ಬುಧವಾರ, ಆಗಸ್ಟ್ 10, 2022
23 °C
ನೂರಾರು ಎಕರೆ ಭತ್ತದ ಬೆಳೆ ಜಲಾವೃತ

ಉತ್ತರ ಕರ್ನಾಟಕದ ಹಲವೆಡೆ ಮಳೆ ಅಬ್ಬರ: ಪ್ರವಾಹ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಉತ್ತರ ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಶುಕ್ರವಾರವೂ ಮಳೆ ಮುಂದುವರಿದೆ. ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮತ್ತು ಚಿಕ್ಕೋಡಿ ತಾಲ್ಲೂಕಿನ ನದಿ ಜಲಾನಯನ ಪ್ರದೇಶಗಳಲ್ಲಿ ಮಳೆ ಅಬ್ಬರ ಹೆಚ್ಚಿದ್ದು, ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಾಗಿದೆ.

ಬೆಳಗಾವಿ ಜಿಲ್ಲೆಯ ಹಲವೆಡೆ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿರುವುದರಿಂದ ನದಿಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನೂರಾರು ಎಕರೆ ಭತ್ತದ ಬೆಳೆಗಳು ನೀರಲ್ಲಿ ಮುಳುಗಿವೆ. ಖಾನಾಪುರ ತಾಲ್ಲೂಕಿನ ಹಬ್ಬಾನಟ್ಟಿ ಹೊರವಲಯದ ಮಲಪ್ರಭಾ ನದಿ ದಡದಲ್ಲಿರುವ ಆಂಜನೇಯ ದೇವಸ್ಥಾನ ಮುಳುಗಿದೆ. 

‘ದೂಧ್‌ಗಂಗಾ ನದಿಯಿಂದ 24,640 ಕ್ಯುಸೆಕ್ ಮತ್ತು ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 72,625 ಕ್ಯುಸೆಕ್ ಸೇರಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 97,265 ಕ್ಯುಸೆಕ್ ನೀರು ಸೇರಿಕೊಳ್ಳುತ್ತಿದೆ. ಮಹಾರಾಷ್ಟ್ರದ ಯಾವುದೇ ಜಲಾಶಯದಿಂದ ಇನ್ನೂ ನೀರು ಬಿಡುಗಡೆ ಮಾಡಿಲ್ಲ. ಮಳೆ ನೀರು ಮಾತ್ರ ಹರಿದು ಬರುತ್ತಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕಿನಲ್ಲಿ 9 ಸೇತುವೆಗಳು ಮುಳುಗಡೆಯಾಗಿವೆ. ವಾಹನ ಮತ್ತು ಜನ ಸಂಚಾರಕ್ಕೆ ಪರ್ಯಾಯ ಮಾರ್ಗಗಳಿವೆ. ನಿಪ್ಪಾಣಿ ತಾಲ್ಲೂಕಿನ ಕಾರದಗಾದ ಬಂಗಾಲಿ ಬಾಬಾ ದೇವಸ್ಥಾನ ಜಲಾವೃತವಾಗಿದೆ.

ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳೂ ಮೈದುಂಬಿ ಹರಿಯುತ್ತಿವೆ. ಅಲ್ಲಲ್ಲಿ ಬೆಳೆಗಳು ಜಲಾವೃತವಾಗಿವೆ. ಘಟಪ್ರಭಾ ಜಲಾಶಯಕ್ಕೆ 33,732 ಕ್ಯುಸೆಕ್ ಒಳಹರಿವಿತ್ತು. ಮಲಪ್ರಭಾ ಜಲಾಶಯಕ್ಕೆ ಒಳಹರಿವು ದ್ವಿಗುಣಗೊಂಡಿದೆ. ಸದ್ಯ, 2,625 ಕ್ಯುಸೆಕ್ ಒಳಹರಿವಿದೆ.

ಘಟಪ್ರಭಾ ನದಿ ನೀರಿನಿಂದಾಗಿ ಬಾಗಲಕೋಟೆ ಜಿಲ್ಲೆಯ ಮಾಚಕನೂರ ಗ್ರಾಮದ ಹೊಳೆಬಸವೇಶ್ವರ ದೇವಾಲಯ ಜಲಾವೃತ
ಗೊಂಡಿದೆ. ಮಾಚಕನೂರ ಬ್ಯಾರೇಜ್ ಹೊರತು ಪಡಿಸಿ 10 ಬ್ಯಾರೇಜ್ ಮುಳುಗಡೆಯಾಗಿವೆ.

ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಒಳಹರಿವು ಶುಕ್ರವಾರ ಸಂಜೆ 1.22 ಲಕ್ಷ ಕ್ಯುಸೆಕ್ ದಾಟಿದೆ. ಶುಕ್ರವಾರ ಒಂದೇ ದಿನ ಜಲಾಶಯಕ್ಕೆ 3.2 ಟಿಎಂಸಿ ಅಡಿ ನೀರು ಹರಿದು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು