ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರೀಯ ಭಾಷೆ; ಸಂಪೂರ್ಣ ಅನುದಾನ ನೀಡಲಾಗುವುದು: ಬಸವರಾಜ ಬೊಮ್ಮಾಯಿ

ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದಲ್ಲಿ ದೊಡ್ಡರಂಗೇಗೌಡ ನೇತೃತ್ವದಲ್ಲಿಯೇ ಸಾಹಿತಿಗಳ ಸಮಿತಿ ರಚನೆ
Last Updated 8 ಜನವರಿ 2023, 20:05 IST
ಅಕ್ಷರ ಗಾತ್ರ

ಕನಕ–ಶರೀಫ–ಸರ್ವಜ್ಞ ವೇದಿಕೆ (ಹಾವೇರಿ): ‘ಸಮ್ಮೇಳನಾಧ್ಯಕ್ಷರ ಅಸಮಾಧಾನ ಅರ್ಥ ಆಗಿದೆ. ಅವರ ಅಪೇಕ್ಷೆಯಂತೆ ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನ ಕೇಂದ್ರಕ್ಕೆ ಮತ್ತು ಸಂಶೋಧನೆಗೆ ಅಗತ್ಯ ಇರುವ ಸಂಪೂರ್ಣ ಅನುದಾನವನ್ನು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಹಾವೇರಿಯಲ್ಲಿ ಜರುಗಿದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಸಮ್ಮೇಳನಾಧ್ಯಕ್ಷರಾದ ದೊಡ್ಡರಂಗೇಗೌಡ ಅವರಿಗೆ ನಮ್ಮ ಮೇಲೆ ಅತಿಯಾದ ಪ್ರೀತಿ ಇರುವುದರಿಂದಲೇ ಕಟುವಾದ ಮಾತುಗಳಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈಗ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದಲ್ಲಿ ಅವರ ನೇತೃತ್ವದಲ್ಲಿಯೇ ಸಾಹಿತಿಗಳ ಸಮಿತಿ ರಚಿಸಲಾಗುವುದು. ಸಮಿತಿಯ ಮಾರ್ಗದರ್ಶನದಲ್ಲಿಯೇ ಸಂಶೋಧನೆಗಳಾಗಲಿ. ವಿಶ್ವವಿದ್ಯಾಲಯಗಳಲ್ಲಿ ಆಗುವಂಥ ಕಾಟಾಚಾರದ ಸಂಶೋಧನೆಗಳು ಇಲ್ಲಿ ಆಗಬಾರದು’ ಎಂದೂ ಸೂಚಿಸಿದರು.

‘ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ನಿರ್ಮಿಸಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾಗ ನೀಡಲಾಗಿದೆ. ಅದರ ನವೀಕರಣಕ್ಕೆ ಅನುದಾನವನ್ನೂ ನೀಡಲಾಗಿದೆ’ ಎಂದರು.

‘ರಾಜ್ಯದಲ್ಲಿರುವ ಅನ್ಯಭಾಷೆಯ ವಲಸಿಗರಿಗೆ ಕನ್ನಡ ಕಲಿಸುವ ಅಭಿಯಾನ ಆರಂಭಿಸಲಾಗುವುದು. ₹100 ಕೋಟಿ ಅನುದಾನದಲ್ಲಿ ಗಡಿನಾಡ ಕನ್ನಡ ಹೋರಾಟಗಾರರಿಗೆ ಪಿಂಚಣಿ, ಗಡಿನಾಡ ಶಾಲೆ, ಶಿಕ್ಷಣ, ಆರೋಗ್ಯ ಹಾಗೂ ಸಾಂಸ್ಕೃತಿಕ ಸಬಲೀಕರಣಕ್ಕೆ ಒತ್ತು ನೀಡಲಾಗುವುದು’ ಎಂದು ವಿವರಿಸಿದರು.

ಉ.ಕ ಭಾಷಾ ಅಧ್ಯಯನ ಸಂಸ್ಥೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನ ನಿರ್ಮಿಸಲು ₹3ಕೋಟಿ ಅನುದಾನ ನೀಡಲಾಗುವುದು. ಅಲ್ಲಿ ಜನಪದ ವಿಶ್ವವಿದ್ಯಾಲಯದ ಜೊತೆಗೂಡಿ, ಒಂದು ಸಂಶೋಧನಾ ಕೇಂದ್ರವನ್ನು ಆರಂಭಿಸಿ, ಉತ್ತರ ಕರ್ನಾಟಕದ ವೈವಿಧ್ಯಮಯ ಭಾಷಾ ಪರಂಪರೆಯ ಕುರಿತು ಸಂಶೋಧನೆಗಳಾಗಬೇಕು. ಈ ಸಮ್ಮೇಳನದ ಸ್ಮರಣೆಗಾಗಿ ಈ ಕೊಡುಗೆ ನೀಡಲಾಗಿದೆ’ ಎಂದು ನುಡಿದರು.

‘ರಾಜ್ಯದಲ್ಲಿ ರಾಷ್ಟ್ರೀಯ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗುವುದು. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್‌ ಹೆಚ್ಚಿಸಲು ಅನುಮತಿ ದೊರೆಯಲಿದೆ. ಮಹದಾಯಿಯನ್ನು ಮಲಪ್ರಭೆಗೆ ಜೋಡಿಸುವ ಯೋಜನೆಯೂ
ಕಾರ್ಯಗತಗೊಳ್ಳಲಿದೆ’ ಎಂದರು.

‘ಬಹಿರಂಗ ಸಮಾವೇಶದಲ್ಲಿ ಮಂಡಿಸಲಾದ ನಿರ್ಣಯಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ’ ಎಂದೂ ಭರವಸೆಯನ್ನು ನೀಡಿದರು.

‘ಜಾತಿ-ಧರ್ಮಗಳ ಸಮ್ಮೇಳನವಲ್ಲ’
ಕನಕ–ಶರೀಫ–ಸರ್ವಜ್ಞ ವೇದಿಕೆ (ಹಾವೇರಿ):
‘ಇದು ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡಿಗರ ಸಮ್ಮೇಳನ, ಜಾತಿ ಧರ್ಮಗಳನ್ನು ಹಿಡಿದೆಣಿಸುತ್ತ ಅಪಸ್ವರ ತೆಗೆಯುವುದು ಸಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮಹೇಶ ಜೋಶಿ ಪ್ರಧಾನ ವೇದಿಕೆಯಲ್ಲಿ ಸ್ಪಷ್ಟಪಡಿಸಿದರು.

ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಸಮ್ಮೇಳನದಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಕಡಿಮೆ ಇದೆ ಎಂಬ ಆರೋಪದಲ್ಲಿ ಹುರುಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಜೋಶಿ ಅವರು ಪ್ರತಿಕ್ರಿಯಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದರೂ ಭಾಷಣಗಳ ನಡುವೆಯೇ ಬಂದು ಜೋಶಿ ಅವರು ಸ್ಪಷ್ಟನೆ ನೀಡಲು ಆರಂಭಿಸಿದರು. ‘ಕೆಲವರು ಎತ್ತಿರುವ ಅಪಸ್ವರಕ್ಕೆ ಪದೇಪದೇ ಸ್ಪಷ್ಟನೆ ನೀಡಬೇಕಾಗಿದೆ. ಸಮ್ಮೇಳನದಲ್ಲಿ ಹನ್ನೊಂದು ಜನ ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ, ಇಬ್ಬರನ್ನು ಸನ್ಮಾನಿಸಲಾಗಿದೆ ಎಂದು ವಿವರಿಸುತ್ತಲೇ, ತಪ್ಪು ಮಾಡುವುದು ಸಹಜ, ತಿದ್ದಿ ನಡೆಯೋನೆ ಮನುಜ, ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗೋಣ’ ಎಂದರು.

‘ಕರುಣಾನಿಧಿಯಂಥ ಸಿ.ಎಂ ಬೇಕು’
ಹಾವೇರಿ:
‘ಗಡಿನಾಡು ಮತ್ತು ಹೊರನಾಡು ಕನ್ನಡಿಗರ ತಳಮಳಗಳು’ ಗೋಷ್ಠಿಯಲ್ಲಿ ‘ಗಡಿಯಲ್ಲಿ ಭಾಷಾ ಸೌಹಾರ್ದ ಸಾಧ್ಯತೆ’ ವಿಷಯ ಮಂಡಿಸಿದ ಸಾಹಿತಿ ಸ. ರಘುನಾಥ್‌ ಅವರು, ‘ತಮಿಳುನಾಡಿನ ಕರುಣಾನಿಧಿಯಂಥ ಮುಖ್ಯಮಂತ್ರಿ ಕರ್ನಾಟಕಕ್ಕೆ ಸಿಗುವವರೆಗೂ ಗಡಿ, ಭಾಷೆ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದರು.

‘ಯಾವುದಕ್ಕೂ ಅಂಜುವುದಿಲ್ಲ, ಬೆದರುವುದಿಲ್ಲ ಎನ್ನುವ ಮುಖ್ಯಮಂತ್ರಿ ಬೇಕಾಗಿದೆ. ಕೋಲಾರ ಜಿಲ್ಲೆಯ ಗಡಿ ಭಾಗದ ಕನ್ನಡಿಗರು ಮತ್ತು ತೆಲುಗರು ಸೌಹಾರ್ದದಿಂದ ಬದುಕಿ, ಮದುವೆಗಳಿಂದ ಬಾಂಧವ್ಯ ಗಟ್ಟಿಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಅವರಿಗೆ ಭಾಷಾ ಬಾಗಿನ ನೀಡಿ ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.

*
ಕಸಾಪ ಸಮಿತಿ ರಚಿಸಿ, ಸಮ್ಮೇಳನದಲ್ಲಿ ಚರ್ಚಿಸಲಾದ ವಿಷಯಗಳಿಗೆ ಸಂಬಂಧಿಸಿದಂತೆ ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಕ್ರಮಗಳೇನು ಎಂಬುದನ್ನು ಮುಂದಿನ ಸಮ್ಮೇಳನದಲ್ಲಿ ಸಾರ್ವಜನಿಕರ ಮುಂದಿಡಬೇಕು.
-ಡಾ.ಬಿ.ಎ. ವಿವೇಕ ರೈ, ವಿಶ್ರಾಂತ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT