ಮಂಗಳೂರು: ‘ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಆರ್ಗನೈಸರ್ ಮತ್ತು ಪಾಂಚಜನ್ಯ ಪತ್ರಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ಮಹಾತ್ಮ ಗಾಂಧಿ ಅವರನ್ನು ಹೊಗಳಿದ್ದಾರೆ. ಈ ಬಗ್ಗೆ ಅವರು ಪ್ರಾಮಾಣಿಕರಾಗಿದ್ದ ಗಾಂಧೀಜಿ ಕುರಿತ ಅಪಪ್ರಚಾರ ನಿಲ್ಲಿಸಲು ಸ್ವಯಂಸೇವಕರಿಗೆ ಹೇಳಲಿ’ ಎಂದು ಚಿಂತಕ ಸುಧೀಂದ್ರ ಕುಲಕರ್ಣಿ ಸವಾಲು ಹಾಕಿದರು.
ಗಾಂಧೀಜಿಯವರ ಅಪಪ್ರಚಾರಕ್ಕೆ ಉತ್ತರ ರೂಪದಲ್ಲಿ ಲೇಖಕ ಎಂ.ಜಿ. ಹೆಗಡೆ ರಚಿಸಿರುವ ‘ಮಿನುಗು ನೋಟ’ ಕೃತಿಯನ್ನು ಗಾಂಧಿ ವಿಚಾರ ವೇದಿಕೆ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ನಿಮ್ಮ ಸರಸಂಘ ಚಾಲಕರು ಗಾಂಧೀಜಿಯನ್ನು ಹೊಗಳುತ್ತಾರೆ. ನೀವು ನೋಡಿದರೆ, ಗಾಂಧೀಜಿ ಕುರಿತು ಅಪಪ್ರಚಾರ ನಡೆಸುತ್ತಿದ್ದೀರಿ. ನಿಮ್ಮ ನಿಲುವು ಏನು. ಪ್ರಾಮಾಣಿಕ ನಂಬಿಕೆ ಏನು ಎಂದು ಆರ್‌ಎಸ್‌ಎಸ್‌ನವರನ್ನು ಗಾಂಧಿ ವಿಚಾರವಾದಿಗಳು ಪ್ರಶ್ನೆ ಮಾಡಬೇಕು’ ಎಂದರು.
ಹಿಂದೂ ವಿರೋಧಿಯಲ್ಲದ ಜಾತ್ಯತೀತತೆ ಮತ್ತು ಮುಸ್ಲಿಂ ವಿರೋಧಿ ಅಲ್ಲದ ಹಿಂದುತ್ವದ ಅಗತ್ಯವಿದೆ. ಕೇವಲ ಹಿಂದೂ ಧರ್ಮದ ಧರ್ಮಾಂಧತೆ ಬಗ್ಗೆ ಮಾತನಾಡಿ, ಮುಸ್ಲಿಂ ಧರ್ಮದ ಧರ್ಮಾಂಧತೆ ಕುರಿತ ಮೌನ ಸರಿಯಲ್ಲ. ಮುಸ್ಲಿಮರೂ ತಮ್ಮ ಧರ್ಮದ ಅಸಹಿಷ್ಣುತೆ, ಉಗ್ರವಾದದ ಬಗ್ಗೆ ಹೋರಾಡಬೇಕು’ ಎಂದರು.
‘ಗಾಂಧೀಜಿ ವಿರುದ್ಧ ದುರುದ್ದೇಶಪೂರ್ವಕವಾಗಿ ವಿಷ ಕಾರುವುದಕ್ಕೆ ಉತ್ತರಿಸದಿದ್ದರೆ ಅವರ ವಿಚಾರದ ಕುರಿತ ನಮ್ಮ ಬದ್ಧತೆಯೇ ಪ್ರಶ್ನಾರ್ಹವಾಗುತ್ತದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.