ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆ ಮನೆಗೆ ರಾಷ್ಟ್ರಧ್ವಜ’ಕ್ಕೆ ಚಾಲನೆ

Last Updated 13 ಆಗಸ್ಟ್ 2022, 22:30 IST
ಅಕ್ಷರ ಗಾತ್ರ

ಬೆಂಗಳೂರು: ‘75 ವರ್ಷ ಆತ್ಮಾವಲೋಕನ ಮತ್ತು ಸಿಂಹಾವಲೋಕನದ ಮಹತ್ವದ ಘಟ್ಟ. ಮುಂದಿನ 25 ವರ್ಷದ ಅಮೃತಕಾಲದಲ್ಲಿ ವಿಶ್ವದಲ್ಲಿ ಭಾರತವನ್ನು ಶ್ರೇಷ್ಠವಾಗಿಸುವ ಜವಾಬ್ದಾರಿ ಯುವಜನರ ಮೇಲಿದೆ. ಇದು ನಮ್ಮ ಬದ್ಧತೆ ಮತ್ತು ಸಂಕಲ್ಪ. ಯುವಕರು ಸಮಬಾಳಿನ, ಸಮಪಾಲಿನ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯದಾದ್ಯಂತ ಆಯೋಜಿಸಿರುವ ‘ಮನೆ ಮನೆಗಳಲ್ಲಿ ರಾಷ್ಟ್ರಧ್ವಜ’ ಅಭಿಯಾನಕ್ಕೆ ವಿಧಾನಸೌಧದ ಎದುರು ಶನಿವಾರ ಚಾಲನೆ ನೀಡಿದ ಅವರು, ‘‌ರಾಜ್ಯದಲ್ಲಿ ಸರ್ಕಾರದ ವತಿಯಿಂದ 1.08 ಕೋಟಿ ಧ್ವಜಗಳನ್ನು ನೀಡಿದ್ದೇವೆ. ಜನರೂ ಸ್ವಪ್ರೇರಣೆಯಿಂದ ಧ್ವಜ ಖರೀದಿಸಿದ್ದಾರೆ. 25 ಲಕ್ಷ ಮನೆಗಳ ಮೇಲೆ ಧ್ವಜ ಹಾರಾಡುತ್ತಿದೆ’ ಎಂದರು.

‘ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗಬೇಕು. ದೇಶ ಮೊದಲು, ದೇಶದ ನಂತರ ನಾವೆಲ್ಲರೂ ಎಂಬುದನ್ನು ಪ್ರತಿಪಾದಿಸಬೇಕು. ಸಂಕುಚಿತ, ಸ್ವಾರ್ಥ ಮನೋಭಾವನೆ ತೊರೆದು, ದೇಶಕ್ಕಾಗಿ ನಿಲ್ಲುವ ಕರ್ತವ್ಯ ನಮ್ಮೆಲ್ಲರದ್ದು ಆಗಬೇಕು’ ಎಂದರು.

‘ಮುಂದಿನ 25 ವರ್ಷ ದೇಶಕ್ಕಾಗಿ ನಾನೇನು ಮಾಡಿದ್ದೇನೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕು. ಯುವಜನರೆಂದರೆ ಶಕ್ತಿ ಮತ್ತು ಭವಿಷ್ಯ. ನವ‌ಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಬೇಕಿದೆ. ಯುವಜನರು ಭಾರತದ ಭವಿಷ್ಯ ನಿರ್ಮಿಸುವ ಭಾಗ್ಯಶಾಲಿಗಳು. ವ್ಯಕ್ತಿಗಾದರೆ 75 ವರ್ಷ ದೊಡ್ಡ ವಯಸ್ಸು. ದೇಶಕ್ಕಾದರೆ ನವತರುಣನ ವಯಸ್ಸು. ಯುವಜನರೇ ಇರುವ ಭವ್ಯ ಭವಿಷ್ಯವಿರುವ ದೇಶ ನಮ್ಮದು. ಪ್ರಧಾನಿ ನರೇಂದ್ರ ಮೋದಿ ಅವರು ಸಶಕ್ತ, ಸಂಪದ್ಭರಿತ ಭಾರತ ಕಟ್ಟಲು ಶ್ರಮಿಸುತ್ತಿದ್ದಾರೆ’ ಎಂದು ಬಣ್ಣಿಸಿದರು.

ರಾಷ್ಟ್ರಧ್ವಜವನ್ನು ಹಿಡಿದಿದ್ದ ಸಾವಿರಾರು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT