ಶುಕ್ರವಾರ, ನವೆಂಬರ್ 27, 2020
19 °C

‘ಧೃತಿಗೆಡಬೇಕಾದ ಅಗತ್ಯವಿಲ್ಲ’–ಎಚ್‌.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: ರಾಜಕೀಯ ಪಕ್ಷಗಳಿಗೆ ಉಪ ಚುನಾವಣೆಗಳ ಫಲಿತಾಂಶ ಭವಿಷ್ಯದ ಮಾನದಂಡ ಅಲ್ಲ. ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದಿಂದ ಧೃತಿಗೆಡಬೇಕಾದ ಅಗತ್ಯವಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಉಪ ಚುನಾವಣೆ ಫಲಿತಾಂಶ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಅವರು, ‘ಉಪ ಚುನಾವಣೆ ಹೇಗೆ ನಡೆಯಿತು ಎಂಬುದನ್ನು ಪರಾಮರ್ಶಿಸಲು ಹೋಗುವುದಿಲ್ಲ. ಜನತಾ ಜನಾರ್ದನ ನೀಡಿರುವ ತೀರ್ಪಿಗೆ ತಲೆ ಬಾಗಿದ್ದೇನೆ’ ಎಂದಿದ್ದಾರೆ.

‘ಹಿಂದೆ ಒಮ್ಮೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೇ ಚುನಾವಣೆಯಲ್ಲಿ ಜನರು ಮನ್ನಣೆ ನೀಡಿರಲಿಲ್ಲ. ನಮ್ಮ ಪಕ್ಷ ಕೇವಲ ಎರಡು ಸ್ಥಾನಗಳನ್ನು ಗಳಿಸಿದ್ದ ಕಾಲವಿತ್ತು. ನಂತರ ಅದೇ ಜನರು ಮುಖ್ಯಮಂತ್ರಿ ಸ್ಥಾನ ನೀಡಿದರು. ಜನರ ಆಶೀರ್ವಾದಿಂದ ಪ್ರಧಾನಿಯೂ ಆದರು. ಈ ಫಲಿತಾಂಶದಿಂದ ಕುಗ್ಗಿ ಹೋಗದೆ ಪಕ್ಷ ಸಂಘಟನೆಗೆ ಗಮನಹರಿಸುತ್ತೇನೆ’ ಎಂದು ಹೇಳಿದ್ದಾರೆ.

ರಾಜ್ಯ ನಾಯಕರ ಹೆಸರೆತ್ತದ ಯತ್ನಾಳ

ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಹರ್ಷ ವ್ಯಕ್ತಪಡಿಸಿರುವ ಶಾಸನ ಬಸನಗೌಡ ಪಾಟೀಲ ಯತ್ನಾಳ, ರಾಜ್ಯದ ಉಪಚುನಾವಣೆಯ ಗೆಲುವಿಗೆ ರಾಜ್ಯದ ಯಾವುದೇ ನಾಯಕರನ್ನು ಅಭಿನಂದಿಸಿಲ್ಲ.

ಈ ಗೆಲುವಿಗೆ ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಹೆಸರನ್ನು ತಮ್ಮ ಟ್ವೀಟ್‌ನಲ್ಲಿ ಪ್ರಸ್ತಾಪಿಸಿಲ್ಲ.

ಅಭಿವೃದ್ಧಿಗಾಗಿ ಮತ: ರವಿಕುಮಾರ್‌

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಿರಾ ಕ್ಷೇತ್ರದ ಅಭಿವೃದ್ಧಿ ಮಾಡಿರಲಿಲ್ಲ. ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿರಲಿಲ್ಲ. ಅಲ್ಲಿನ ಹಟ್ಟಿಗಳ ಸುಧಾರಣೆ ಮಾಡಿ ರಲಿಲ್ಲ. ಈ ಎಲ್ಲ ವಿಷಯಗಳನ್ನೂ ಜನರಿಗೆ ಮನವರಿಕೆ ಮಾಡಿ ಬಿಜೆಪಿಗೆ ಅವಕಾಶ ನೀಡುವಂತೆ ಕೋರಿದ್ದೆವು. ಅದಕ್ಕೆ ಮತದಾರರು ಮನ್ನಣೆ ನೀಡಿ ದರು ಎಂದು ಬಿಜೆಪಿ ಪ್ರಧಾನಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದ್ದಾರೆ.

ಈ ಕ್ಷೇತ್ರದಲ್ಲಿ ವಿವಿಧ 22 ಸಮುದಾಯಗಳ ಸಭೆಗಳನ್ನು ನಡೆಸಲಾಯಿತು. ಎಲ್ಲ ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿ ಅಭ್ಯರ್ಥಿಯ ಗೆಲುವಿಗಾಗಿ ಮನವಿ ಮಾಡಿದೆವು. ಮೂರು ಬಾರಿ ಬೂತ್‌ ಕಾರ್ಯಕರ್ತರ ಸಭೆಗಳನ್ನು ನಡೆಸಿದೆವು. ನಾಯಕರು ಮತ್ತು ಕಾರ್ಯಕರ್ತರು ಹಲಿರುಳೆನ್ನದೇ ಐತಿಹಾಸಿಕ ಗೆಲುವಿಗೆ ಶ್ರಮಿಸಿದರು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು