ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಟಿ.ರವಿಗೆ ಅಧಿಕಾರದ ಮದ: ಎಚ್‌ಡಿಕೆ

Last Updated 1 ಸೆಪ್ಟೆಂಬರ್ 2020, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಅಧಿಕಾರದ ಮದದಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ಎಚ್.ಡಿ. ಕುಮಾರಸ್ವಾಮಿ ಕುಟುಕಿದ್ದಾರೆ.

‘ಡ್ರಗ್ಸ್‌ ಮಾಫಿಯಾ ನನ್ನ ಸರ್ಕಾರ ಬೀಳಿಸಿತ್ತು’ ಎಂಬ ಕುಮಾರಸ್ವಾಮಿ ಹೇಳಿಕೆಯನ್ನು ರವಿ ಟೀಕಿಸಿದ್ದರು.

ಇದಕ್ಕೆ ಸರಣಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ, ಮೀಟರ್ ಬಡ್ಡಿ ಹತ್ತಿಕ್ಕಲು ವಿಶೇಷ ತಂಡ ರಚಿಸಿದ್ದೆ. ಇದರಿಂದ ಕನಲಿ ಹೋಗಿದ್ದ ದಂಧೆಕೋರರು ಶ್ರೀಲಂಕಾ ಹಾಗೂ ಮುಂಬೈಗೆ ಹಾರಿ ಹೋಗಿದ್ದರು. ಆ ಮಾಫಿಯಾ ಬಳಸಿಕೊಂಡೇ ನಮ್ಮ ಸರ್ಕಾರದಲ್ಲಿದ್ದ ಶಾಸಕರನ್ನು ಬಿಜೆಪಿಯವರು ಬುಕ್ ಮಾಡಿಕೊಂಡಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲ ಶಾಸಕರನ್ನು ಎರಡು ಗಂಟೆಗೊಂದು ವಿಶೇಷ ವಿಮಾನದ ಮೂಲಕ ಮುಂಬೈಗೆ ಕರೆದುಕೊಂಡು ಹೋಗುವಾಗ ಅವರೇ ಕಂಪನಿ ಕೊಟ್ಟಿದ್ದರು’ ಎಂದು ಹೇಳಿದ್ದಾರೆ.

‘ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸಮಚಿತ್ತದಲ್ಲಿ ಇರುತ್ತೇನೆ. ರವಿ ಅವರು ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಬಗ್ಗೆ ಮಾತನಾಡಿದರೆ ನಾನು ಸುಮ್ಮನಿರಲ್ಲ. ಅಧಿಕಾರದಲ್ಲಿ ಇರುವ ಸಚಿವರು ಮಾತಿನಲ್ಲಿ ನಿಗಾ ಇಡುವುದು ಒಳಿತು’ ಎಂದು ಅವರು ಎಚ್ಚರಿಸಿದ್ದಾರೆ.

‘ಡ್ರಗ್ ಮಾಫಿಯಾದ ಪಾಪದ ಹಣವನ್ನು ಚೆಲ್ಲಿ, ಶಾಸಕರನ್ನು ಖರೀದಿಸಿ ಸರ್ಕಾರ ಉಳಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಅಂತಹ ಕುಕೃತ್ಯಕ್ಕೆ ಇಳಿಯುವ ಜಾಯಮಾನ ನನ್ನದಾಗಿದ್ದರೆ ನನ್ನ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ನಿಮ್ಮ ಸರ್ಕಾರ ಅಷ್ಟು ದುರ್ಬಲವಾಗಿತ್ತೆ: ರವಿ

‘ನೀವೇ ಮುಖ್ಯಮಂತ್ರಿಯ ಸ್ಥಾನದಲ್ಲಿ ಕುಳಿತಿದ್ದಾಗ, ಡ್ರಗ್ ಮಾಫಿಯಾ ನಿಮ್ಮ ಸರ್ಕಾರ ಬೀಳಿಸುವಷ್ಟು ಪ್ರಬಲವಾಗಿತ್ತೆ?ಒಂದು ಮಾಫಿಯಾವನ್ನು ಬಗ್ಗುಬಡಿಯಲಾಗದಷ್ಟು ನಿಮ್ಮ ಸರ್ಕಾರ ದುರ್ಬಲವಾಗಿತ್ತೆ ಕುಮಾರಸ್ವಾಮಿಯವರೆ?’ ಎಂದು ಸಿ.ಟಿ. ರವಿ ಅವರು ಕೆಣಕಿದ್ದಾರೆ.

‘ನನ್ನ ಸರ್ಕಾರವನ್ನು ಕಾಂಗ್ರೆಸ್‌ ಬೀಳಿಸಿತು ಎಂದು ಹಿಂದೆ ಹೇಳಿದ್ದ ನೀವು, ಈಗ ಡ್ರಗ್ ಮಾಫಿಯಾ ಸರ್ಕಾರವನ್ನು ಬೀಳಿಸಿತು ಎಂದು ಹೇಳುತ್ತೀರಿ.ಯಾವುದು ಸತ್ಯ- ಯಾವುದು ಮಿಥ್ಯ? ಭಗವಂತನೇ ಬಲ್ಲ ಈ ನಾಲಿಗೆಯ ಪರಿಯ’ ಎಂದು ರವಿ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT