ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಆರೋಗ್ಯ - ಕ್ಷೇಮ; ಅಮೃತ ಯೋಜನೆಗಳಿಗೆ ಒಪ್ಪಿಗೆ

ರಾಜ್ಯದ 2,859 ಆರೋಗ್ಯ ಉಪ ಕೇಂದ್ರಗಳು ಮೇಲ್ದರ್ಜೆಗೆ
Last Updated 19 ಆಗಸ್ಟ್ 2021, 21:45 IST
ಅಕ್ಷರ ಗಾತ್ರ

ಬೆಂಗಳೂರು: ಜನರಿಗೆ ಆರೋಗ್ಯ ಸೇವೆಯ ಜತೆಗೆ ಕ್ಷೇಮವನ್ನೂ ಕಲ್ಪಿಸುವ ಆಶಯದಡಿ ರಾಜ್ಯದ 2,859 ಆರೋಗ್ಯ ಉಪಕೇಂದ್ರಗಳನ್ನು ‘ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳನ್ನಾಗಿ ಮೇಲ್ದರ್ಜೆಗೇರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.

ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ,ಈ ಉದ್ದೇಶಕ್ಕಾಗಿ ₹478.91 ಕೋಟಿ ವ್ಯಯಿಸಲು ಅನುಮೋದನೆ ನೀಡಲಾಗಿದೆ ಎಂದರು.

‘ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಆರೈಕೆ ನಿಯಮ– 2021’ ಕ್ಕೂ ಸಂಪುಟ ಒಪ್ಪಿಗೆ ನೀಡಿದೆ.

ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಮತ್ತು ಸೇವೆಗಳ ವಿತರಣೆ ಸಮಯದಲ್ಲಿ ಅವರ ಹಕ್ಕುಗಳ ರಕ್ಷಣೆ ಹಾಗೂ ಉತ್ತೇಜನ ನೀಡಲು ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ 2017 ರ ಅನ್ವಯ ಕರಡು ನಿಯಮಗಳನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ಸಿಕ್ಕಿದ್ದು, ಸಂಪುಟ ಸಭೆ ಅದನ್ನು ಅನುಮೋದಿಸಿತು ಎಂದು ಮಾಧುಸ್ವಾಮಿ ವಿವರಿಸಿದರು.

ಸಿ.ಎಂಗೆ ಅಧಿಕಾರ:
ಸಂಪುಟ ಉಪಸಮಿತಿಗಳನ್ನು ಪುನರ್‌ ರಚನೆ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಗಿದೆ. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಉಪಸಮಿತಿಗಳೂ ರದ್ದಾಗಿದ್ದವು. ಒಟ್ಟು 14 ಸಂಪುಟ ಉಪಸಮಿತಿಗಳನ್ನು ಪುನರ್‌ ರಚಿಸಲಾಗುವುದು ಎಂದು ಹೇಳಿದರು.

ಕಲಬುರ್ಗಿ ಜಿಲ್ಲೆ ಆಳಂದದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ₹12.48 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪಾರಂಪರಿಕ ತ್ಯಾಜ್ಯ ನಿರ್ವಹಣೆಗಾಗಿ ಸಲ್ಲಿಸಿರುವ ₹73.73 ಕೋಟಿ ವಿಸ್ತೃತ ಯೋಜನಾ ವರದಿ ತಯಾರಿಸಲು ಅನುಮೋದನೆ ನೀಡಲಾಗಿದೆ.

ಹೆಣ್ಣು ಮಕ್ಕಳಿಗೆ ನ್ಯಾಪ್‌ಕಿನ್‌:
ಚಾಲ್ತಿಯಲ್ಲಿರುವ ‘ಶುಚಿ’ ಕಾರ್ಯಕ್ರಮದಡಿ 2021–22 ನೇ ಸಾಲಿಗೆ ಸರ್ಕಾರಿ ಮತ್ತು ಅನುದಾನಿತ ಶಾಲಾ– ಕಾಲೇಜುಗಳ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಪ್ಯಾಡ್‌ಗಳನ್ನು ಆರೋಗ್ಯ ಇಲಾಖೆಯ ಮೂಲಕ ವಿತರಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಪ್ರತಿ ಹೆಣ್ಣುಮಕ್ಕಳಿಗೆ ತಲಾ 10 ನ್ಯಾಪ್‌ಕಿನ್‌ ಪ್ಯಾಡ್‌ ನೀಡಲಿದ್ದು, ₹47 ಕೋಟಿ ವೆಚ್ಚದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ಪ್ಯಾಡ್‌ಗಳನ್ನು ಖರೀದಿಸಲಾಗುವುದು ಎಂದು ಸಚಿವರು ತಿಳಿಸಿದರು.

ಅಮೃತ ಯೋಜನೆಗಳಿಗೆ ಒಪ್ಪಿಗೆ:

75ನೇ ಸ್ವಾತಂತ್ರ್ಯ ದಿನಾಚರಣೆಯಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದ ‘ಅಮೃತ ಯೋಜನೆ’ಯ ಕೆಲ ಕಾರ್ಯಕ್ರಮಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ತಕ್ಷಣದಿಂದಲೇ ಇವು ಜಾರಿಗೆ ಬರಲಿವೆ.

* 75 ನಗರಗಳಲ್ಲಿ ‘ಅಮೃತ ನಿರ್ಮಲ ನಗರ ಯೋಜನೆ’ ಜಾರಿಗೆ ₹75 ಕೋಟಿ ಬಿಡುಗಡೆಗೆ ಒಪ್ಪಿಗೆ. ಪ್ರತಿ ಸ್ಥಳೀಯ ಸಂಸ್ಥೆಗೆ ತಲಾ ₹1 ಕೋಟಿ.

*750 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ‘ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ’ಗಾಗಿ ₹ 150 ಕೋಟಿ.

*‘ಅಮೃತ ಅಂಗನವಾಡಿ ಕೇಂದ್ರ ಯೋಜನೆ’ಯಡಿ 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿ. ಪ್ರತಿ ಅಂಗನವಾಡಿಗೆ ₹1 ಲಕ್ಷಗಳಂತೆ, ₹150 ಕೋಟಿ ಅನುದಾನ.

* ‘ಅಮೃತ ಸ್ವಸಹಾಯ ಯೋಜನೆ’ಯಡಿ ಕಿರು ಉದ್ಯಮ ಸಂಸ್ಥೆಗಳಾಗಿ 7,500 ಸ್ವಸಹಾಯ ಗುಂಪುಗಳ ಅಭಿವೃದ್ಧಿ. ತಲಾ ₹ 1 ಲಕ್ಷ ಮೂಲಧನ ನೀಡಲಾಗುವುದು. ಇದಕ್ಕಾಗಿ ₹ 75 ಕೋಟಿ.

ಆನಂದ್‌ ಸಿಂಗ್‌ ಗೈರು

ಖಾತೆಯ ಬಗ್ಗೆ ಅಸಮಾಧಾನಗೊಂಡು ಇನ್ನೂ ಇಲಾಖೆ ಅಧಿಕಾರ ವಹಿಸಿಕೊಳ್ಳದಿರುವ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಸಂಪುಟ ಸಭೆಗೆ ಹಾಜರಾಗಿರಲಿಲ್ಲ. ನೂತನ ಸಚಿವರಿಗೆ ಖಾತೆಗಳ ಹಂಚಿಕೆಯ ಬಳಿಕ ನಡೆದ ಮೊದಲ ಸಂಪುಟ ಸಭೆ ಇದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT