ಶುಕ್ರವಾರ, ಮೇ 14, 2021
31 °C
ಕ್ರೀಡಾ ಇಲಾಖೆ, ರಾಜೀವ್ ಗಾಂಧಿ ವಿವಿ ನಡುವೆ ಒಪ್ಪಂದ

ರಾಜ್ಯದ ಕ್ರೀಡಾಪಟುಗಳ ಆರೋಗ್ಯ ರಕ್ಷಣೆಗೆ ತಜ್ಞರ ಮಾರ್ಗದರ್ಶನ: ಸಚಿವ ಕೆ. ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ರಾಜ್ಯದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಇಂಥವರಿಗೆ ಸರಿಯಾದ ತರಬೇತಿ, ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರ ಸಲಹೆ ಪಡೆಯುವ ಕಾರ್ಯಕ್ರಮ ರೂಪಿಸಲಾಗಿದೆ' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. 

ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಧಾಕರ್ ಅವರ ಉಪಸ್ಥಿತಿಯಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಕ್ರೀಡಾ ವಿಜ್ಞಾನ ಕೇಂದ್ರಗಳ ನಡುವೆ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಯಿತು 

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿರುವ ರಾಜ್ಯದ 34 ಕ್ರೀಡಾ ವಸತಿನಿಲಯದ ಕ್ರೀಡಾಪಟುಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ. . 

ನಂತರ ಮಾತನಾಡಿದ ಅವರು, 'ಯುವಜನರಿಗೆ ಕ್ರೀಡಾ ಚಟುವಟಿಕೆ ಬಹಳ ಮುಖ್ಯ. ಮಕ್ಕಳಿಗೆ ದೈಹಿಕ ಆರೋಗ್ಯ ಸದೃಢವಾಗಿರಿಸಿಕೊಳ್ಳಲು ಕ್ರೀಡೆ ಅಗತ್ಯ. ಕ್ರೀಡೆಯಲ್ಲಿ ತೊಡಗಿಸಿಕೊಂಡವರು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬೇಕು. ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ರಾಜ್ಯದ ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ' ಎಂದರು. 

'ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರಿಂದ ಆರಂಭವಾಗಿ, ಯಾವ ವ್ಯಕ್ತಿಯ ದೇಹಕ್ಕೆ ಯಾವ ರೀತಿ ಚಟುವಟಿಕೆ ಬೇಕು ಎಂಬ ಬಗ್ಗೆ ವಿಶ್ಲೇಷಣೆ ಮಾಡಿ, ಸಲಹೆ ನೀಡಲಾಗುತ್ತದೆ' ಎಂದು ಅವರು ತಿಳಿಸಿದರು. 

'130 ಕೋಟಿ ಜನರಿರುವ ದೇಶದಲ್ಲಿ ಒಲಿಂಪಿಕ್ಸ್ ಮೊದಲಾದ ಕ್ರೀಡಾಸ್ಪರ್ಧೆಗಳಲ್ಲಿ ಎಷ್ಟು ಪದಕ ಪಡೆಯುತ್ತಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ನಮ್ಮಲ್ಲಿ ಎಲ್ಲ ರೀತಿಯ ಪ್ರತಿಭಾವಂತರಿದ್ದಾರೆ. ಆದರೆ ಇಂತಹವರಿಗೆ ಸರಿಯಾದ ತರಬೇತಿ, ಮಾರ್ಗದರ್ಶನ ನೀಡಬೇಕಿದೆ. ಕ್ರೀಡಾ ಇಲಾಖೆಯವರು ಮಕ್ಕಳಲ್ಲಿ ಹೊಸತನ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನೆರವು ಪಡೆಯಲಾಗುತ್ತಿದೆ. 34 ಕ್ರೀಡಾ ವಸತಿ ಶಾಲೆಗಳ ಮಕ್ಕಳು ಇದರ ಸದುಪಯೋಗ ಪಡೆಯಬೇಕು. ಇಂಥ ಒಳ್ಳೆಯ ಉದ್ದೇಶದಿಂದ ಉತ್ತಮ ಫಲಿತಾಂಶ ದೊರೆಯಲಿದೆ. ನಮ್ಮ ರಾಜ್ಯದ ಮಕ್ಕಳು ವೈಯಕ್ತಿಕವಾಗಿ ಹಾಗೂ ದೇಶಕ್ಕಾಗಿ ಹೆಸರು ತಂದು ಕೀರ್ತಿ ಸಂಪಾದಿಸಲು ಇದು ನೆರವಾಗಲಿದೆ ಎಂದರು. 

ಒಪ್ಪಂದ: 30 ಜಿಲ್ಲೆಗಳ ಕ್ರೀಡಾ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ, ಆರೋಗ್ಯ ಶಿಕ್ಷಣ, ಆರೋಗ್ಯ ಮಾಹಿತಿ, ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಸಹಕಾರಿ. 

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಲವಾರು ಸಂಶೋಧನೆ, ಚಿಕಿತ್ಸೆಗಳಿಗೆ ಜನಪ್ರಿಯ. ಈ ಸಂಸ್ಥೆಯ ತಜ್ಞರನ್ನು ಬಳಸಿಕೊಂಡು ಕ್ರೀಡಾಪಟುಗಳಿಗೆ ಆರೋಗ್ಯ ಮಾರ್ಗದರ್ಶನ ನೀಡಲಾಗುತ್ತದೆ. 

ಪ್ರತಿ ದಿನ ವೈದ್ಯಕೀಯ ತಪಾಸಣೆ, ಗಾಯಗಳ ಬಗ್ಗೆ ಮಾಹಿತಿ ಹಾಗೂ ಚಿಕಿತ್ಸಾ ವಿಧಾನ, ಆರೋಗ್ಯವನ್ನು ಸದಾ ಉತ್ತಮವಾಗಿರಿಸಿಕೊಳ್ಳಲು ಅನುಸರಿಸಬೇಕಾದ ಕ್ರಮ, ಪೌಷ್ಠಿಕ ಆಹಾರ ಸೇವನೆ, ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳುವುದು ಮೊದಲಾದವುಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಪ್ರತಿ ಜಿಲ್ಲೆಗಳಲ್ಲಿ ,ವೈದ್ಯಕೀಯ ಕಾಲೇಜುಗಳ ವಿವಿಧ ವಿಭಾಗಗಳ ತಜ್ಞರ ಸಹಾಯವನ್ನು ವಸತಿ ಶಾಲೆಗಳು ಪಡೆಯಬಹುದು. ಕ್ರೀಡಾಪಟುಗಳ ಆರೋಗ್ಯ ತಪಾಸಣೆ ಮಾಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು