಸಬೇಕಾದ ಸನ್ನಿವೇಶ ಸದ್ಯಕ್ಕೆ ನಿರ್ಮಾಣವಾಗಿದೆ.

ಪಟ್ಟು ಸಡಿಲಿಸಿದ ಸಿಂಗ್‌:

ಅಪಾರ್ಟ್‌ಮೆಂಟ್ ಸಮುಚ್ಛಯವೊಂದರ ಫ್ಲ್ಯಾಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಲು ಬುಧವಾರ ರಾತ್ರಿ ಖುದ್ದು ಅಲ್ಲಿಗೆ ಹೋದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಎರಡು ತಾಸು ಮಾತುಕತೆ ನಡೆಸಿದರು. ಈ ವೇಳೆ ಕಂದಾಯ ಸಚಿವ ಆರ್. ಅಶೋಕ, ಶಾಸಕ ರಾಜೂಗೌಡ ಕೂಡ ಇದ್ದರು.

‘ವರಿಷ್ಠರ ಸೂಚನೆ ಮೇರೆಗೆ ಖಾತೆ ಹಂಚಿಕೆ ಮಾಡಲಾಗಿದೆ. ಈ ಹಂತದಲ್ಲಿ ಖಾತೆ ಬದಲಾವಣೆ ಮಾಡಲಾಗದು. ನಿಮ್ಮ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ದೆಹಲಿಗೆ ಹೋದಾಗ ವರಿಷ್ಠರ ಮುಂದೆ ಮಂಡಿಸುವೆ. ಅಲ್ಲಿವರೆಗೆ ಕಾಯಿರಿ. ಈ ರೀತಿಯ ಗೊಂದಲಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲಿದ್ದು, ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಮರೆ ಮಾಚಲಿವೆ. ಮುಂದೆ ಒಳ್ಳೆಯ ಅವಕಾಶಗಳು ಬರಲಿವೆ’ ಎಂದು ಹೇಳಿದ ಬೊಮ್ಮಾಯಿ, ಸಿಂಗ್ ಮನವೊಲಿಸುವ ಯತ್ನ ಮಾಡಿದರು ಎಂದು ಗೊತ್ತಾಗಿದೆ.

ಮಾತುಕತೆ ನಂತರ ಆನಂದ ಸಿಂಗ್ ತಮ್ಮ ಪಟ್ಟು ಸಡಿಲಿಸಿದರು.

ಬಳಿಕ, ಬೊಮ್ಮಾಯಿ ಜತೆಗೆ ಸುದ್ದಿಗಾರರ ಜತೆಗೆ ಮಾತನಾಡಿದ ಸಿಂಗ್‌, ‘ರಾಜೀನಾಮೆ ಕೊಡುವುದಾಗಿ ಎಲ್ಲಿಯೂ ಹೇಳಿಲ್ಲ. ಖಾತೆ ಬದಲಾವಣೆಗಾಗಿ ಬೇಡಿಕೆ ಮಂಡಿಸಿರುವುದು ಹೌದು. ವರಿಷ್ಠರ ಜತೆ ಮಾತನಾಡಿ, ಆದ್ಯತೆ ಮೇರೆಗೆ ಪರಿಹಾರ ಕಲ್ಪಿಸುವುದಾಗಿ ಮುಖ್ಯಮಂತ್ರಿ ಭರವಸೆ ಕೊಟ್ಟಿದ್ದಾರೆ. ಸರ್ಕಾರಕ್ಕೆ ನಮ್ಮ ಸಹಕಾರ ಮುಂದುವರಿಯಲಿದೆ’ ಎಂದರು.

‘ನಾನೂ ದೊಡ್ಡ ಖಾತೆಗಳನ್ನು ನಿಭಾಯಿಸಬಲ್ಲೆ, ಅವಕಾಶ ನೀಡಿ ಎಂಬುದಾಗಿ ಸಿಂಗ್‌ ಹೇಳಿದರು. ಅವರ ಎಲ್ಲ ಬೇಡಿಕೆ ಮತ್ತು ಭಾವನೆಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸಲಾಗುವುದು. ಅಂತಿಮವಾಗಿ ವರಿಷ್ಠರು ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ಬದ್ಧರಾಗಲು ಅವರು ಒಪ್ಪಿದ್ದಾರೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ಈ ಹಿಂದೆಯೂ ಕ್ಲಿಷ್ಟ ಪರಿಸ್ಥಿತಿಯಲ್ಲಿ ಆನಂದ್ ಸಿಂಗ್‌ ಮತ್ತು ನಾವು ಒಂದಾಗಿ ಹೋಗಿದ್ದೆವು. ಈಗಲೂ ಒಂದಾಗಿ ಹೋಗಲು ತೀರ್ಮಾನಿಸಿದ್ದೇವೆ’ ಎಂದರು.

ಆರ್‌.ಅಶೋಕ ಮಾತನಾಡಿ, ‘ಆನಂದ್‌ ಸಿಂಗ್‌ ರಾಜೀನಾಮೆ ಕೊಡುವುದಿಲ್ಲ. ಪಕ್ಷದ ಪರವಾಗಿ ಇರ್ತಾರೆ ಮತ್ತು ಕೆಲಸ ಮಾಡುತ್ತಾರೆ. ಅವರು ತಮ್ಮ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದರು’ ಎಂದು ಹೇಳಿದರು.

ಮನವೊಲಿಸಿದ ಯಡಿಯೂರಪ್ಪ:

ಬೊಮ್ಮಾಯಿ ಅವರನ್ನು ಭೇಟಿ ಮಾಡುವುದಕ್ಕೆ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಶಾಸಕ ರಾಜೂಗೌಡ ಅವರ ಜತೆ ಸಿಂಗ್‌ ಭೇಟಿ ಮಾಡಿದರು.

‘ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಖಾತೆಗಳ ಹಂಚಿಕೆ ತೀರ್ಮಾನ ಮಾಡಿದ್ದು ವರಿಷ್ಠರು. ಸದ್ಯಕ್ಕೆ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಮುಂದೆ ಉತ್ತಮ ಭವಿಷ್ಯ ಇರುವುದರಿಂದ ಈಗ ಕೊಟ್ಟಿರುವ ಖಾತೆಯಲ್ಲೇ ಮುಂದುವರಿಯುವುದು ಸೂಕ್ತ’ ಎಂದು ಯಡಿಯೂರಪ್ಪ ಸಲಹೆ ನೀಡಿದರು.

‘ವಿಜಯನಗರ ಜಿಲ್ಲೆ ರಚನೆ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಈಡೇರಿಸಿದಿರಿ. ಎರಡೆರಡು ಬಾರಿ ಮಂತ್ರಿ ಮಾಡಿದಿರಿ. ಆದರೆ ನಿಮ್ಮ ಅವಧಿಯಲ್ಲೇ ಹೇಳದೇ ಮಾಡದೇ ಕೊಟ್ಟ ಖಾತೆ ಬದಲಿಸಲಾಯಿತು. ಈಗಲೂ ಅದೇ ರೀತಿ ಆಗಿದೆ. ನನಗೂ ಉತ್ತಮ ಖಾತೆ ನಿರ್ವಹಿಸುವ ಶಕ್ತಿ ಇದೆ’ ಎಂದು ಆನಂದ್ ಸಿಂಗ್‌, ಯಡಿಯೂರಪ್ಪ ಅವರಿಗೆ ಹೇಳಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT