ಭಾನುವಾರ, ಆಗಸ್ಟ್ 14, 2022
28 °C

ರಾಜ್ಯದ ವಿವಿಧೆಡೆ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಕರಾವಳಿ ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ. ಕೆಲವೆಡೆ ವಿದ್ಯುತ್‌ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿ ಜನರು ಪರದಾಡಬೇಕಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಉತ್ತಮ ಮಳೆ ಸುರಿಯಿತು. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾಲ್ಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 14 ಮನೆಗಳಿಗೆ ಹಾನಿಯಾಗಿದೆ. ಮೂಲ್ಕಿ ರೈಲು ನಿಲ್ದಾಣ ಸಮೀಪ ಮರ ಬಿದ್ದು ವಿದ್ಯುತ್‌ ಪರಿವರ್ತಕ ಸಹಿತ 8 ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಪಕ್ಷಿಕೆರೆ ಸಮೀಪದ ಪಂಜ ಬಳಿ ಮರ ಬಿದ್ದು, ಏಳು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಬಿರುಸಿನ ಮಳೆಗೆ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ನಿಟ್ಟೆ, ಮಿಯಾರು, ಕಾಂತಾವರ, ಮಾಳ ಗ್ರಾಮದಲ್ಲಿ 9 ಮನೆಗಳಿಗೆ ಹಾನಿಯಾಗಿದೆ. ಕಾಪು ತಾಲ್ಲೂಕಿನ ನಂದಿಕೂರು, ಪಡು, ಮಲ್ಲಾರು, ತೆಂಕು, ನಾಡ್ಸಾಲು ಗ್ರಾಮಗಳಲ್ಲಿ 6 ಮನೆಗಳ ಮೇಲೆ ಮರ ಬಿದ್ದಿವೆ. ಬೈಂದೂರು, ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಉಡುಪಿ ತಾಲ್ಲೂಕುಗಳಲ್ಲಿ ಮಳೆಯಾಗಿದೆ. 

ಕಾಫಿನಾಡಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಎನ್‌.ಆರ್‌.ಪುರ, ಕೊಟ್ಟಿಗೆಹಾರ, ಶೃಂಗೇರಿ ಭಾಗದಲ್ಲಿ ಮಳೆ ಬಿರುಸಾಗಿ ಸುರಿದಿದೆ. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ತರೀಕೆರೆ ಭಾಗದಲ್ಲಿ ಸಾಧಾರಣವಾಗಿ ಸುರಿದಿದೆ. ಮಳೆಯೊಂದಿಗೆ ಗಾಳಿಯ ಆರ್ಭಟವೂ ಜೋರಾಗಿ ಇತ್ತು.  ಹೇಮಾವತಿ, ಭದ್ರಾ, ಸೋಮವಾಹಿನಿ ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಕೊಡಗು ಜಿಲ್ಲೆಯಲ್ಲಿ ಭಾನುವಾರ ದಿನವಿಡೀ ಧಾರಾಕಾರ ಮಳೆಯಾಗಿದೆ. ನಾಪೋಕ್ಲು ಭಾಗದಲ್ಲಿ ನಿರಂತರ ಗಾಳಿ, ಮಳೆಗೆ ಮರಗಳು ವಿದ್ಯುತ್‌ ಕಂಬಗಳ ಮೇಲೆ ಉರುಳಿದ್ದು, ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಸೋಮವಾರಪೇಟೆಯ ಬಿ.ಟಿ ಕಟ್ಟೆ ಹಾಗೂ ಶನಿವಾರಸಂತೆ ಸಮೀಪದ ಗುಡುಗಳಲೆಯಲ್ಲಿ ರಸ್ತೆಗೆ ಉರುಳಿದ್ದ ಬೃಹತ್‌ ಮರಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ.

ಉತ್ತರ ಕನ್ನಡ, ವಿಜಯನಗರ, ವಿಜಯಪುರ ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ. ಕರಾವಳಿಯಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಕಾರವಾರ ನಗರದಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರ ದಿನವಿಡೀ ಆಗಾಗ ಜೋರಾಗಿ ಮಳೆಯಾಯಿತು.

ಅಂಕೋಲಾದಲ್ಲಿ ಜೋರಾಗಿ ಗಾಳಿಯೂ ಜೊತೆಯಾಗಿತ್ತು. ಉಳಿದಂತೆ, ಕರಾವಳಿ ತಾಲ್ಲೂಕುಗಳಲ್ಲಿ ಬೆಳಿಗ್ಗೆಯಿಂದಲೇ ದಟ್ಟವಾದ ಮೋಡ ಕವಿದು ಬಿಟ್ಟುಬಿಟ್ಟು ಮಳೆ ಬಂತು. ಹೊಸಪೇಟೆ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ  ಉತ್ತಮ ಮಳೆಯಾಗಿದೆ.  

ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ ಹಲವಡೆ ಜೋರು ಮಳೆಯಾಗಿದ್ದು, ವಿವಿಧೆಡೆ ಬಿಡುವು ನೀಡದೆ ನಿರಂತರವಾಗಿ ಮಳೆ ಸುರಿದಿದೆ.

ತೀರ್ಥಹಳ್ಳಿ, ಸಾಗರ, ಹೊಸನಗರ ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಭದ್ರಾವತಿ, ಶಿಕಾರಿಪುರ ತಾಲ್ಲೂಕಿನಲ್ಲಿ ಚದುರಿದಂತೆ ಮಳೆ ಸುರಿದಿದೆ. 

ಚಿತ್ರದುರ್ಗ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ದಾವಣಗೆರೆ ನಗರ ಸೇರಿ ಜಗಳೂರು, ನ್ಯಾಮತಿ, ತ್ಯಾವಣಗಿ, ಮಲೇಬೆನ್ನೂರು ಹಾಗೂ ಹರಪನಹಳ್ಳಿಯಲ್ಲಿ ಮಳೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು