ಗುರುವಾರ , ಜುಲೈ 29, 2021
27 °C

ರಾಜ್ಯದಲ್ಲಿ ಮುಂದುವರಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸೋಮವಾರ ಉತ್ತಮ ಮಳೆ ಆಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ನದಿಗೆ ಬಿದ್ದಿದ್ದಾರೆ.

ಭಟ್ಕಳ ತಾಲ್ಲೂಕಿನ ಮುಂಡಳ್ಳಿಯಲ್ಲಿ ಶ್ರೀಧರ ದೇವಾಡಿಗ (40) ಎಂಬುವವರು ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಅವರ ರಕ್ಷಣೆಗೆ ಮೀನುಗಾರರು ಪ್ರಯತ್ನಿಸಿದರೂ ನದಿ ಉಕ್ಕಿ ಹರಿಯುತ್ತಿರುವ ಕಾರಣ ಸಾಧ್ಯವಾಗಲಿಲ್ಲ.

ಅಗ್ನಿ ಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜೋರು ಮಳೆಯಾಗಿದೆ. ಹುಬ್ಬಳ್ಳಿ– ಧಾರವಾಡ, ಬೆಳಗಾವಿ, ವಿಜಯಪುರದಲ್ಲಿ ಸಾಧಾರಣ ಮಳೆಯಾಗಿದೆ.

ಉತ್ತಮ ಮಳೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 2.4 ಸೆಂ.ಮೀ. ಮಳೆ ದಾಖಲಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ ಒಟ್ಟು 9 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.

ಚಿಕ್ಕಮಗಳೂರು, ಗಿರಿ ಶ್ರೇಣಿ, ಮೂಡಿಗೆರೆ, ಕೊಟ್ಟಿಗೆಹಾರ, ಕೊಪ್ಪ, ಎನ್‌.ಆರ್‌.ಪುರ. ಶೃಂಗೇರಿ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ.

ಜಲಾಶಯಗಳ ಒಳಹರಿವು ಹೆಚ್ಚಳ: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳ ಒಳಹರಿವು ಹೆಚ್ಚಾಗಿದೆ.

ಹೊಸನಗರ, ತೀರ್ಥಹಳ್ಳಿ, ಸಾಗರ, ಭದ್ರಾವತಿ, ಶಿಕಾರಿಪುರ, ಸೊರಬದಲ್ಲಿ ಸೋಮವಾರ ಆಗಾಗ್ಗೆ ಜೋರಾಗಿ ಮಳೆ ಸುರಿಯಿತು. ಲಿಂಗನಮಕ್ಕಿ ಜಲಾಯಶಕ್ಕೆ 7,083 ಕ್ಯುಸೆಕ್‌, ಭದ್ರಾ ಜಲಾಶಯಕ್ಕೆ 3,339 ಕ್ಯುಸೆಕ್‌, ತುಂಗಾ ಜಲಾಶಯಕ್ಕೆ 4,842 ಕ್ಯುಸೆಕ್‌ ನೀರು ಹರಿದುಬರುತ್ತಿದೆ.

ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿದೆ. ಜಿಲ್ಲೆಯ ಕಾಗಿಣಾ ಮತ್ತು ಕಮಲಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಮಲಾಪುರ ತಾಲ್ಲೂಕಿನ ಬೆಣ್ಣೆತೊರಾ, ಗಂಡೋರಿ ನಾಲಾ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳ ವಿವಿಧೆಡೆ ತುಂತುರು ಮಳೆ ಸುರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು